21ಕ್ಕೆ ಶಾಶ್ವತ ನೀರಾವರಿ ಒತ್ತಾಯಕ್ಕಾಗಿ ಜಿಲ್ಲಾ ಹೋರಾಟ ಸಮಿತಿ ರಚನೆ: ಕಲ್ಯಾಣಕುಮಾರ್
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಂಸದರು ಮತ್ತು ಜಿಲ್ಲಾ ಮತ್ತು ತಾಪಂ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ರೈತ ಮುಖಂಡರ ಸಭೆಯನ್ನು ನ.21ರಂದು ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ಕರೆಯಲಾಗಿದ್ದು ಅಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೋರಾಟ ಸಮಿತಿ ರಚಿಸಲಾಗುವುದು ಎಂದು ಜಿಲ್ಲಾ ಸಂಚಾಲಕರಾದ ಕಲ್ಯಾಣಕುಮಾರ್ ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಶ್ವತ ನೀರಾವರಿ ಯೋಜನೆ ಬಗ್ಗೆ ಇತ್ತೀಚೆಗೆ ಬಾಗೇಪಲ್ಲಿಯಲ್ಲಿ ರೈತ ಮುಖಂಡರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋದ ಸಂಧರ್ಭದಲ್ಲಿ ಪೊಲೀಸರು ರೈತ ಮುಖಂಡರ ಮೇಲೆ ಲಾಠಿಚಾರ್ಜ್ ಮಾಡಿ ದೂರು ದಾಖಲಿಸಿಕೊಂಡಿರುವುದನ್ನು ಖಂಡಿಸಿದರು.
ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಒಳಗೊಂಡಂತೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರೀವರಿ ಯೋಜನೆ ಅಗತ್ಯವಾಗಿದ್ದು ನೀರಾವರಿ ತಜ್ಞ ಪರಮಶಿವಯ್ಯ ವರದಿಯಂತೆ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಒತ್ತಾಯ ತರಲು ಜಿಲ್ಲಾ ಹೋರಾಟ ಸಮಿತಿ ರಚಿಸಲಾಗುತ್ತಿದೆ ಎಂದು ರೈತ ಮುಖಂಡರಾದ ಎ.ವಿ.ನಾರಾಯಣಸ್ವಾಮಿ ತಿಳಿಸಿದರಲ್ಲದೆ ಈ ಹೋರಾಟದ ಸಂಘಟನೆಗೆ ಯಾವುದೇ ಜಾತಿ ಮತ್ತು ರಾಜಕೀಯ ಪಕ್ಷ ಇರುವುದಿಲ್ಲ ಎಲ್ಲರದು ನೀರು ಬಳಸುವ ಜಾತಿಯವರಾಗಿರುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಸರ್ಕಾರ ಶಾಶ್ವತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ತರದೇ ಇದ್ದಲ್ಲಿ ಇನ್ನೂ ಉಗ್ರವಾದ ಹೋರಾಟ ಮಾಡಲಾಗುವುದು. ಅಲ್ಲದೆ ತಾಲೂಕು ಕೇಂದ್ರಗಳಲ್ಲಿ ಬಂದ್ಗೆ ಕರೆ ನೀಡಲಾಗುವುದು ಎಂದರು. ಸಭೆಯಲ್ಲಿ ತಾಲೂಕು ರೇಷ್ಮೆ ಹೋರಾಟಗಾರರ ಸಮಿತಿ ಅಧ್ಯಕ್ಷ ಜನಾರ್ದನ್, ಸಾವುಕನಹಳ್ಳಿ ಗೋಪಾಲಕೃಷ್ಣ ಉಪಸ್ಥಿತರಿದ್ದರು.