ದೊಡ್ಡಬಳ್ಳಾಪುರದಲ್ಲಿ ಲೈಂಗಿಕ ಕಾರ್ಮಿಕರ ಪ್ರತಿಭಟನೆ
ದೊಡ್ಡಬಳ್ಳಾಪುರ: ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹಣಕಾಸಿನ ನೆರವಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಮತ್ತು ವಿಜಯಪುರ ಪಟ್ಟಣಗಳಲ್ಲಿ ಮಹಿಳಾ ಲೈಂಗಿಕ ಕಾರ್ಮಿಕರಿಗೆ ಕಾರ್ಯಗತಗೊಳಿಸಿರುವ ಅನೇಕ ಸವಲತ್ತುಗಳನ್ನು ವಂಚಿಸುತ್ತಿದೆ ಎಂದು ಕರ್ನಾಟಕ ಲೈಂಗಿಕ ಕಾರ್ಮಿಕರ ಯುನಿಯನ್ ಆರೋಪಿಸಿದೆ.
ಇಲ್ಲಿನ ಡಿ ಕ್ರಾಸ್ ರಸ್ತೆಯಲ್ಲಿ ಸೋಮವಾರದಿಂದ 2 ದಿನಗಳ ಕಾಲ ಪ್ರತಿಭಟನಾ ಧರಣಿ ಆರಂಭಿಸಿರುವ ಲೈಂಗಿಕ ಕಾರ್ಮಿಕರು, ಕೂರ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಾರ್ಮಿಕರ ಮತ್ತು ಎಚ್ಐವಿ ನಿಯಂತ್ರಣ ಕಾರ್ಯಕ್ರಮದ ಗುರಿ-ಉದ್ದೇಶಗಳಿಗೆ ವಿರುದ್ಧವಾಗಿ ಸಂಸ್ಥೆ ನಡೆದುಕೊಳ್ಳುತ್ತಿದೆ. ಯೋಜನೆಯ ಮೇಲ್ಮಟ್ಟದ ಅಧಿಕಾರಿಗಳು ಸಿಬ್ಬಂದಿಗೆ ವಂಚಿಸುತ್ತಿದ್ದಾರೆ. ವೇತನ ಸರಿಯಾಗಿ ನೀಡುತ್ತಿಲ್ಲ. ಒಬ್ಬರ ಸಂಬಳವನ್ನು ಬೇರೊಬ್ಬರ ಹೆಸರಿನಲ್ಲಿ ಸುಳ್ಳು ಸಹಿ ಹಾಕಿ, ದಾಖಲೆ ಸೃಷ್ಟಿಸಿ ಕಬಳಿಸುತ್ತಿದ್ದಾರೆ. ಲೈಂಗಿಕ ಕಾರ್ಮಿಕರ ಎಚ್ಐವಿ ಸ್ಥಿತಿಗತಿ ಗೌಪ್ಯತೆಯನ್ನು ಬಹಿರಂಗಗೊಳಿಸುವುದು, ದೈಹಿಕ ಹಲ್ಲೆ, ಜಾತಿ-ಧರ್ಮದ ಹೆಸರಿನಲ್ಲಿ ನಿಂದನೆ ಇತ್ಯಾದಿ ದೌರ್ಜನ್ಯ ನಡೆಯುತ್ತಿದೆ. ಕಾರಣ ನೀಡದೆ ಕಾರ್ಮಿಕ ಕಾನೂನುಗಳ ಉಲ್ಲಂಘನೆ ನಡೆಯುತ್ತಿದ್ದು, ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವ ಹುನ್ನಾರಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಯೋಜನಾ ನಿರ್ದೇಶಕರಿಗೆ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕಕ್ಕೆ ದೂರು ನೀಡಿ 4 ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ರಾಜ್ಯದ ಹಲವು ಸಂಸ್ಥೆಗಳನ್ನು ಕಡೆಗಣಿಸಿ ತಮಿಳುನಾಡು ಮೂಲಕ ಕೂರ್ ಸಂಸ್ಥೆಗೆ ಯೋಜನೆ ಉಸ್ತುವಾರಿ ವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಹಕ್ಕೊತ್ತಾಯ: ಈ ಕೂಡಲೇ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಕೂರ್ ಸಂಸ್ಥೆಗೆ ನೀಡುವರ ಯೋಜನೆ ರದ್ದಾಗಬೇಕು. ವೇತನ ಪಾವತಿಯಾಗದ ಸಿಬ್ಬಂದಿಗೆ ಕೂಡಲೇ ವೇತನ ಪಾವತಿ ಮಾಡಬೇಕು. ವಜಾ ಮಾಡಲಾಗಿರುವ ಸಿಬ್ಬಂದಿಗೆ ಪರಿಹಾರ ನೀಡಬೇಕು. ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಲೈಂಗಿಕ ಕಾರ್ಮಿಕರ ಬಗ್ಗೆ ಮತ್ತು ಮಾನವಹಕ್ಕುಗಳ ಬಗ್ಗೆ ಗೌರವವಿರುವ ಸಂಸ್ಥೆಗಳಿಗೆ ಎಚ್ಐವಿ ನಿಯಂತ್ರಣ ಯೋಜನೆಯನ್ನು ನೀಡಬೇಕು ಎಂಬ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ಕರ್ನಾಟಕ ಲೈಂಗಿಕ ಕಾರ್ಮಿಕರ ಯುನಿಯನ್ ಅಧ್ಯಕ್ಷೆ ನಿಶಾ ಗೂಳೂರು, ಪ್ರಧಾನ ಕಾರ್ಯದರ್ಶಿ ಭಾರತಿ, ಕರ್ನಾಟಕ ಅಲ್ಪಸಂಖ್ಯಾತ ವೇದಿಕೆಯ ವೀಣಾ, ಸಹಾಯಕ ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ್ ನೇತೃತ್ವ ವಹಿಸಿದ್ದರು.
ಕಸಾಯಿಖಾನೆಗಳ ಎತ್ತಗಂಡಿಗೆ ಗ್ರಾಮಸ್ಥರ ಆಗ್ರಹ
ಕ.ಪ್ರ. ವಾರ್ತೆ ಸೂಲಿಬೆಲೆ ನ.18
ಪಟ್ಟಣದ ಸಂತೆ ಮೈದಾನದಲ್ಲಿರುವ ಕಸಾಯಿ ಖಾನೆಗಳ ಸುತ್ತಮುತ್ತ ದೇಗುಲ ಹಾಗೂ ಅಂಗನವಾಡಿ ಕೇಂದ್ರವಿರುವ ಕಾರಣ ಪರಿಸರ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದು, ಇಲ್ಲಿಂದ ಇವುಗಳನ್ನು ಎತ್ತಂಗಡಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಮತ್ತು ದೇಗುಲ ಸಮಿತಿ ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ನಾರಾಯಣಪ್ಪ ಹಾಗೂ ಪಿಡಿಒ ಸುಂದರ್ ಅವರಿಗೆ ಮನವಿ ಸಲ್ಲಿಸಿದ್ದು, ಸಂತೆ ಮೈದಾನದಲ್ಲಿರುವ ವಿನಾಯಕ ದೇಗುಲ ಆವರಣದಲ್ಲಿ ಕಳೆದ 40 ವರ್ಷಗಳಿಂದ ಅಯ್ಯಪ್ಪಸ್ವಾಮಿ ಭಕ್ತರು ಗುಡಿಗಳನ್ನು ನಿರ್ಮಾಣ ಮಾಡಿಕೊಂಡು ವ್ರತ ನಡೆಸುತ್ತಾರೆ. ಇಲ್ಲಿಯೇ ನವಗ್ರಹಗಳು, ನಾಗದೇವತೆಗಳು ಹಾಗೂ ಆಂಜಿನೇಯಸ್ವಾಮಿ ದೇವರ ವಿಗ್ರಹಗಳಿದ್ದು, ಸಮುದಾಯ ಭವನ ಸಹ ಇದೆ. ಇಲ್ಲಿ ಆಗಾಗ್ಗೆ ಮದುವೆ ಕಾರ್ಯಗಳು ನಡೆಯುತ್ತವೆ. ಇದಕ್ಕೆ ಹೊಂದಿಕೊಂಡಂತೆ ಗ್ರಾಪಂ ಜಮೀನಿನಲ್ಲಿ ಕೆಲ ವರ್ಷಗಳಿಂದ ಕಸಾಯಿ ಖಾನೆ ಅಂಗಡಿಗಳಿದ್ದು, ಇಲ್ಲಿಂದ ಹೊರ ಬೀಳುವ ತ್ಯಾಜ್ಯದ ದುರ್ನಾತದಿಂದ ಭಕ್ತರಿಗೆ ಕಿರಿಕಿರಿಯಾಗುತ್ತಿದೆ. ಅಲ್ಲದೇ, ಮಾಂಸದ ಚೂರುಗಳನ್ನು ಹೊತ್ತು ಕಾಗೆ, ಹದ್ದು, ನಾಯಿಗಳು ದೇಗುಲ ಆವರಣದ ಪರಿಸರವನ್ನು ಹಾಳು ಮಾಡುತ್ತಿವೆ. ಇಲ್ಲಿಗೆ ಸಮೀಪದಲ್ಲಿಯೇ ಅಂಗನವಾಡಿ ಕೇಂದ್ರ ನಿರ್ಮಾಣವಾಗುತ್ತಿದ್ದು. ಮಕ್ಕಳ ಪಾಠ, ಪ್ರವಚನಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಕೂಡಲೇ ಇಲ್ಲಿಂದ ಕಸಾಯಿ ಖಾನೆ ಅಂಗಡಿಗಳನ್ನು ತೆರೆವು ಮಾಡುವಂತೆ ಒತ್ತಾಯಿಸಿದ್ದಾರೆ.
ಮನವಿಗೆ ಸ್ಪಂದಿಸಿದ ಗ್ರಾಪಂ ಅಧಿಕಾರಿಗಳು ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ದೇಗುಲ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.