ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜನ್ಮ ದಿನ ರಜಾ ದಿನವಾಗಿ ಘೋಷಿಸಿ: ಸೋಮಸುಂದರ್

Srinivasa Murthy VN
Updated On : 15 Nov 2013, 12:49 pm

ರಾಮನಗರ: ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜನ್ಮ ದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿಸಿ, ರಜಾ ದಿನವನ್ನಾಗಿ ಘೋಷಿಸಬೇಕು ಎಂದು ಪ್ರಜಾ ವಿಮೋಚನಾ ಚಳವಳಿ (ಮಾನವತಾವಾದ) ರಾಜ್ಯ ಕಾರ್ಯದರ್ಶಿ ಎಸ್.ಸೋಮಸುಂದರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪ್ರಜಾ ವಿಮೋಚನಾ ಚಳವಳಿ ಜಿಲ್ಲಾ ಘಟಕ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಅವರ 263ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಅವರು ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಸರ್ವಧರ್ಮ ಸಹಿಷ್ಣುವಾಗಿದ್ದರು ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಜಾತ್ಯತೀತ ತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತಿದ್ದರು. ಇವರ ಆಳ್ವಿಕೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಜಾತಿ ಹೆಸರಿನಲ್ಲಿ ಭೇದ ಭಾವ ಮಾಡದೆ ಎಲ್ಲಾ ಜನಾಂಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾ ಪುರುಷರಾಗಿದ್ದಾರೆ ಎಂದರು.
ಬ್ರಿಟಿಷರನ್ನು ಭಾರತದಿಂದ ಓಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂಡುಕೊಡಬೇಕೆನ್ನುವುದು ಅವರ ಬಹುದೊಡ್ಡ ಕನಸಾಗಿತ್ತು. ಬ್ರಿಟಿಷರ ವಿರುದ್ಧ ಹಲವಾರು ಯುದ್ಧಗಳನ್ನು ಕೈಗೊಂಡಿದ್ದರು. ಆದರೆ, ನಮ್ಮವರೇ ಮಾಡಿದ ಕುತಂತ್ರದಿಂದ ಯುದ್ಧದಲ್ಲಿ ಸೋತು ಶರಣಾಗಬೇಕಾಯಿತು ಎಂದು ತಿಳಿಸಿದರು.
ಒತ್ತು ನೀಡಿದ್ದರು: ಟಿಪ್ಪು ಸುಲ್ತಾನ್ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿದ್ದರು. ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಚೀನಾ ದೇಶದಿಂದ ರೇಷ್ಮೆಯನ್ನು ತಂದು ಅದನ್ನು ಬೆಳೆಯುವಂತೆ ಪ್ರೋತ್ಸಾಹ ನೀಡಿದ್ದರು. ರೇಷ್ಮೆ ಉದ್ಯಮ ಟಿಪ್ಪು ನೀಡಿದ ಕೊಡುಗೆಯಾಗಿದೆ ಎಂದು ಸ್ಮರಿಸಿದರು.
ನಾಡಿನ ರಕ್ಷಣೆಗೆ ತನ್ನಿಬ್ಬರು ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಅವರನ್ನು ಸರ್ಕಾರ ಕಡೆಗಣಿಸಿರುವುದು ಸರಿಯಲ್ಲ. ಟಿಪ್ಪುವಿನ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿಸಿ, ರಜೆ ಘೋಷಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರವನ್ನು ಇಡುವಂತೆ ಆದೇಶಿಸಬೇಕು.
ಟಿಪ್ಪು ಹೆಸರಿಡಿ: ಟಿಪ್ಪು ಸುಲ್ತಾನ್ ಅವರ ಜನ್ಮ ಸ್ಥಳ ಹಾಗೂ ಶ್ರೀರಂಗಪಟ್ಟಣದಲ್ಲಿರುವ ಐತಿಹಾಸಿಕ ಕೋಟೆಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಶ್ರೀರಂಗಪಟ್ಟಣದಲ್ಲಿ ಆರಂಭಿಸಲು ಉದ್ದೇಶಸಿರುವ ವಿಶ್ವವಿದ್ಯಾಲಯಕ್ಕೆ ಟಿಪ್ಪುವಿನ ಹೆಸರಿಡಬೇಕು ಎಂದು ಸೋಮಸುಂದರ್ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ 3 ತಾಲೂಕುಗಳಲ್ಲಿಯೂ ಟಿಪ್ಪು ಸುಲ್ತಾನ್ ಅವರ ಸ್ಮಾರಕವನ್ನು ನಿರ್ಮಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕಾರ್ಯದರ್ಶಿ ರುದ್ರೇಶ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement