ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

'ಬರ ಭಾಗ್ಯ' ಘೋಷಣೆಯಲ್ಲೂ ತಾರತಮ್ಯ

Srinivasa Murthy VN
Updated On : 19 Nov 2013, 12:41 pm

-ಮತ್ತೀಕೆರೆ ಜಯರಾಮ್
ರಾಮನಗರ:
ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯವೆಸಗಿದೆ. ಮಳೆ ಕೊರತೆ ಎದುರಿಸಿರುವ ಚನ್ನಪಟ್ಟಣವನ್ನು ಪಟ್ಟಿಯಿಂದ ಕೈಬಿಟ್ಟು, ವಾಡಿಕೆಗಿಂತ ಹೆಚ್ಚು ಮಳೆಯಾದ ಮತ್ತು ಸಾಕಷ್ಟು ನೀರಾವರಿ ಸೌಲಭ್ಯ ಹೊಂದಿದ ನೆರೆಯ ತಾಲೂಕುಗಳನ್ನು ಬರವೆಂದು ಘೋಷಿಸಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಮಾರ್ಗಸೂಚಿ ಅನ್ವಯ ಮಳೆ ಮತ್ತು ತೇವಾಂಶ ಕೊರತೆಯನ್ನು ಆಧರಿಸಿ ರಾಜ್ಯದ 22 ಜಿಲ್ಲೆಗಳ 64 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ, ಆಯ್ಕೆ ವಿಷಯದಲ್ಲಿ ಮಾರ್ಗಸೂಚಿಯನ್ನೇ ಗಾಳಿಗೆ ತೂರಿದೆ.
ಸತತ ಎರಡು ವರ್ಷ ಭೀಕರ ಬರಕ್ಕೆ ತುತ್ತಾದ ಚನ್ನಪಟ್ಟಣ ತಾಲೂಕನ್ನು ಈ ಬಾರಿಯೂ ಮಳೆ ಕೊರತೆ ಕಾಡಿದೆ. ಇಷ್ಟಾಗಿಯೂ ಚನ್ನಪಟ್ಟಣವನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರು ಹಿಂದಿನ ಉದ್ದೇಶವಾದರೂ ಏನೆಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.
ವಾಡಿಕೆಗಿಂತ ಹೆಚ್ಚು ಮಳೆ: ರಾಮನಗರ ಜಿಲ್ಲೆಯ 4 ತಾಲೂಕುಗಳ ಪೈಕಿ ಅತಿ ಕಡಿಮೆ ಮಳೆಯಾಗಿರುವುದೇ ಚನ್ನಪಟ್ಟಣದಲ್ಲಿ. ಆದರೆ, ಚನ್ನಪಟ್ಟಣವನ್ನು ಹೊರತುಪಡಿಸಿ ರಾಮನಗರ, ಕನಕಪುರ ಹಾಗೂ ಮಾಗಡಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸರ್ಕಾರ ಘೋಷಣೆ ಮಾಡಿದೆ.
ಬರಪೀಡಿತ ಎಂದು ಘೋಷಿತವಾಗಿರುವ ಈ ಜಿಲ್ಲೆಯ ಎಲ್ಲ ಮೂರು ತಾಲೂಕುಗಳಲ್ಲೂ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಚನ್ನಪಟ್ಟಣದಲ್ಲಿ ಮಾತ್ರವೇ ವಾಡಿಕೆಗಿಂತ ವಾಸ್ತವ ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮಾರ್ಗಸೂಚಿ ಪಾಲನೆ ಆಗಿಲ್ಲ ಎನ್ನುವುದು ಸ್ಪಷ್ಟ.
