ಆಶ್ರಮ ಶಾಲೆ ಮಕ್ಕಳಿಗೆ ಕತ್ತಲ ಶಿಕ್ಷೆ
ಕ.ಪ್ರ. ವಾರ್ತೆ ರಾಮನಗರ ನ.18
ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಧೀನದ ಸರ್ಕಾರಿ ಆಶ್ರಮ ಶಾಲೆ ಮಕ್ಕಳು ಕಳೆದೊಂದು ತಿಂಗಳಿಂದ ಕರೆಂಟ್ ಕತ್ತಲಲ್ಲೇ ರಾತ್ರಿಗಳನ್ನು ದೂಡುತ್ತಿರುವ ಬಗ್ಗೆ ಬೇಜವಾಬ್ದಾರಿ ಅಧಿಕಾರಿಗಳನ್ನು ಜಿ.ಪಂ. ಅಧ್ಯಕ್ಷ ಎಚ್.ಸಿ. ರಾಜು ತರಾಟೆಗೆ ತೆಗೆದುಕೊಂಡರು.
ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಲ್ ಬಾಕಿ ಕಾರಣಕ್ಕೆ ಸದರಿ ವಸತಿ ಶಾಲೆಯ ವಿದ್ಯುತ್ ಸಂಪರ್ಕ ಕಡಿದು ಹಾಕಿದ ಬೆಸ್ಕಾಂ ಸಿಬ್ಬಂದಿ ಕ್ರಮಕ್ಕೂ ಆಕ್ಷೇಪಿಸಿದರು. ರಾಮನಗರ ತಾಲೂಕಿನ ಬಿಡದಿ ಬಳಿಯ ಆಶ್ರಮ ಶಾಲೆಯ ವಿದ್ಯುತ್ ಕಡಿತ ವಿಷಯವನ್ನು ಆ ಭಾಗವನ್ನು ಪ್ರತಿನಿಧಿಸುತ್ತಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್. ಚಂದ್ರ ಗಮನಕ್ಕೆ ತಂದಾಗ ಅಧ್ಯಕ್ಷ ರಾಜು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.
ವಿದ್ಯುತ್ ಕಡಿತಗೊಂಡು ಎಷ್ಟು ದಿನದ ನಂತರ ಆಶ್ರಮ ಶಾಲೆಗೆ ಭೇಟಿ ನೀಡಿದಿರಿ, ಬಿಲ್ ಬಾಕಿ ಉಳಿಸಿಕೊಳ್ಳಲು ಕಾರಣವೇನು, ಮಕ್ಕಳು ಅನುಭವಿಸಿದ ಸಂಕಷ್ಟದ ಅರಿವು ನಿಮಗಿದೆಯೇ ಎಂದು ಅಧ್ಯಕ್ಷರು, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾಧಿಕಾರಿ ಸುಮಯ್ಯ ರೂಹಿ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಯು ಬಾಕಿ ಪಾವತಿಸದ ಕಾರಣಕ್ಕೆ ವಿದ್ಯುತ್ ಕಡಿತ ವಿಷಯ ತಿಳಿಯುತ್ತಿದ್ದಂತೆಯೇ ಆಶ್ರಮ ಶಾಲೆಗೆ ತೆರಳಿ ಪರಿಶೀಲಿಸಿದ್ದು, ಖುದ್ದು ತಾವೇ ಬಿಲ್ ಪಾವತಿಸಿ ವಿದ್ಯುತ್ ಸಂಪರ್ಕ ಕೊಡಿಸುವುದಾಗಿ ವಿವರಣೆ ನೀಡಿದರು. ಇದರಿಂದ ಸಮಾಧಾನಗೊಳ್ಳದ ಅಧ್ಯಕ್ಷರು, ವಿದ್ಯುತ್ ಬಿಲ್ ಬಾಕಿಯಂತಹ ಸಣ್ಣ ಕೆಲಸಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಯೇ ಹೋಗುತ್ತೀರೆಂದರೆ ಸಂಬಂಧಿಸಿದ ಸಿಬ್ಬಂದಿ ಏನು ಮಾಡುತ್ತಿದ್ದಾರೆ. ಅವರ ಮೇಲೆ ನಿಮಗೆ ಎಷ್ಟರ ಮಟ್ಟಿಗೆ ಹಿಡಿತವಿದೆ ಎನ್ನುವುದು ತಿಳಿಯುತ್ತದೆ ಎಂದು ಟೀಕಿಸಿದರು.
ಈ ಪ್ರಕರಣ ಸಂಬಂಧ ಸದರಿ ಆಶ್ರಮ ಶಾಲೆಯ ವಾರ್ಡನ್ ಮತ್ತು ಸಂಬಂಧಿಸಿದ ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಿ, ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಸಿಇಒ ಡಾ. ವೆಂಕಟೇಶ್ ಅಧಿಕಾರಿಗೆ ಸೂಚನೆ ನೀಡಿದರು.
ಮಾಹಿತಿ ನೀಡದ್ದಕ್ಕೆ ಆಕ್ರೋಶ: ಜಿಲ್ಲಾದ್ಯಂತ ಇರುವ ವಿದ್ಯಾರ್ಥಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾರ್ಡನ್, ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳ ವಿವರವನ್ನು ಭಾವಚಿತ್ರ ಸಹಿತ ಒದಗಿಸುವಂತೆ ಒಂದು ತಿಂಗಳ ಹಿಂದೆಯೇ ಸೂಚಿಸಿದ್ದರೂ ಇದುವರೆಗೆ ನೀಡದ ಬಗ್ಗೆ ಅಧ್ಯಕ್ಷ ರಾಜು ಕಿಡಿ ಕಾರಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ನಾನೇ ಸೂಚಿಸುವ ಕೆಲಸ ಮಾಡಿಲ್ಲ ಎಂದಾದರೆ ಉಳಿದ ಅಧಿಕಾರಿಗಳು, ಸಾರ್ವಜನಿಕರಿಗೆ ನೀವು ಎಷ್ಟರ ಮಟ್ಟಿಗೆ ಮಾಹಿತಿ ಒದಗಿಸುತ್ತೀರಿ ಎಂದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಇಲಾಖೆ ಅಧಿಕಾರಿಗಳ ವಿರುದ್ಧ ಅವರು ಹರಿಹಾಯ್ದರು.
ಈ ಜಿಲ್ಲೆಯಲ್ಲಿರುವ ಒಟ್ಟು ಹಾಸ್ಟೆಲ್, ಆ ಪೈಕಿ ಸ್ವಂತ ಕಟ್ಟಡ ಹೊಂದಿದ ಮತ್ತು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಹಾಸ್ಟೆಲ್ಗಳ ವಿವರ ನೀಡಬೇಕು. ವಸತಿ ನಿಲಯಗಳ ಜಾಗ ಅತಿಕ್ರಮಣದ ವಿರುದ್ಧ ಕೈಗೊಂಡಿರುವ ಕ್ರಮವನ್ನು ಮುಂದಿನ ಸಭೆಗೆ ಹಾಜರುಪಡಿಸಬೇಕು ಎಂದು ತಾಕೀತು ಮಾಡಿದರು.
ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಸ್ಥಳಾವಕಾಶ ಕೋರಿ ಶೀಘ್ರವೇ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಬೇಕು. ಹಾಲಿ ಇರುವ ಹಾಸ್ಟೆಲ್ ಜಾಗ ಮತ್ತು ಕಟ್ಟಡದ ದಾಖಲಾತಿಗಳನ್ನು ಜಿ.ಪಂ.ಗೆ ಒದಗಿಸಬೇಕು ಎಂದು ಸೂಚಿಸಿದರು.
ಪಟ್ಟಿ ಬಗ್ಗೆ ಅಸಮಾಧಾನ: ಕಾಲುಬಾಯಿ ಜ್ವರಕ್ಕೆ ತುತ್ತಾದ ರಾಸುಗಳ ಬಗ್ಗೆ ಸಮೀಕ್ಷಾ ಕಾರ್ಯ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷ ರಾಜು, ಶೀಘ್ರವೇ ಪಟ್ಟಿ ಅಂತಿಮಗೊಳಿಸಿ ಎಲ್ಲ ಸಂತ್ರಸ್ತ ರೈತರಿಗೂ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಪರಿಹಾರ ವಿತರಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದ ಸಲ್ಲದು. ಯಾವೊಬ್ಬ ರೈತನೂ ಪರಿಹಾರದಿಂದ ವಂಚಿತ ಆಗದಂತೆ ನೋಡಿಕೊಳ್ಳಬೇಕು. ರೋಗ ಮರುಕಳಿಸದಂತೆ ಫೆಬ್ರವರಿಗೆ ಮುನ್ನವೇ ಲಸಿಕೆ ಹಾಕುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಸಬ್ಸಿಡಿ ವಿತರಣೆಗೆ ಕ್ರಮ: ಕಳೆದ ವರ್ಷದ ಬರ ಹಿನ್ನೆಲೆಯಲ್ಲಿ ನೀಡಲಾಗುತ್ತಿರುವ ಪ್ರೋತ್ಸಾಹ ಧನ ವಿಷಯದಲ್ಲಿ ಗೊಂದಲ ಎದುರಾಗಿದೆ. ಈ ಪೈಕಿ ಚನ್ನಪಟ್ಟಣದಲ್ಲೇ ಹೆಚ್ಚು ದೂರುಗಳಿವೆ. ಸಮಸ್ಯೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆ ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು.
ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಸಲ್ಲದು. ಕಾನೂನು ಮುಂದಿಟ್ಟುಕೊಂಡು, ತೊಂದರೆ ನೀಡುವುದೂ ಸರಿಯಲ್ಲ. ಅಂತೆಯೇ ಬಿಪಿಎಲ್ ಕಾರ್ಡು ಹಂಚಿಕೆಯಲ್ಲಿ ಗೊಂದಲ ನಿವಾರಿಸಿ, ಕಾರ್ಯಕ್ರಮ ಚುರುಕುಗೊಳಿಸಿ ಎಂದು ಅವರು ತಿಳಿಸಿದರು.
ತ್ವರಿತ ಕ್ರಮಕ್ಕೆ ಸೂಚನೆ: ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಾಲ ಮನ್ನಾ ಪತ್ರವನ್ನು ಜರೂರಾಗಿ ನೀಡಬೇಕು. ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡುವುದು ವಿಳಂಬ ಆಗಕೂಡದು ಎಂದು ರಾಜು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎಸ್.ಬಿ. ಗೌರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರಘುಕುಮಾರ್, ಉಪ ಕಾರ್ಯದರ್ಶಿ ಆರ್. ಲತಾ, ಮುಖ್ಯ ಯೋಜನಾಧಿಕಾರಿ ಧನುಷ್ ಭಾಗವಹಿಸಿದ್ದರು.