ಭವಿಷ್ಯದ ಆಹಾರ ಉತ್ಪಾದನೆಗೆ ಕ್ರಮ ಅಗತ್ಯ
ಕ.ಪ್ರ.ವಾರ್ತೆ ರಾಮನಗರ ನ. 16
ಮುಂದಿನ 50 ವರ್ಷದ ಗುರಿಯೊಂದಿಗೆ ಅಗತ್ಯ ಆಹಾರ ಉತ್ಪಾದನೆಗೆ ಕ್ರಮ ಕೈಗೊಳ್ಳಬೇಕಿದೆ. ಈ ಮೂಲಕ ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನಕಪುರದಲ್ಲಿ ನಡೆದ ಕೃಷಿ ಮೇಳ ಮತ್ತು ಕನಕೋತ್ಸವದಲ್ಲಿ ಸಾಧಕರಿಗೆ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಅವರು, ಏರುತ್ತಿರುವ ಜನ ಸಂಖ್ಯೆಗೆ ಅಗತ್ಯ ಆಹಾರ ಉತ್ಪಾದಿಸುವ ನಿಟ್ಟಿನಲ್ಲಿ ಹೊಸ ತಳಿಗಳ ಆವಿಷ್ಕಾರ, ನೂತನ ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಲಾಗುವುದು ಎಂದರು.
ಕೃಷಿ ಆವಿಷ್ಕಾರ ಮತ್ತುನೂತನ ತಂತ್ರಜ್ಞಾನದ ಅಳವಡಿಕೆಯನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲೂ ಕೃಷಿ ಮೇಳ ಆಯೋಜನೆಗೆ ಚಿಂತನೆ ನಡೆಸಲಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ಆರ್ಥಿಕವಾಗಿ ಬಲ ತುಂಬಲು ಕೃಷಿ ಬೆಲೆ ಆಯೋಗ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಇಲಾಖೆಯು ಕೇವಲ ಸಬ್ಸಿಡಿ ಯಂತ್ರೋಪಕರಣ ವಿತರಿಸಲಷ್ಟೇ ಸೀಮಿತವಾಗಬಾರದು. ಕೃಷಿ ಚಟುವಟಿಕೆಗಳನ್ನು ವಿಸ್ತರಿಸಿ, ರೈತರನ್ನು ಪ್ರೋತ್ಸಾಹಿಸುವುದಕ್ಕೂ ಮುಂದಾಗಬೇಕು. ಭಾರತವನ್ನು ಹಸಿವು ಮುಕ್ತ ದೇಶವನ್ನಾಗಿಸಲು ಕೃಷಿ ಕ್ಷೇತ್ರದಿಂದಷ್ಟೇ ಸಾಧ್ಯ ಎಂದು ಅವರು ಹೇಳಿದರು.
ಶುದ್ಧ ನೀರು ಘಟಕ ಬೇಕು: ರಾಜ್ಯದೆಲ್ಲೆಡೆ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಇಂತಹ 100 ಘಟಕಗಳ ಸ್ಥಾಪನೆಗೆ ಸಂಸದ ಡಿ.ಕೆ.ಸುರೇಶ್ ಮುಂದಾಗಿರುವುದು ಶ್ಲಾಘನೀಯ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಸರ್ಕಾರ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ರು.2000 ಕೋಟಿ ಮೀಸಲಿಟ್ಟಿದೆ.
ಇದರೊಂದಿಗೆ ರಾಜ್ಯದ ಸಾವಿರ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ಗುಡಿಸಲು ಮುಕ್ತ ರಾಜ್ಯ: ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪ ತೊಡಲಾಗಿದೆ. ಈ ನಿಟ್ಟಿನಲ್ಲಿ ಮನೆ ನಿರ್ಮಾಣಕ್ಕೆ ನೀಡಲಾಗುವ ಹಣವನ್ನು ಹೆಚ್ಚಿಸಿದ್ದು, ಫಲಾನುಭವಿಗಳಿಗೆ ವಿಧಿಸಿರುವ ಷರತ್ತುಗಳನ್ನೂ ಸಡಿಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸರ್ಕಾರ ಜಾರಿಗೆ ತರುವ ಎಲ್ಲಾ ಕಾರ್ಯಕ್ರಮಗಳು ಬಡವರಿಗೆ ತಲುಪಬೇಕು. ಮನಸ್ವಿನಿ, ಮೈತ್ರಿ, ಕ್ಷೀರಭಾಗ್ಯ, ಸಾಲಮನ್ನಾ ಮುಂತಾದ ಯೋಜನೆಗಳ ಮೂಲಕ ಬಡವರ, ಹಿಂದುಳಿದವರು, ದಲಿತರಿಗೆ ನೆರವಾಗುವ ಕೆಲಸ ಮಾಡುತ್ತಿರುವ ಸಂತೃಪ್ತಿ ತಮಗಿದೆ ಎಂದರು.
