ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಈ ದೇಗುಲದ ಗರ್ಭಗುಡಿ ದೇವರಿಗೆ ಭಕ್ತರಿಂದಲೇ ಪೂಜೆ...

Srinivasa Murthy VN
Updated On : 15 Nov 2013, 12:48 pm

- ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ:
  ಹಲವು ವೈಶಿಷ್ಟ್ಯತೆಯಗಳ ಆಗರ ಎನಿಸಿರುವ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀನೆಲದಾಂಜನೇಯಸ್ವಾಮಿ ದೇವಾಲಯ ಜೀರ್ಣೋದ್ಧಾರಗೊಂಡಿದೆ. ಭಕ್ತಾದಿಗಳ ಸಹಕಾರದಲ್ಲಿ ಶ್ರೀನೆಲದಾಂಜನೇಯಸ್ವಾಮಿ ಸೇವಾ ಸಮಿತಿ ಈ ಮಹತ್ವದ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದೆ. ದೊಡ್ಡಬಳ್ಳಾಪುರದ ಸ್ಥಳ-ನಾಮ ಉಗಮದ ವಿಶೇಷತೆಯೊಂದಿಗೆ ಬೆರೆತಿರುವ ಈ ದೇಗುಲ ಶತಮಾನಗಳಷ್ಟು ಸುದೀರ್ಘ ಇತಿಹಾಸ ಹೊಂದಿದೆ.
ವಿಶೇಷತೆಗಳ ಆಗರ ಈ ದೇವಾಲಯದಲ್ಲಿ ಭಕ್ತ ಮತ್ತು ದೇವರ ನಡುವೆ ಪೂಜಾರಿಗಳಿಲ್ಲ. ಭಕ್ತರೇ ನೇರವಾಗಿ ಗರ್ಭಗುಡಿ ಪ್ರವೇಶಿಸಿ ಮೂಲ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಬಹುಮುಖ್ಯವಾಗಿ ಈ ದೇವಾಲಯದಲ್ಲಿ ಅಸಮಾನತೆಯ ಕುರುಹೂ ಇಲ್ಲ. ಚಿಂದಿ ಆಯುವ ನಿರ್ಗತಿಕನಿಂದ ಹಿಡಿದು, ಸಿರಿವಂತನವರೆಗೆ ಎಲ್ಲರೂ ಸಮಾನರು. ಎಲ್ಲರಿಗೂ ಗರ್ಭಗುಡಿ ಪ್ರವೇಶವಿದೆ. ಜಾತಿ-ಧರ್ಮಗಳ ಅಂತರ ಭೇದವಿಲ್ಲದೆ ಎಲ್ಲರೂ ಈ ದೇಗುಲಕ್ಕೆ ಬಂದು ಹೋಗುತ್ತಾರೆ. ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಸಮೀಪವೇ ಈ ದೇಗುಲವಿದೆ.
ಊರಿನ ಬಹುಪಾಲು ವರ್ತಕರು, ಮಹಿಳೆಯರಿಗೆ ಈ ಹನುಮ ಆರಾಧ್ಯ ದೈವ. ತಮ್ಮ ವ್ಯಾಪಾರ-ವಹಿವಾಟು ಆರಂಭಿಸುವ ಮುನ್ನ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಬೇಡುವುದು ರೂಢಿ. ಹೀಗಾಗಿ ಈ ದೇಗುಲ ಸಂಕಷ್ಟಗಳ ನಿವಾರಿಸುವ ತಾಣವಾಗಿಯೂ ಹೆಸರುಗಳಿಸಿದೆ.
ಇತಿಹಾಸ: ನೆಲ ಅಗೆಯುವಾಗ ದೊರೆತ ಶಿಲಾಮೂರ್ತಿ ಇದಾಗಿರುವುದರಿಂದ ಇದಕ್ಕೆ ನೆಲದಾಂಜನೇಯ ಎಂಬ ಹೆಸರು ಬಂದಿದೆ ಎಂಬ ಐತಿಹ್ಯವಿದೆ. ಮಣ್ಣಿನ ಗುಡ್‌ಡೆಯ ಕೆಳಗೆ ಆವಿರ್ಭವಿಸಿದ್ದ ಈ ಮೂರ್ತಿ ಮತ್ತು ಗರ್ಭಗುಡಿಯ ಜಾಗ ಪತ್ತೆಯಾದದ್ದು ಹೀಗೆ. ನಂತರ ಇದು ಇಡೀ ನಗರದ ಆರಾಧ್ಯ ದೈವಸ್ಥಾನವಾಗಿ ಬೆಳೆಯಿತು. ಬಲ್ಲ ಮೂಲಗಳ ಪ್ರಕಾರ ಈ ದೇಗುಲಕ್ಕೆ 5 ಶತಮಾನಗಳಷ್ಟು ಸುದೀರ್ಘ ಇತಿಹಾಸವಿದೆ. ಆದರೆ ಎಲ್ಲೂ ಇತಿಹಾಸದ ಕುರಿತ ದಾಖಲೆಗಳು ಲಭ್ಯವಾಗುವುದಿಲ್ಲ.
ವಿಶಾಲ ಪ್ರಾಂಗಣ: ದೇವಾಲಯ ವಿಶಾಲ ಪ್ರಾಂಗಣ ಹೊಂದಿದೆ. ನೂರಾರು ನಾಗರ ಕಲ್ಲುಗಳನ್ನು ಹೊಂದಿರುವ ನಾಗರ ಕಟ್ಟೆ, ಅಶ್ವತ್ಥ ವೃಕ್ಷ, ವಿನಾಯಕ ಮಂದಿರ, ನವಗ್ರಹ ಮಂದಿರ, ಬನ್ನಿಮರ ಇತ್ಯಾದಿಗಳನ್ನು ಹೊಂದಿದೆ. ಇತ್ತೀಚೆಗೆ ದೇವಾಲಯದ ಮಹಾದ್ವಾರದಲ್ಲಿ 15 ಅಡಿ ಎತ್ತರದ ರಾಮಾಂಜನೇಯ ಆಲಿಂಗನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದಕ್ಕೆಂದೇ ರೂಪಗೊಂಡಿರುವ ಆಕರ್ಷಕ ಕಮಾನು ಗೋಪುರ ಜನಾಕರ್ಷಣೆಯ ಕೇಂದ್ರವಾಗಿದೆ.
3 ದಿನ ವಿಶೇಷ ಕಾರ್ಯಕ್ರಮ: ಶ್ರೀನೆಲದಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಳಶ ಪ್ರತಿಷ್ಠಾಪನೆ ಮತ್ತು ಪೂರ್ಣಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ನ.15ರಿಂದ 17ರವರೆಗೆ ನಡೆಯಲಿದೆ. ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ, ಗಾಯತ್ರಿಪೀಠ ಮಹಾಸಂಸ್ಥಾನ ಮಠದ ಶ್ರೀದಯಾನಂದಪುರಿ ಸ್ವಾಮೀಜಿ, ಪುಷ್ಪಾಂಡಜಮುನಿ ಆಶ್ರಮದ ಶ್ರೀದಿವ್ಯಜ್ಞಾನಾನಂದ ಸ್ವಾಮೀಜಿ ನೇತೃತ್ವದಲ್ಲಿ ಕುಂಭಾಭಿಷೇಕ, ರುದ್ರಸಹಿತ ಪಂಚಾಮೃತ ಅಭಿಷೇಕ, ಪ್ರಾಣ ಪ್ರತಿಷ್ಠಾಪನ, ಕಳಶ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement