ಯಶಸ್ಸು ಪಡೆಯಲು ಕಠಿಣ ಪರಿಶ್ರಮ ಅಗತ್ಯ
ಕನಕಪುರ: ಜೀವನದಲ್ಲಿ ಯಶಸ್ಸನ್ನು ಪಡೆಯಲು ಕಠಿಣ ಪರಿಶ್ರಮ ಅಗತ್ಯ, ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲಾ ಆದರೆ ಸಾಧಿಸುವ ಛಲ ನಮ್ಮಲ್ಲಿರಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಹೇಳಿದ್ದಾರೆ.
ಅವರು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಉತ್ತೇಜನಾ ಉಪನ್ಯಾಸ ನೀಡುತ್ತಾ ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸದ ಡಿ.ಕೆ.ಸುರೇಶ್‌ವಹಿಸಿದ್ದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಪಶುಸಂಗೋಪನಾ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಐಟಿ ಬಿಟಿ ಕ್ಷೇತ್ರಗಳಲ್ಲಿ ವಿಶ್ವಮಾನ್ಯತೆ ಗಳಿಸಿರುವ ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚಿನ ತಂತ್ರಜ್ಞರು 2 ಲಕ್ಷ ಕೋಟಿ ವಾಹಿವಾಟು ನಡೆಸಿದ್ದಾರೆ. ಇನ್ನು ಐದು ವರ್ಷಗಳಲ್ಲಿ ಭಾರತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನ ಪಡೆಯಲಿದೆ. ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ 1482 ವಿದ್ಯಾರ್ಥಿಗಳು, ಪಿಯುಸಿ ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾದ 672 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟಾರೆ 2,154 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರಶಸ್ತಿಪತ್ರ, ನಗದು ಬಹುಮಾನ, ಗೋಡೆ ಗಡಿಯಾರ, ಕೈಗಡಿಯಾರ, ಸ್ಮರಣ ಫಲಕಗಳನ್ನು ಸಂಸದ ಡಿ.ಕೆ.ಸುರೇಶ್ ನೀಡಿ ಉತ್ತೇಜಿಸಿದರು.
ಕನಕಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ 85 ಮಂದಿ ನ್ಯಾಯವಾದಿಗಳು, ನೂರಕ್ಕೂ ಹೆಚ್ಚು ವೈದ್ಯರು ಹಾಗೂ ಪಶುವೈದ್ಯರುಗಳನ್ನು ಸಚಿವ ಟಿ.ಬಿ.ಜಯಚಂದ್ರ ಸನ್ಮಾನಿಸಿದರು.
ಸಮಾರಂಭದಲ್ಲಿ ಶಾಸಕ ಮುನಿರತ್ನ, ಮಾಜಿಶಾಸಕ ಎಸ್.ರವಿ, ಜಿಪಂ ಸದಸ್ಯ ಇಕ್ಬಾಲ್‌ಹುಸೇನ್, ತಾಪಂ ಅಧ್ಯಕ್ಷೆ ನಾಗರತ್ನ, ಮುಖಂಡರಾದ ವಿಜಯದೇವ್, ಸೂರನಹಳ್ಳಿ ಜಯರಾಂ, ಹೊನ್ನಿಗನಹಳ್ಳಿ ಶ್ರೀಕಂಠು, ಕೆ.ಜಿ.ತಿಮ್ಮಪ್ಪ, ಭವಾನಿ ಟ್ರಸ್ಟ್ ಲಕ್ಷ್ಮಣ್, ಜಿಪಂ ಸಿಇಓ ಡಾ.ವೆಂಕಟೇಶ್ ಪಾಲ್ಗೊಂಡಿದ್ದರು. ಡಿಕೆಎಸ್ ಟ್ರಸ್ಟ್ ನಿರ್ದೇಶಕ ಚಿನ್ನರಾಜು ಪ್ರಾಸ್ಥಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ವಿ.ವಿಶ್ವನಾಥ್ ವಂದಸಿದರು.
ಕೃಷಿ ಉತ್ಸವ ಕುರಿತು ಸಚಿವ ಜಯಚಂದ್ರ ಶ್ಲಾಘನೆ
ಕನಕಪುರ: ರಾಜ್ಯಮಟ್ಟದ ಮೇಳಗಳನ್ನು ನಾಚಿಸುವಂತೆ ಕನಕಪುರದಲ್ಲಿ ನಡೆಯುತ್ತಿರುವ ಕೃಷಿ ಉತ್ಸವದ ಹಿಂದೆ ಶಾಸಕ ಡಿ.ಕೆ. ಶಿವಕುಮಾರ್‌ರವರ ಕಾಳಜಿ ಹಾಗೂ ಸಂಸದ ಡಿ.ಕೆ.ಸುರೇಶ್‌ರವರ ಶ್ರದ್ಧೆ ಕಾಳಜಿಗಳಿವೆ ಎಂದು ಪಶುಸಂಗೋಪನೆ ಹಾಗೂ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಅವರು ಕನಕಪುರದ ಆರ್‌ಇಎಸ್‌ಮೈದಾನದಲ್ಲಿ ಕೃಷಿ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಉತ್ತಮ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಘಟನಾ ಚತುರತೆ, ಧೀಮಂತಿಕೆ ಹಾಗೂ ಕ್ರಿಯಾಶೀಲತೆಗಳು ಅಗತ್ಯವಾಗಿದ್ದು ಡಿಕೆಶಿ ಸೋದರರು ಎಲೆಮರೆಯ ಕಾಯಿಗಳಂತೆ ಕ್ಷೇತ್ರವನ್ನು ಅಪೂರ್ವವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದು ಹೇಳಿದ ಸಚಿವ ಜಯಚಂದ್ರ, ಅಂತರ ರಾಷ್ಟ್ರೀಯ ಒಡಂಬಡಿಕೆಗಳಿಂದಾಗಿ ಕೃಷಿಕ್ಷೇತ್ರ ತೀವ್ರವಾದ ಪೈಪೋಟಿಯನ್ನು ಎದುರಿಸುತ್ತಿದ್ದು ಆಧುನಿಕ ಬೇಸಾಯ ಹಾಗೂ ವೈಜ್ಞಾನಿಕ ನವೀನ ಉಪಕರಣಗಳ ಅಳವಡಿಕೆ ಅನಿವಾರ್ಯವಾಗಿದೆ ಎಂದರು.
ಕನಕಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 15 ಎಕರೆ ಜಮೀನು ಒದಗಿಸಲು ಸಿದ್ಧರಾದರೆ ಅತ್ಯಾಧುನಿಕ ಯಾಂತ್ರೀಕೃತ ಕಸಾಯಿಖಾನೆ (ಸ್ಲಾಟರ್‌ಹೌಸ್) ಪ್ರಾರಂಭಿಸಲು ಅನುಮತಿ ನೀಡಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಜಯಚಂದ್ರ ನುಡಿದರು.