ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾಯಿದೆ ತಿದ್ದುಪಡಿಗೆ ಒತ್ತಾಯ

Srinivasa Murthy VN
Updated On : 19 Nov 2013, 12:44 pm

ಹೊಸಕೋಟೆ: ಪ್ರಸ್ತುತ ಜಾರಿಯಲ್ಲಿರುವ ದೌರ್ಜನ್ಯ ತಡೆ ಕಾಯಿದೆ ನ್ಯೂನತೆಗಳಿಂದ ಕೂಡಿದ್ದು ಸೂಕ್ತ ತಿದ್ದುಪಡಿ ತರಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು. ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಿದ್ದ ದಲಿತ ಹಕ್ಕುಗಳ ತಾಲೂಕು ಸಮಾವೇಶ ಉದ್ಘಾಟಿಸಿ ಮಾತನಾಡಿ, ದಲಿತರು ಪ್ರತಿದಿನ ಜಾತಿ ನಿಂದನೆ, ಅಸ್ಪೃಶ್ಯತೆಗೆ ಒಳಗಾಗುವುದು ಸಾಮಾನ್ಯವಾಗುತ್ತಿದ್ದು ಮೌಢ್ಯ ಆಚರಣೆಗಳ ಬಗ್ಗೆ ಜಾಗೃತರಾದಲ್ಲಿ ಮಾತ್ರ ಸಾಮಾಜಿಕ ಬೆಳವಣೆಗೆ ಹೊಂದಲು ಸಾಧ್ಯ. ಸಂಘಟಿತ ಹೋರಾಟ ಮಾಡಿದಲ್ಲಿ ಮಾತ್ರ ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಬಹುದಾಗಿದೆ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.
ದಲಿತರಿಗೆ ಭೂಮಿ ಹಾಗೂ ನಿವೇಶನ ಹಕ್ಕುಪತ್ರಗಳನ್ನು ನೀಡಬೇಕು, ಜಾತಿ ಪದ್ಧತಿ,ಅಸ್ಪೃಶ್ಯತೆ, ದೇವಾಲಯಗಳ ಪ್ರವೇಶ ನಿರಾಕರಣೆ, ಮಡೆ ಸ್ನಾನ, ಪಂಕ್ತಿಬೇಧ, ಜಾತಿ ಆಧಾರಿತ ಬಡಾವಣೆ ನಿರ್ಮಾಣ ನಿಷೇಧಿಸಬೇಕು. ದಲಿತ ಕಾಲೋನಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ, ಗ್ರಂಥಾಲಯ ವ್ಯವಸ್ಥೆ ಕಲ್ಪಿಸಬೇಕು, ಖಾಲಿಯಿರುವ ಆರು ಸಾವಿರ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು,ಎಂದು ಒತ್ತಾಯಿಸಿದರು.  ಚಂದ್ರತೇಜ್ವಸಿ, ಸಿಐಟಿಯು ತಾಲೂಕು ಅಧ್ಯಕ್ಷ ಹರೀಂದ್ರ, ರೈತ ಸಂಘದ ಮುಖಂಡ ಮನೋಹರ್ ಸಹ ಮಾತನಾಡಿದರು. ಮೋಹನ್ಬಾಬು, ಶ್ರೀನಿವಾಸಾಚಾರ್ ಮತ್ತಿತರರು ಉಪಸ್ಥಿತರಿದ್ದರು.

