ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದಾಗ ರಾಷ್ಟ್ರದ ಪ್ರಗತಿ ಸಾಧ್ಯ: ವೀರೇಶಾನಂದ ಸರಸ್ವತಿಶ್ರೀ
ಸರ್ಜಾಪುರು: ವಿದ್ಯಾರ್ಥಿಗಳಿಗೆ ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಿದಾಗ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ವಿದ್ಯಾಸಂಸ್ಥೆ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಟೇಲರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವಾಣಿಯನ್ನು ಆದರ್ಶವಾಗಿಟ್ಟುಕೊಂಡು ಸಮಾಜ ಕಟ್ಟುವ ಬಗ್ಗೆ ಜಾಗೃತಗೊಳ್ಳಬೇಕು. ಪಟೇಲ್ ಅವರ ಆದರ್ಶ ತ್ಯಾಗ ಮನೋಭಾವನೆಯನ್ನು ಪ್ರತಿಯೊಬ್ಬರೂ ಅರಿಯಬೇಕೆಂದರು.
ಎಂ. ರಾಮಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಆರ್. ಜಯರಾಮ್ ಮಾತನಾಡಿ, ಶಿಕ್ಷಣದಿಂದ ಎಲ್ಲವನ್ನೂ ಸಾಧಿಸಬಹುದು ಎಂದರು. ಎಸ್‌ವಿಪಿ ವಿದ್ಯಾಸಂಸ್ಥೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ, ಡಾ.ಅಕ್ಕಲರಾಜು, ತ್ಯಾಗರಾಜು, ವಿವೇಕಾನಂದ, ಎ.ನಾಗರಾಜು ಕೆ.ಸತ್ಯನಾರಾಯಣ ಮತ್ತಿತರರು ಇದ್ದರು.
ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್. ರಾಮಸ್ವಾಮಿ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ವಿಧಾನಪರಿಷತ್ ಸದಸ್ಯ ಬಿ.ಟಿ. ದಯಾನಂದ್ ಬಿಡುಗಡೆ ಮಾಡಿದರು.
ಶಾಸಕ ಬಿ. ಶಿವಣ್ಣ ಮಾತನಾಡಿ ಶಾಲೆ ನಡೆದು ಬಂದ ಹಾದಿ ಬಗ್ಗೆ ಪ್ರಶಂಸಿಸಿದರು. ಶಾಲೆ ಅಭಿವೃದ್ಧಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು. ಎಂ. ಮುನಿರೆಡ್ಡಿ, ಎಸ್.ವಿ.ವಿವೇಕಾನಂದ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ ನೀಡಿದ 30 ಲಕ್ಷ ರು. ಅಂದಾಜಿನ ಸಭಾಂಗಣ ನಿರ್ಮಿಸಿ ಕೊಟ್ಟವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪಾಧ್ಯಾಯರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷಮುರಳೀಕೃಷ್ಣ, ಪಿ.ಸಿ. ಮುನಿಸ್ವಾಮಿ ರೆಡ್ಡಿ, ಎಂ. ಕಿಶೋರ ಶರ್ಮ ಇತರರಿದ್ದರು.