ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಭಿವೃದ್ಧಿ ಕಾಮಗಾರಿ ನಿರ್ವಹಿಸಿದಾಗ ಜನರಿಗೆ ಹತ್ತಿರ ಸಾಧ್ಯ

Srinivasa Murthy VN
Updated On : 17 Nov 2013, 12:40 pm

ನೆಲಮಂಗಲ: ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿದಾಗ ಮಾತ್ರ ಪಂಚಾಯ್ತಿ ಜನರಿಗೆ ಹತ್ತಿರವಾಗಲು ಸಾಧ್ಯ ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ನಾರಾಯಣಸ್ವಾಮಿ ಹೇಳಿದರು. ಅವರು ಶನಿವಾರ ಅರಿಶಿನಕುಂಟೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯ ಅನುಮೋದನೆಯ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಯೋಜನೆಯಲ್ಲಿ ಗ್ರಾಮದ ಕೆರೆ, ಸ್ಮಶಾನ, ಆಟದ ಮೈದಾನ, ನಮ್ಮ ಹೊಲ, ನಮ್ಮ ದಾರಿ ಅಂತಹ ಕಾಮಗಾರಿಗೆ ಹಾಗೂ ಸ್ವಚ್ಛತಾ ಕಾರ್ಯಗಳಿಗೆ ವಿಶೇಷ ಒತ್ತು  ನೀಡಬೇಕು ಎಂದರು. ಪಂಚಾಯ್ತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಉದ್ಯೋಗ ಖಾತ್ರಿ ಯೋಜನೆ ಯಶಸ್ಸಿಗೆ ಸಹಕಾರ ನೀಡಬೇಕು. ನಿಗದಿತ ಸಮಯದಲ್ಲಿ ಕಂದಾಯ ಪಾವತಿಸುವ ಮೂಲಕ ಪಂಚಾಯ್ತಿ ಅಭಿವೃದ್ಧಿ ಸಹಕರಿಸಬೇಕು ಎಂದು ಗ್ರಾ.ಪಂ.ಅಧ್ಯಕ್ಷ ರಾಜಣ್ಣ ತಿಳಿಸಿದರು. ಪಂಚಾಯ್ತಿ ವ್ಯಾಪ್ತಿ ಕಸ ವಿಲೇವಾರಿಗೆ ಉಚಿತ ಆಟೋವೊಂದನ್ನು ಗ್ರಾ.ಪಂ.ಉಪಾಧ್ಯಕ್ಷ ಕೆಂಪರಾಜು ಪಂಚಾಯ್ತಿಗೆ ಕೊಡುಗೆ ನೀಡಿದರು. ತಾ.ಪಂ.ಅಧ್ಯಕ್ಷೆ ಸರಸ್ವತಿ, ಗ್ರಾ.ಪಂ. ಸದಸ್ಯರಾದ ತಿಮ್ಮರಾಯಪ್ಪ, ರಾಜಣ್ಣ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪದ್ಮನಾಭ್ ಹಾಗೂ ನೂರಾರು ಜನ ಗ್ರಾಮಸ್ಥರು ಇದ್ದರು.

ರಾಮಲಿಂಗೇಶ್ವರ ಬ್ರಹ್ಮರಥೋತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ಶ್ರೀಗಿರಿಜಾ ರಾಮಲಿಂಗೇಶ್ವರ ಸ್ವಾಮಿಯವರ 8ನೇ ವರ್ಷದ ಕಲ್ಯಾಣ ಮಹೋತ್ಸವ, ಬ್ರಹ್ಮರಥೋತ್ಸವ ಮತ್ತು ಉಯ್ಯಾಲೋತ್ಸವ ಕಾರ್ಯಕ್ರಮಗಳು ನ.17ರ ಭಾನುವಾರ ನಡೆಯಲಿವೆ. ದೇವಾಂಗ ಮಂಡಲಿ ಮತ್ತು ತಿಪ್ಪೂರು ಪದ್ಮಾ ಗೋಪಾಲಕೃಷ್ಣ ಕುಟುಂಬದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 7.30ಕ್ಕೆ ಕಲ್ಯಾಣೋತ್ಸವ ನಡೆಯಲಿದೆ.