'ಗಡಿ ಶಾಲೆಗಳ ಮೂಲ ಸೌಕರ್ಯಕ್ಕೆ ಒತ್ತು'
ಆನೇಕಲ್:
ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಯಾವುದೇ ಕೊರತೆಯುಂಟಾಗದಂತೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಮಿಳುನಾಡಿನ ಥಳಿ ವಿಧಾನಸಭಾ ಕ್ಷೇತ್ರದ ಶಾಸಕ ರಾಮಚಂದ್ರ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸಮಾನ ಮನಸ್ಕರ ಕನ್ನಡ ಬಳಗದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದಗೊಂಡನಹಳ್ಳಿ, ಹುಚ್ಚನಹಳ್ಳಿ, ಕನಮನಹಳ್ಳಿ, ಬ್ಯಾಲಗೊಂಡನಹಳ್ಳಿ ಸೇರಿದಂತೆ ತಮಿಳುನಾಡಿನ ಗಡಿಯಲ್ಲಿ ಕನ್ನಡ ಶಾಲೆಗಳಿವೆ. ಈ ಶಾಲೆಗಳ ಶಿಕ್ಷಕರ ಸಮಸ್ಯೆ ಪರಿಹರಿಸಲು ವಿಧಾನಸಭೆಯಲ್ಲಿ ಒತ್ತಾಯ ಮಾಡಲಾಗುವುದು ಎಂದರು.
ಥಳಿ ಪ್ರದೇಶದಲ್ಲಿನ ಬಹುತೇಕ ಗ್ರಾಮಗಳ ಮಾತೃಭಾಷೆ ಕನ್ನಡವೇ ಆಗಿದೆ, ವ್ಯವಹಾರಿಕವಾಗಿ ತಮಿಳು ಬಳಕೆಯಲ್ಲಿದೆ. ಹಾಗಾಗಿ ಈ ಭಾಗಗಳ ಕನ್ನಡಿಗರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಅವರು ತಿಳಿಸಿದರು.
ಗುಮ್ಮಳಾಪುರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಹಣ ಬಿಡುಗಡೆಯಾಗಿದ್ದರೂ ಜಾಗದ ಸಮಸ್ಯೆಯಿಂದ ಕಟ್ಟಡ ನಿರ್ಮಾಣವಾಗಿಲ್ಲ, ಈ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿ ಉತ್ತಮ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದರು. ಸಮಾನ ಮನಸ್ಕರ ಕನ್ನಡ ಬಳಗದ ಆದೂರು ಪ್ರಕಾಶ್ ಮಾತನಾಡಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಕೆ. ವಿಧಾತ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ. ಗವಿರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಡಿ. ವೆಂಕಟೇಶ್, ಎಂ. ಪ್ರಕಾಶ್ ಮೂರ್ತಿ, ಜಿ. ನಾಗರಾಜು, ಬಿ.ವಿ. ಅರಳಪ್ಪನವರ್, ಡಿ.ಎನ್. ವೀರಭದ್ರಯ್ಯ ಹಾಜರಿದ್ದರು. ಚಂದ್ರಶೇಖರ್ ಮನವಿ ಪತ್ರವನ್ನು ವಾಚನ ಮಾಡಿ ಶಾಸಕ ರಾಮಚಂದ್ರ ಅವರಿಗೆ ಹಸ್ತಾಂತರಿಸಿದರು.

ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ
ನೆಲಮಂಗಲ:
ತಾಲೂಕಿನ ಅರಿಸಿನಕುಂಟೆ ಗ್ರಾಮದಲ್ಲಿ ನ.20ರಿಂದ 26ರವರೆಗೆ ಆಂಜನೇಯಸ್ವಾಮಿ, ಬಸವಣ್ಣ ದೇವರು, ಮಾರಮ್ಮ ದೇವತೆ ಸಮೇತ ನಾಗದೇವತಾ ಪುನರ್ ಪ್ರತಿಷ್ಠಾಪನಾ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇಂಧನ ಮತ್ತು ಕಂಪನಿ ವ್ಯವಹಾರಗಳ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಖಾತೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಮುಜರಾಯಿ ಮತ್ತು ಸಕ್ಕರೆ ಸಚಿವ ಪ್ರಕಾಶ್ ಬಾಬಣ್ಣ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಇ. ಕೃಷ್ಣಪ್ಪ, ತಾ.ಪಂ. ಉಪಾಧ್ಯಕ್ಷ ಎನ್. ಶ್ರೀನಿವಾಸಮೂರ್ತಿ, ಜಿ.ಪಂ. ಸದಸ್ಯರಾದ ಬಿ.ಎಂ. ಕಾಂತರಾಜು, ಎಂ.ಎನ್. ರಾಂ, ಸುನಂದ ಶಿವಕುಮಾರ್, ವೇಣುಗೋಪಾಲ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಸಿ. ರಾಮಾಂಜಿನಯ್ಯ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ, ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಅಧ್ಯಕ್ಷ ಕೆ.ಆರ್. ಗುರುಪ್ರಕಾಶ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಎಂ.ಜಿ. ತಿಮ್ಮರಾಜು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement