ಪರಮಶಿವಯ್ಯ ವರದಿ ಜಾರಿಗೆ 27ರಂದು ಪ್ರತಿಭಟನೆ
ರಾಮನಗರ: ಬರದಿಂದ ತತ್ತರಿಸುವ ಜಿಲ್ಲೆಗೆ ನೀರಾವರಿ ತಜ್ಞ ಡಾ. ಪರಮಶಿವಯ್ಯ ವರದಿಯನ್ನು ಜಾರಿಗೊಳಿಸಿ, ಶಾಶ್ವತ ನೀರಾವರಿ ಕಲ್ಪಿಸಬೇಕು ಎಂದು ಆಗ್ರಹಿಸಿ ನ.27ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸು.ತ. ರಾಮೇಗೌಡ ತಿಳಿಸಿದರು.
ಜಿಲ್ಲೆಯ ಕೆರೆ, ಕುಂಟೆಗಳು ಬತ್ತಿಹೋಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ರೈತರು ಕೊರೆಸಿದ್ದ ಸುಮಾರು 49 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿಹೋಗಿವೆ. ಇದರಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಡಾ. ಪರಮಶಿವಯ್ಯ ವರದಿ ಜಾರಿಗೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಪ್ರತಿಭಟನೆ ಅನಿವಾರ್ಯ ಎಂದು ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿರುವ ರೈತ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು. ಪಶ್ಚಿಮ ಘಟ್ಟದಿಂದ ವ್ಯರ್ಥವಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತಿರುವ 11 ನದಿಗಳ ನೀರನ್ನು ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಗೆ ಹರಿಸುವ ಯೋಜನೆಯನ್ನು ನೀರಾವರಿ ತಜ್ಞ ಡಾ.ಪರಮಶಿವಯ್ಯ ರೂಪಿಸಿದ್ದಾರೆ. ಇದರಿಂದ ಯಾವುದೇ ಪರಿಸರ ನಾಶವಾಗಲೀ, ಜೀವ ವೈವಿಧ್ಯತೆಗಳಿಗೆ ಧಕ್ಕೆಯಾಗುವುದಿಲ್ಲ. ಗುರುತ್ವಾಕರ್ಷಣೆ ಆಧಾರದ ಮೇಲೆ ನೀರು ಹರಿಯುವುದರಿಂದ ಯೋಜನೆಗೆ ತಗಲುವು ವೆಚ್ಚವೂ ಕಡಿಮೆಯಾಗಲಿದೆ ಎಂದರು. ಈ ಯೋಜನೆಯ ವ್ಯಾಪ್ತಿಗೆ 6 ಜಿಲ್ಲೆಗಳು ಬರಲಿದ್ದು, ಈ ಯೋಜನೆ ಜಾರಿಯಾದಲ್ಲಿ ಈ ಜಿಲ್ಲೆಗಳ ರೈತರ ಬಹುದಿನಗಳ ಕನಸು ನನಸಾಗಲಿದೆ. ಇಲ್ಲದಿದ್ದರೆ ಈ ಜಿಲ್ಲೆಗಳು ಬೆಂಗಾಡಾಗಿ ಮಾರ್ಪಟ್ಟು, ಕೃಷಿಯನ್ನೇ ಅವಲಂಬಿಸಿರುವ ರೈತರು ಬೀದಿಗೆ ಬೀಳಲಿದ್ದಾರೆ. ಎಷ್ಟೇ ಹಣ ಖರ್ಚಾದರೂ ಸರಿ ಯೋಜನೆಯನ್ನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ 10 ವರ್ಷದಿಂದಲೂ ಯೋಜನೆಯ ಜಾರಿಗಾಗಿ 6 ಜಿಲ್ಲೆಯ ಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಹೋರಾಟಗಳನ್ನೂ ಹಮ್ಮಿಕೊಳ್ಳಲಾಗಿದೆ. ಆದಾಗ್ಯೂ ದಪ್ಪ ಚರ್ಮದ ಜನಪ್ರತಿನಿಧಿಗಳಾಲೀ, ಅಧಿಕಾರಶಾಹಿ ವರ್ಗವಾಗಲೀ ಇತ್ತ ಗಮನ ಹರಿಸಿಲ್ಲ. ಗಾಢ ನಿದ್ರೆಯಲ್ಲಿರುವ ಇವರನ್ನು ಚುಚ್ಚಿ ಮೇಲಕ್ಕೇಳಿಸಲು ಜಿಲ್ಲೆಯ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಭಾಗಿಗಳಾಗಬೇಕು ಎಂದು ಅವರು ಕರೆ ನೀಡಿದರು.
ಶಿಷ್ಟಾಚಾರ ಉಲ್ಲಂಘನೆ
ಮಾಗಡಿ: ನಾಡಹಬ್ಬಗಳ ಆಚರಣಾ ಸಮಿತಿ ನ.20ರಂದು ಆಚರಿಸಲಿರುವ ಕನಕದಾಸ ಜಯಂತಿ ಸಮಾರಂಭಕ್ಕೆ ಮುದ್ರಿಸಿರುವ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಮತ್ತು ಕುರುಬರ ಸಮಾಜವನ್ನು ಕಡೆಗಣಿಸಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಬೀರಯ್ಯ, ಕಾರ್ಯದರ್ಶಿ ಎಚ್. ಶಿವಕುಮಾರ್ ಮತ್ತು ಕೇಂದ್ರ ಪ್ರಾದೇಶಿಕ ಸಂಘದ ಸದಸ್ಯೆ ಎಚ್. ಯಶೋಧಮ್ಮ ಇತರರು ತೀವ್ರವಾಗಿ ಆರೋಪಿಸಿದ್ದಾರೆ. ತಾಲೂಕು ಆಡಳಿತ ಏಕಪಕ್ಷೀಯವಾದ ಕಾರ್ಯಕ್ರಮವನ್ನು ಕೂಡಲೇ ಕೈಬಿಡಬೇಕು. ಕುರುಬರ ಸಮಾಜದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರನ್ನು ಹೆಸರನ್ನು ಸೂಕ್ತ ಸ್ಥಳದಲ್ಲಿ ಮುದ್ರಿಸಿ ಆಹ್ವಾನಿಸಬೇಕು. ಕುರುಬರ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ರೂಪಿಸುವಂತೆ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶಿವಕುಮಾರ್ ಅವರಲ್ಲಿ ಆಗ್ರಹಿಸಿದ್ದಾರೆ.