ದೀಪೋತ್ಸವ ಕಾರ್ಯಕ್ರಮ
ವಿಜಯಪುರ: ಪಟ್ಟಣದ ಸಂತೆ ಮೈದಾನದಲ್ಲಿರುವ ಇತಿಹಾಸ ಪ್ರಸಿದ್ಧ ಮುಜರಾಯಿ ಇಲಾಖೆಗೆ ಸೇರಿರುವ  ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ವಿಶೇಷವಾಗಿ 6 ನೇ ವರ್ಷದ ದೀಪೋತ್ಸವ ನಡೆಯಲಿದೆ.ನ. 18ರ ಸೋಮವಾರದಂದು ಸ್ವಾಮಿಯವರಿಗೆ ಬೆಳಗಿನಿಂದಲೇ ಸುಪ್ರಭಾತ ಸೇವೆ,ಅಭಿಷೇಕ, ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದ್ದು ಸಂಜೆ ವಿಷ್ಣು ದೀಪೋತ್ಸವದೊಂದಿಗೆ ಲಕ್ಷದೀಪೋತ್ಸವ ನಡೆಯಲಿದೆ ಎಂದು ಅರ್ಚಕ ರಾಘವೇಂದ್ರಚಾರ್ಯ ತಿಳಿಸಿದ್ದಾರೆ.

ಸಚಿನ್, ಸಿಎನ್‌ಆರ್‌ಗೆ ಭಾರತ ರತ್ನ: ಸಂತಸ
ದೊಡ್ಡಬಳ್ಳಾಪುರ: ಕನ್ನಡಿಗ, ವಿಜ್ಞಾನಿ ಚಿಂತಾಮಣಿ ನಾಗೇಶ ರಾಮಚಂದ್ರರಾವ್ (ಸಿಎನ್‌ಆರ್ ರಾವ್) ಮತ್ತು ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ಸರ್ಕಾರ ದೇಶದ ಪರಮೋಚ್ಚ ನಾಗರಿಕ ಪ್ರಶಸ್ತಿಯಾಗಿರುವ ಭಾರತ ರತ್ನ ಘೋಷಿಸಿರುವುದಕ್ಕೆ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ. ಸಚಿನ್ ಮತ್ತು ಸಿಎನ್‌ಆರ್ ರಾವ್ ಅಭಿಮಾನಿಗಳು ಹಲವೆಡೆ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ಸಚಿನ್ ಈ ದೇಶದ ಕ್ರೀಡಾ ಕ್ಷೇತ್ರಕ್ಕೆ ಕೊಟ್ಟ ಅವಿಸ್ಮರಣೀಯ ಕೊಡುಗೆಯನ್ನು ಪರಿಗಣಿಸಿ ಅವರ ವಿದಾಯ ಪಂದ್ಯದ ದಿನವೇ ಭಾರತ ರತ್ನ ಘೋಷಣೆ ಮಾಡಿರುವುದು ಮಹತ್ವದ ವಿಚಾರ. ಕ್ರೀಡಾ ಕ್ಷೇತ್ರಕ್ಕೆ ಇದರಿಂದ ಮತ್ತಷ್ಟು ಉತ್ತೇಜನ ಕೊಟ್ಟಂತಾಗುತ್ತದೆ. ದೇಶದಲ್ಲಿ ಮೊದಲ ಬಾರಿಗೆ ಭಾರತ ರತ್ನ ಪಡೆದ ಕ್ರೀಡಾಪಟುವಾಗಿ ಸಚಿನ್ ತೆಂಡೂಲ್ಕರ್ ಹೊರಹೊಮ್ಮಿದ್ದಾರೆ. ಮುಂದಿನ ದಿನಗಳಲ್ಲೂ ಅವರ ಕ್ರೀಡಾ ಸಾಧನೆ ಮೈದಾನದ ಹೊರಗೂ ಮುಂದುವರೆಯಲಿ. ಯುವಕರ ಆದರ್ಶವಾಗಿ ಸಚಿನ್ ಸದಾ ಸ್ಪೂರ್ತಿಯಾಗಲಿ ಎಂದು ಸಂಭ್ರಮಪಟ್ಟಿದ್ದಾರೆ. ಕನ್ನಡಿಗರ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ ಸಿಎನ್‌ಆರ್ ರಾವ್ ಅವರಿಗೆ ಭಾರತರತ್ನ ಘೋಷಣೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸಿಎನ್‌ಆರ್ ರಾವ್ ಭಾರತರತ್ನ ಪಡೆಯತ್ತಿರುವ ಅಪರೂಪದ ಕನ್ನಡಿಗ. ವಿಶೇಷವೆಂಬಂತೆ ಇದೇ ಜಿಲ್ಲೆಯ ಸರ್.ಎಂ.ವಿಶ್ವೇಶ್ವರಯ್ಯ ಕೂಡ ಭಾರತ ರತ್ನ ಪಡೆದಿದ್ದರು.