ಎಲ್ಲೆಲ್ಲಿ ಎಷ್ಟು ಮಳೆ?: ರಾಮನಗರ ಜಿಲ್ಲೆಯಲ್ಲಿ ನ.17ರವರೆಗಿನ ವಾಸ್ತವ ಮಳೆ 838.10 ಮಿ.ಮೀ. ಮತ್ತು ವಾಸ್ತವ ಮಳೆ 811.90 ಮಿ.ಮೀ. ಆಗಿದೆ. ಕೃಷಿ ಇಲಾಖೆಯ ಈ ಅಂಕಿ-ಅಂಶವನ್ನೇ ಪರಿಗಣಿಸಿದರೆ ಜಿಲ್ಲೆಯಲ್ಲಿ ಒಟ್ಟಾರೆ 26.20 ಮಿ.ಮೀ. ಮಳೆ ಕೊರತೆ ಎದುರಾಗಿದೆ.
ಕನಕಪುರ ತಾಲೂಕಿನಲ್ಲಿ ವಾಡಿಕೆ ಮಳೆ 739.50 ಮಿ.ಮೀ. ಮತ್ತು ವಾಸ್ತವ ಮಳೆ 933.50 ಮಿ.ಮೀ. ಆಗಿದ್ದು, 94.50 ಮಿ.ಮೀ. ಅಧಿಕ ಮಳೆಯಾಗಿದೆ. ರಾಮನಗರದಲ್ಲೂ ವಾಡಿಕೆಗಿಂತ 9.20 ಮಿ.ಮೀ. ಅಧಿಕವಾಗಿದೆ. ಇಲ್ಲಿ ವಾಡಿಕೆ 876.40 ಮಿ.ಮೀ. ಮತ್ತು ವಾಸ್ತವ ಮಳೆ 885.60 ಮಿ.ಮೀ. ಆಗಿದೆ.
ಚನ್ನಪಟ್ಟಣ ತಾಲೂಕಿನಲ್ಲಿ ಸುಮಾರು 38.40 ಮಿ.ಮೀ. ಮಳೆ ಕೊರತೆಯಾಗಿದೆ. ಇಲ್ಲಿನ ವಾಡಿಕೆ ಮಳೆ 823 ಮಿ.ಮೀ., ವಾಸ್ತವ ಮಳೆ 784.60 ಮಿ.ಮೀ. ಮಾತ್ರವೇ. ಇನ್ನು ಮಾಗಡಿ ತಾಲೂಕಿನಲ್ಲಿ ಉಳಿದ 3 ಕಡೆಗಿಂತಲೂ ಅಧಿಕ ಮಳೆಯಾಗಿದ್ದು, ಸಮೃದ್ಧ ಬೆಳೆಯೂ ಬಂದಿದೆ.
ಸಿಕ್ಕಿಲ್ಲ ನಿಖರ ಮಾಹಿತಿ: ಮಾಗಡಿ ತಾಲೂಕಿನ ಮಳೆ ಪ್ರಮಾಣ ಕುರಿತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಿಂದ ನೀಡಲಾಗಿರುವ ಮಾಹಿತಿ ನಿಖರವಾಗಿಲ್ಲ. ಆದರೂ ಈ ಮಾಹಿತಿಯನ್ನೇ ಕೃಷಿ ಇಲಾಖೆ, ಜಿಲ್ಲಾಡಳಿತ ಮತ್ತು  ಸರ್ಕಾರಕ್ಕೂ ರವಾನಿಸಲಾಗಿದೆ.
ಆ ತಾಲೂಕಿನಲ್ಲಿರುವ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಮಾತನ್ನು ಸ್ವತಃ ಇಲಾಖೆ ಸಿಬ್ಬಂದಿಯೇ ಹೇಳುತ್ತಿದ್ದಾರೆ. ಇಷ್ಟಿದ್ದರೂ ತಪ್ಪು ಲೆಕ್ಕಾಚಾರದ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದಾದರೂ ಏಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.
