'ದೇಶ ರಾಮ ರಾಜ್ಯವನ್ನಾಗಿಸಲು ಮೋದಿ ಬೆಂಬಲಿಸಿ'
ರಾಮನಗರ: ಮೈಸೂರು ಅರಮನೆ ಆವರಣದಿಂದ ನ.12ರಂದು ಹೊರಟಿರುವ ದೇಶಕ್ಕಾಗಿ ನಡೆ ಅಭಿಯಾನವು ಗುರುವಾರ ನಗರಕ್ಕೆ ಆಗಮಿಸಿತು. ಜಿಲ್ಲಾ ಘಟಕದ ಪದಾಧಿಕಾರಿಗಳು ಸ್ವಾಗತಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಸ್.ಎ.ರಾಮದಾಸ್ ದೇಶವನ್ನು ರಾಮರಾಜ್ಯವನ್ನಾಗಿಸಲು ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ವಿಚ್ಛಿದ್ರಕಾರಕ ಶಕ್ತಿಗಳು ನಡೆಸುತ್ತಿರುವ ಭಯೋತ್ಪಾದನಾ ಕೃತ್ಯಗಳಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಇದರಲ್ಲಿ ಮುಸ್ಲಿಮರೂ ಸೇರಿದ್ದಾರೆ. ಪಾಕಿಸ್ತಾನದ ಐಎಸ್‌ಐ ಪ್ರೇರಿತ ಭಯೋತ್ಪಾದಕರು ಸ್ಫೋಟಿಸುವ ಬಾಂಬ್‌ಗಳಿಗೆ ಹಿಂದೂಗಳು, ಮುಸ್ಲಿಮರು ಎಂಬ ಭೇದ ಇರುವುದಿಲ್ಲ. ಎಲ್ಲಾ ಧರ್ಮದವರೂ ಸಾಯುತ್ತಾರೆ ಎಂದರು.
ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಅಂತಹವರು ಒಮ್ಮೆ ಗುಜರಾತ್‌ಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಖುದ್ದು ವೀಕ್ಷಿಸಿದರೆ ಸತ್ಯ ಅರಿವಾಗಲಿದೆ ಎಂದರು.
ಪಾಕಿಸ್ತಾನ ಮತ್ತು ಚೈನಾ ದೇಶಗಳು ದೇಶದ ಭದ್ರತೆಗೆ ಆತಂಕವನ್ನು ತಂದೊಡ್ಡಿವೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಇದನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿದೆ. ಇದರಿಂದಾಗಿ ಸುಮಾರು 80 ಸಾವಿರ ಚದರ ಕಿ.ಮೀ. ಭೂಪ್ರದೇಶ ಚೀನಾ ಆಕ್ರಮಿಸಿಕೊಂಡಿದೆ ಎಂದು ಹೇಳಿದರು.
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಮಿಜೋರಾಂ, ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್, ಮಣಿಪುರ ಸಿಕ್ಕಿಂ ಗಡಿ ಭಾಗದಿಂದ 20 ಕಿ.ಮೀ.ಗಳಿಗೂ ಹೆಚ್ಚು ಒಳ ನುಗ್ಗಿದ್ದಾರೆ. ಸುಮಾರು 3 ಕೋಟಿಗೂ ಹೆಚ್ಚು ಬಾಂಗ್ಲಾ ದೇಶೀಯರು ಭಾರತಕ್ಕೆ ಅಕ್ರಮವಾಗಿ ನುಸುಳಿ, ಎಲ್ಲ ಸವಲತ್ತುಗಳನ್ನು ಅನುಭವಿಸುತ್ತಾ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಒಡೆದು ಆಳುವ ನೀತಿ: ಹಿಂದೂ, ಮುಸ್ಲಿಮರ ನಡುವೆ ಜಾತಿ ವಿಷ ಬೀಜ ಬಿತ್ತುವ ಮೂಲಕ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಮಾಡಿಕೊಂಡು, ಸ್ವಾತಂತ್ಯ್ರಾನಂತರದ 67 ವರ್ಷಗಳಲ್ಲಿ ಬಹುಪಾಲು ಅಧಿಕಾರ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿದೆ ಎಂದು ರಾಮದಾಸ್ ಹೇಳಿದರು. ಒಂದು ಕುಟುಂಬದ ಕಪಿ ಮುಷ್ಟಿಯಿಂದ ದೇಶವನ್ನು ರಕ್ಷಿಸಬೇಕಿದೆ. ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ. ದೇಶದ ಒಳಿತಿಗಾಗಿ ಭಾರತವನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗೌಡ, ಶಿವಮಾಧು, ರುದ್ರದೇವರು, ಗಿರೀಶ್ ಪ್ರಸಾದ್, ಜಗದೀಶ್, ರತ್ನ, ಪುಷ್ಪಾವತಿ, ಧನರಾಜ್, ಮಲ್ಲಪ್ಪಗೌಡ, ಸೋಮಸುಂದರ್ ಮತ್ತಿತರರು ಹಾಜರಿದ್ದರು.