ಶಾದಿ ಭಾಗ್ಯ: ಎಲ್ಲ ಬಡ ಹೆಣ್ಣುಮಕ್ಕಳಿಗೂ ಬರಲಿ
ಕ.ಪ್ರ.ವಾರ್ತೆ ನೆಲಮಂಗಲ ನ. 16
ಸರ್ಕಾರವು ಶಾದಿ ಭಾಗ್ಯ ಯೋಜನೆಯನ್ನು ಘೋಷಿಸುವಾಗ ಉಳಿದ ಸಮುದಾಯದ ಎಲ್ಲಾ ಬಡ ಹೆಣ್ಣು ಮಕ್ಕಳನ್ನು ಮರೆತಿದೆ ಎಂದು ಸರ್ಕಾರದ ಕ್ರಮವನ್ನು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೆಚ್.ಪಿ.ಚೆಲುವರಾಜು ಖಂಡಿಸಿದರು.
ಅವರು ಶನಿವಾರ ತಾಲೂಕು ಕಚೇರಿ ಮುಂಭಾಗ ತಾಲೂಕು ಕರ್ನಾಟಕ ಜನತಾ ಪಕ್ಷ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರವು ಜಾರಿ ಮಾಡಿರುವ ಯೋಜನೆಗಳು ಸಮಾಜವನ್ನು ಒಡೆಯುತ್ತಿವೆ. ಇದಕ್ಕಾಗಿ ನಮ್ಮ ಹೋರಾಟ ಎಂದರು. ರಾಜ್ಯದಲ್ಲಿ ಎ.ಪಿ.ಎಲ್ ಕಾರ್ಡುದಾರರಿಗೆ ಪಡಿತರ ವಿತರಿಸಬೇಕು. ಸರ್ಕಾರವು ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ಪೂರಕ ಆದೇಶವನ್ನು ಹೊರಡಿಸಿ ಸಮಾಜದ ಎಲ್ಲಾ ವರ್ಗದ ಬಡ ಹೆಣ್ಣು ಮಕ್ಕಳ ಹಾಗೂ ಎ.ಪಿ.ಎಲ್ ಕಾರ್ಡುದಾರರ ಒಳಿತಿಗಾಗಿ ಸ್ಪಂದಿಸಬೇಕು ಎಂದು ತಾಲೂಕು ಕೆಜೆಪಿ ಮುಖಂಡ ತೀರ್ಥೇಶ್ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಕೆಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಂದು ತಹಸೀಲ್ದಾರ್ ಡಾ.ಗೀತಾ ರವರಿಗೆ ಪ್ರತಿಭಟನೆಯ ಕುರಿತು ಮನವಿ ಪತ್ರ ಸಲ್ಲಿಸಿದರು.