ಬರ ಘೋಷಣೆಗೆ ಮನವಿ: ಸಮಾರಂಭದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ತಮ್ಮ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಸೇರಿದ ರಾಮನಗರ ಜಿಲ್ಲೆ ಮತ್ತು ಕುಣಿಗಲ್ ವಿಧಾನಸಭೆ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಎತ್ತಿನ ಹೊಳೆ, ಶಿಂಷಾ ಏತ ನೀರಾವರಿ ಯೋಜನೆಗಳಿಂದ ರಾಮಜನಗರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಒತ್ತು ನೀಡಬೇಕು. ವೃಷಭಾವತಿ ನದಿ ನೀರನ್ನು ಶುದ್ಧೀಕರಿಸಬೇಕು. ಡಾ.ಡಿ.ಎಂ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ಕನಕಪುರ ಮತ್ತು ಮಾಗಡಿ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದರು.
ವೈದ್ಯ ಕಾಲೇಜು ಘೋಷಣೆ: ರಾಮನಗರ ಜಿಲ್ಲೆಯ ಕನಕಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂಬ ಸ್ಥಳೀಯ ಶಾಸಕ ಡಿ.ಕೆ.ಶಿವಕುಮಾರ್ ಅವರ ಮನವಿ ಸ್ಪಂದಿಸಿದ ಸಿದ್ದರಾಮಯ್ಯ, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಿರಂತರವಾಗಿ ನಡೆಯಲಿ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ರೈತಾಪಿ ಸಮುದಾಯಕ್ಕೆ ಉಪಯುಕ್ತ ಮಾಹಿತಿ ಮತ್ತು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಇಂತಹ ಕೃಷಿ ಮೇಳ ಸಹಕಾರಿಯಾಗಲಿದೆ. ಈ ಮೇಳಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.
ಶಾಸಕ ರಮೇಶ್ಕುಮಾರ್, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವೆಂಕಟೇಶ್, ಮಾಜಿ ಶಾಸಕರಾದ ಎಸ್.ರವಿ, ಸಿ.ಎಂ.ಲಿಂಗಪ್ಪ, ಜಿ.ಪಂ. ಸದಸ್ಯ ಇಕ್ಬಾಲ್ ಹುಸೇನ್ ಮತ್ತಿತರರು ಭಾಗವಹಿಸಿದ್ದರು. ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಹಿತ ಗಣ್ಯರನ್ನು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಸನ್ಮಾನಿಸಿದರು. ಇದೇ ವೇಳೆ ಪಟ್ಟಣದ ಶುದ್ಧ ನೀರು ಘಟಕವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು.
ಯಡಿಯೂರಪ್ಪಗೆ ತಿರುಗೇಟು
ಭಾಗ್ಯಜ್ಯೋತಿಗೆ ಕರೆಂಟ್ ಕಟ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಕಡಿತಗೊಳಿಸಿ, ರು.3500 ಕೋಟಿ ಮೌಲ್ಯದ ಗಣಿ ಲೂಟಿಗೆ ಅವಕಾಶ ಮಾಡಿಕೊಟ್ಟು ಜೈಲಿಗೆ ಹೋಗಿದ್ದ ಯಡಿಯೂರಪ್ಪ ಅವರೀಗ ಶಾದಿಭಾಗ್ಯ ವಿಸ್ತರಣೆಗೆ ಅಹೋರಾತ್ರಿ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಶಾದಿಭಾಗ್ಯ ವಿಸ್ತರಿಸಬೇಕೆನ್ನುವ ಹೋರಾಟವು ಬಡವರ ಹಿತದೃಷ್ಟಿಯಿಂದ ಖಂಡಿತ ಅಲ್ಲ. ಇದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ರಾಜಕೀಯ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿರುವ ಯಡಿಯೂರಪ್ಪ ಅವರಂತಹವರಿಂದ ನಾನು ಆಡಳಿತ ನಡೆಸುವುದನ್ನು ಕಲಿಯಬೇಕಿಲ್ಲ ಎಂದು ಅವರು ಟೀಕಿಸಿದರು.
ಮತದಾರರು ಪಾಠ ಕಲಿಸಿದ್ದಾರೆ
ರಾಮನಗರ ಜಿಲ್ಲೆಯು ತಮ್ಮ ಹಿಡಿತದಲ್ಲಿದ್ದು, ಇಲ್ಲಿ ಏನು ಬೇಕಾದರೂ ಮಾಡಬಹುದು ಎಂದುಕೊಂಡ ಕುಟುಂಬಕ್ಕೆ ಇಲ್ಲಿನ ಮತದಾರರು ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ ಎಂದು ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಉಪ ಚುನಾವಣೆಯಲ್ಲಿ ಕಣಕ್ಕೆ ಇಳಿದು ಜಯಗಳಿಸಿರುವ ಡಿ.ಕೆ.ಸುರೇಶ್ ಅವರೇ ಮುಂಬರುವ ಸಾರ್ವತ್ರಿಕ ಚುನಾವಣೆಗೂ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಅವರ ಗೆಲವು ಖಚಿತ. ಎಷ್ಟೇ ಸರ್ಕಸ್ ನಡೆಸಿದರೂ ಮುಂದಿನ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಅಪ್ಪ-ಮಕ್ಕಳ ಆಟ ನಡೆಯದು ಎಂದು ಅವರು ಗುಡುಗಿದರು.