ಮಹಿಳೆಯರ ಕಾನೂನು ಸದುಪಯೋಗವಾಗಲಿ
ಆನೇಕಲು: ಭಾರತೀಯ ಸಂವಿಧಾನದ ಪ್ರಕಾರ ಸಮಾಜದ ಎಲ್ಲರಿಗೂ ಒಂದೇ ಕಾನೂನು ಇರುತ್ತದೆ. ಕಾನೂನಿಗೆ  ಲಿಂಗಭೇದ ಇರುವುದಿಲ್ಲ. ಮಹಿಳೆಯರು ತಮಗಾಗಿ ರಚಿಸಿರುವ ಕಾನೂನುಗಳ ಬಗ್ಗೆ ಹೆಚ್ಚಿನ ಅರಿವನ್ನು  ಹೊಂದಬೇಕೆಂದು ಹಿರಿಯ ಸಿವಿಲ್ ನ್ಯಾಯಧೀಶರಾದ ಎಚ್. ಸಿ. ಶ್ಯಾಮಪ್ರಸಾದ ತಿಳಿಸಿದ್ದಾರೆ. ಅವರು ತಾಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಪ್ರಯುಕ್ತ  ಆನೇಕಲ್ಲಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ವಿಶೇಷ ಸೌಲಭ್ಯ ನೀಡುವುದು, ದಿನದ ಪಾಳಿಯಲ್ಲಿ ಮಾತ್ರ ಕೆಲಸ ನಿರ್ವಹಿಸಲು ಅನುವು ಮಾಡಿಕೊಡುವುದು, ಹೆರಿಗೆ ರಜೆ, ಮಕ್ಕಳ ಪೋಷಣೆಗೆ ಅವಕಾಶ ಮುಂತಾದ ಸವಲತ್ತುಗಳಿದ್ದು ಸದುಪಯೋಗಪಡಿಸಕೊಳ್ಳಬೇಕೆಂದರು. ಅಪರ ಸಿವಿಲ್ ನ್ಯಾಯಾಧೀಶ ಈಶ್ವರ್, ಸಹಾಯಕ ಸರ್ಕಾರಿ ಅಭಿಯೋಜಕ ರಾಜೇಶ್ವರ್ ಎಸ್. ಶೆಟ್ಟಿ, ಸಿಡಿಪಿಒ ನಿಶ್ಚಲ್, ಆನೇಕಲ್ ವೃತ್ತ ನಿರೀಕ್ಷಕ ಡಿ.ಎಸ್. ರಾಜೇಂದ್ರ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement