ಕೊಲೆಗಡುಕ ಯುವಕ ಪೊಲೀಸರ ವಶಕ್ಕೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ. 14
2 ದಿನಗಳ ಹಿಂದೆ ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಡಹಗಲೇ ನಡೆದಿದ್ದ ಬರ್ಬರ ಕೊಲೆ ಪ್ರಕರಣದ ಆರೋಪಿ ಬಾಲಾಜಿ (22) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಇಲ್ಲಿನ ನಗರಸಭೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಅಮರನಾಥ ಬಹದ್ದೂರ್ ಸಿಂಗ್ ಅವರ ಪುತ್ರ ಎನ್ನಲಾಗಿದ್ದು, ಬಸ್ ನಿಲ್ದಾಣದಲ್ಲಿ ಚಿನ್ನಪ್ಪ ಎಂಬಾತನನ್ನು ಕೊಲೆ ಮಾಡಿ ಆತ ಪರಾರಿಯಾಗಿದ್ದ.
ನಂತರ ಪೊಲೀಸರ ಕಣ್ಣು ತಪ್ಪಿಸಿ ನಾಗರಕೆರೆ ಬಳಿಯಲ್ಲಿ ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಹೋದಾಗ ಆತ ಕೆರೆಯ ನೀರಿನಲ್ಲಿ ಧುಮುಕಿ ಪೊದೆಗಳಲ್ಲಿ ಅವಿತು ಪೊಲೀಸರಿಗೆ ಕಣ್ಣುತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಕೊನೆಗೂ ನಾಗರಿಕರ ಸಹಾಯದಿಂದ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಾದಕ ವ್ಯಸನ ಕೊಲೆಗೆ ಕಾರಣ: ಈ ಕೊಲೆಗೆ ಕಾರಣವಾದದ್ದು ಮಾದಕ ವ್ಯಸನ. ಆರೋಪಿಯ ವಿಚಾರಣೆಯಲ್ಲಿ ಈ ಸತ್ಯಾಂಶ ಹೊರಬಿದ್ದಿದೆ. ಮಾದಕ ವಸ್ತು (ಮತ್ತು ತರುವ ಸೆಲ್ಯೂಷನ್) ಸೇವನೆ ವಿಚಾರದಲ್ಲಿ 10 ದಿನಗಳ ಹಿಂದೆ ಚಿನ್ನಪ್ಪ ಮತ್ತು ಬಾಲಾಜಿ ನಡುವೆ ಜಗಳ ನಡೆದಿದ್ದು, ಬಾಲಾಜಿಗೆ ಚಿನ್ನಪ್ಪ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಸರ್ಕಾರಿ ಆಸ್ಪತ್ರೆಯಲ್ಲಿ ಆತ ಹೊರರೋಗಿಯಾಗಿ ಚಿಕಿತ್ಸೆ ಕೂಡ ಪಡೆದಿದ್ದ. ಮಂಗಳವಾರ ಮತ್ತೆ ಈ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆ ವೇಳೆಗಾಗಲೇ ಮಾದಕ ವಸ್ತು ಸೇವಿಸಿದ್ದ ಬಾಲಾಜಿ ತನ್ನ ಗೆಳೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಇಬ್ಬರೂ ಹೊಡೆದಾಡಿದ್ದಾರೆ. ಇಬ್ಬರ ಕೈಯಲ್ಲೂ ಚಾಕು ಇತ್ತು. ಜಗಳದಲ್ಲಿ ಆತ ಚಿನ್ನಪ್ಪನ ಕತ್ತುಕೊಯ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬಂಧನಕ್ಕೊಳಗಾದ ಬಾಲಾಜಿ ಬಳಿ ಹಲವು ಮಾದಕ ಸೆಲ್ಯೂಷನ್ ಬಾಟಲಿಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿ ಸೆಲ್ಯೂಷನ್ ಚಟಕ್ಕೆ ಬಿದ್ದಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ಗಮನಕ್ಕೆ ಬಂದಿದೆ. ವಿದ್ಯಾರ್ಥಿಗಳು ಕೂಡ ವೈಟ್ನರ್, ನೈಲ್ಪಾಲೀಷ್, ಸೇರಿದಂತೆ ಹಲವು ಸೆಲ್ಯೂಷನ್ಗಳನ್ನು ಬಳಕೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಗಂಭೀರ ಕ್ರಮದ ಅಗತ್ಯವಿದೆ ಎನ್ನುತ್ತಾರೆ ನಾಗರೀಕರು.