ಸಿದ್ಧಲಿಂಗಸ್ವಾಮೀಜಿಗೆ ವಿರಕ್ತಾಶ್ರಮ ದೀಕ್ಷೆ
ಕನಕಪುರ: ಕನಕಪುರ ತಾಲೂಕಿನ ಹೊರಳುಗಲ್ಲು ಗ್ರಾಮದ ಮಹಾಂತೇಶ್ವರ ಮಠದ 6ನೇ ಸಂಸ್ಮರಣೋತ್ಸವ ಹಾಗೂ ನಿರಂಜನ ಪಟ್ಟಾಧಿಕಾರ ಮಹೋತ್ಸವ ನಡೆಯಿತು.
ಸಾನ್ನಿಧ್ಯವನ್ನು ಚಿತ್ರದುರ್ಗದ ಬೃಹನ್ಮಠದ ಶ್ರೀ ಶಿವಮೂರ್ತಿ ಶರಣರು ವಹಿಸಿ, ಹೊರಳುಗಲ್ಲು ಮಠದ ಶ್ರೀ ಮಹಾಂತೇಶ್ವರ ಸ್ವಾಮೀಜಿ ಆರು ವರ್ಷಗಳ ಹಿಂದೆಯೇ ಲಿಂಗೈಕ್ಯರಾಗಿದ್ದು ನೂತನ ಪೀಠಾಧ್ಯಕ್ಷರನ್ನಾಗಿ ಶ್ರೀ ಸಿದ್ಧಲಿಂಗಸ್ವಾಮೀಜಿಯವರಿಗೆ ವಿಧಿವಿಧಾನಗಳ ಮೂಲಕ ವಿರಕ್ತಾಶ್ರಮ ದೀಕ್ಷೆ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿದ ಕೃಷಿ ಮಾರುಕಟ್ಟೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ಸಮಾಜದ ಎಲ್ಲಾ ಸಮದಾಯದ ಜನರೂ ಒಂದೇ ಎಂಬ ತತ್ವವನ್ನು ಸಾರಿದ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮಠಮಾನ್ಯಗಳು ಮುಂದುವರೆಯುತ್ತಾ ಜನರಿಗೆ ಸನ್ಮಾರ್ಗ ತೋರುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಆಂಜನೇಯ ಮಾತನಾಡಿ, ಸಮಾಜದ ಮೂಢನಂಬಿಕೆಗಳನ್ನು ತೊಡೆದುಹಾಕಲು ಕರಡು ವಿಧೇಯಕವನ್ನು ಸಿದ್ಧಮಾಡುತ್ತಿರುವಾಗಲೇ ಅದನ್ನು ಬೃಹತ್ ವಿವಾದವನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ವಿರೋಧ ಪಕ್ಷಗಳಿಗೆ ಜನರ ಮೌಢ್ಯವನ್ನು ತೊಡೆದು ಹಾಕುವ ಹಂಬಲವೇ ಇಲ್ಲ ಎಂದು ಟೀಕಿಸಿದರು. ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀ ಮುಮ್ಮಡಿ ಮಹಾಲಿಂಗಸ್ವಾಮೀಜಿ, ಮರಳೇ ಗವಿಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಶಿವಗಿರಿಕ್ಷೇತ್ರದ ಶ್ರೀ ಅನ್ನದಾನಸ್ವಾಮೀಜಿ, ಆನೇಕಲ್ ರಾಜಾಪುರಮಠದ ಶ್ರೀ ರಾಜೇಶ್ವರ ಶಿವಾಚಾರ್ಯಸ್ವಾಮೀಜಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಮುಖ್ಯಅತಿಥಿಗಳಾಗಿ ಶಾಸಕ ಡಿ.ಕೆ.ಶಿವಕುಮಾರ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರಬಿದರಿ, ಮಾಜಿ ವಿಪ ಸದಸ್ಯ ಎಸ್.ರವಿ ಪಾಲ್ಗೊಂಡಿದ್ದರು.