ಜನಪದ ಸಂಸ್ಕೃತಿಯಲ್ಲಿ ಯುವಜನತೆ ಹಿಂದೆ
ಚನ್ನಪಟ್ಟಣ: ನಮ್ಮ ಜನಪದ ಸಂಸ್ಕೃತಿಯ ಕಲಿಕೆಯಲ್ಲಿ ಯುವಜನತೆ ಹಿಂದೆ ಬೀಳುತ್ತಿದೆ ಎಂದು ಕನ್ನಡ ಉಪನ್ಯಾಸಕ ಡಿ.ಆರ್.ದೇವರಾಜು ವಿಷಾದ ವ್ಯಕ್ತಪಡಿಸಿದರು.
ನಗರದ ರಾಘವೇಂದ್ರ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರೀಮತಿ ದೇವಿರಮ್ಮ ಶಿವಲಿಂಗೇಗೌಡ ಇವರ ಸ್ಮರಣಾರ್ಥ ಜಾನಪದ ಕಲಾ ಪ್ರಕಾರಗಳು ಹಾಗೂ ವಚನ ಸಾಹಿತ್ಯ, ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಜನಪದದಲ್ಲಿ 400 ಕ್ಕೂ ಹೆಚ್ಚು ಕಲಾ ಪ್ರಕಾರಗಳಿವೆ. ಜಾನಪದ ಕಲಾವಿದರನ್ನು ಇತ್ತೀಚೆಗೆ ಕಡೆಗಣಿಸಲಾಗುತ್ತಿದೆ. ಇಂದು ಜಾನಪದ ಕಲಾ ಪ್ರಕಾರಗಳು ಕಣ್ಮರೆಯಾಗುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು.
ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಜೆ ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿ ಇಂದಿನ ಯುವ ಜನಾಂಗ ಒಂದು ವಾಕ್ಯದಲ್ಲಿ ಕೇವಲ ಎರಡು ಮೂರು ಕನ್ನಡ ಪದ ಬಳಕೆ ಮಾಡಿ ಇನ್ನುಳಿದಂತೆ ಇಂಗ್ಲಿಷ್ ಪದ ಬಳಕೆ ಮಾಡುತ್ತಾರೆ. ಒಟ್ಟಾರೆ ಕನ್ನಡ ಭಾಷೆಯ ಬಳಕೆ ಕುಸಿಯುತ್ತಿದ್ದು ಇದಕ್ಕೆಲ್ಲಾ ಪರಭಾಷೆ ವ್ಯಾಮೋಹವೇ ಪ್ರಮುಖ ಕಾರಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಪರ ಹೋರಾಟಗಾರ ಸಿಂ.ಲಿಂ.ನಾಗರಾಜು ಮಾತನಾಡಿ ಸರ್ಕಾರ ಸಂಘ-ಸಂಸ್ಥೆಗಳು ಅತೀ ಹೆಚ್ಚು ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಬೆಳವಣಿಗೆ ಸಹಕರಿಸುತ್ತಿವೆ.
ಜಾನಪದ ಕಲಿಕೆಗೆ ಕಾರ್ಯಗಾರ ಹಮ್ಮಿಕೊಂಡು ಆಸಕ್ತರಿಗೆ ಪ್ರತಿ ತಾಲೂಕು ಕೇಂದ್ರಗಳಲ್ಲಿ ತರಬೇತಿ ನೀಡುವುದು ಹಾಗೂ ಹಿರಿಯ ಜಾನಪದ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವ ಮೂಲಕ ಕಲೆಯ ಉಳಿವಿಗೆ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಕ.ಸಾ.ಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ ಸಮಾನತೆ ಇಂದು ಯಾವೊಂದು ಕ್ಷೇತ್ರದಲ್ಲೂ ಇಲ್ಲವಾಗಿದೆ. ಅಸಮಾನತೆಯಿಂದ ದೇಶ ಗಂಡಾಂತರಕ್ಕೆ ಗುರಿಯಾಗಲಿದೆ ಎಂದು ಎಚ್ಚರಿಸಿದರು.
ಮುಖ್ಯ ಅತಿಥಿಯಾಗಿ ದತ್ತಿದಾನಿ ಚ.ಶಿ.ವೆಂಕಟೇಗೌಡ, ನಗರಸಭಾ ಸದಸ್ಯ ರಮೇಶ್, ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ಎಂ.ಕೆ.ಸುಜಯಸಿಂಹ, ತಾಲೂಕು ಪತ್ರಕರ್ತ ಸಂಘದ ಕಾರ್ಯದರ್ಶಿ ಹುಚ್ಚಯ್ಯನದೊಡ್ಡಿ ರಮೇಶ್ ಮಾತನಾಡಿದರು. ತಾಲೂಕು ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಹೆಚ್.ಕೃಷ್ಣೇಗೌಡ, ಸಾಹಿತಿ ಚನ್ನವೀರೇಗೌಡ, ಎಂ.ಟಿ ನಾಗರಾಜು, ರಾಘವೇಂದ್ರಮಯ್ಯ ಮುಂತಾದವರು ಉಪಸ್ಥಿತರಿದ್ದರು. ತಾಲೂಕು ಕ.ಸಾ.ಪ ಗೌರವ ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ರಾಂಪುರ ನಾಗರಾಜು ವಂದಿಸಿದರು. ಶ್ರೀಮತಿ ಶಾರದಾ ನಾಗೇಶ್ ಗೀತಗಾಯನ ನಡೆಸಿಕೊಟ್ಟರು.