ಮಳೆ ಪ್ರಮಾಣವನ್ನು ತಿಳಿಯಲು ಕೃಷಿ ಇಲಾಖೆಯೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಮಾಹಿತಿಯನ್ನೇ ಅವಲಂಬಿಸಿದೆ. ಅಧಿಕಾರಿಗಳು ನೀಡಿರುವ ಪ್ರಕಾರ ಮಾಗಡಿ ತಾಲೂಕಿನಲ್ಲಿ ವಾಡಿಕೆ ಮಳೆ 914 ಮಿ.ಮೀ. ಮತ್ತು ವಾಸ್ತವ ಮಳೆ 643.80 ಮಿ.ಮೀ. ಆಗಿದೆ.
ಮದ್ದೂರಿಗೂ ಬರವೇ?: ಅತ್ತ ಚನ್ನಪಟ್ಟಣಕ್ಕೆ ಹೊಂದಿಕೊಂಡಿರುವ ಮದ್ದೂರು ತಾಲೂಕು ಕಾವೇರಿ, ಶಿಂಷಾ ನದಿಗಳ ಆಶ್ರಿತ ನೀರಾವರಿ ಪ್ರದೇಶವಾಗಿದೆ. ಆ ಜಿಲ್ಲೆಯಲ್ಲಿ ಮಳೆ ಕೊಂಚ ವಿಳಂಬವಾದರೂ ಚನ್ನಪಟ್ಟಣಕ್ಕಿಂತ ಹೆಚ್ಚು ಸುರಿದಿದೆ. ಆದರೆ, ಮದ್ದೂರನ್ನು ಬರಪೀಡಿತವೆಂದು ಘೋಷಿಸಲಾಗಿದೆ.
ಹಳೆ ಮೈಸೂರು ಭಾಗದಲ್ಲಿ ಕಾವೇರಿ- ಹೇಮೆಯಿಂದ ನೀರಾವರಿ ಸೌಲಭ್ಯ ಹೊಂದಿರುವ ಕೆ.ಆರ್. ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ಟಿ. ನರಸೀಪುರ, ಕೆ.ಆರ್. ನಗರವೂ ಬರಪೀಡಿತ. ಕೇವಲ ನಾಲ್ಕಾರು ಕೆರೆಗಳಷ್ಟೇ ತುಂಬಿರುವ ಚನ್ನಪಟ್ಟಣವನ್ನು ಬರಪೀಡಿತವೆಂದು ಘೋಷಿಸದೆ ಅನ್ಯಾಯವೆಸಗಲಾಗಿದೆ.

ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದು ಯಾಕೆ?
ಚನ್ನಪಟ್ಟಣ:
ಕಳೆದ 17 ವರ್ಷಗಳಿಂದ ತಾಲೂಕಿನ ಯಾವುದೇ ಕೆರೆಕಟ್ಟೆಗಳು ತುಂಬಿಲ್ಲ. ಈ ವರ್ಷ ತಾಲೂಕಿನ ಯಾವುದೇ ಭಾಗದಲ್ಲೂ ಒಂದು ಅಡಿ ಹಳ್ಳ ಹರಿದಿಲ್ಲ. ಹೀಗಿದ್ದರೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಸರ್ಕಾರ ಕೈಬಿಟ್ಟಿರುವುದು ಯಾಕೆ ಎಂದು ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ. ರಾಮು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿಗೆ ಸಮರ್ಪಕವಾಗಿ ಮಳೆ ಬಂದು, ಬೆಳೆ ಬೆಳೆದು ದಶಕಗಳೇ ಕಳೆದಿವೆ ಇಂತಹ ಸನ್ನಿವೇಶದಲ್ಲಿ ಜಿಲ್ಲೆಯ ಮೂರು ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ನಮ್ಮ ತಾಲೂಕನ್ನು ಕೈಬಿಡುವ ಮೂಲಕ ಸರ್ಕಾರ ಬರದಿಂದ ನೊಂದಿರುವ ರೈತರ ಗಾಯದ ಮೇಲೆ ಬರೆ ಎಳೆದಿದೆ ಎಂದರು.
ರಾಜಕೀಯ ಕಾರಣ: ರಾಜ್ಯ ಸರ್ಕಾರ ಜನ ಹಿತಕಾಯುವ ಕೆಲಸವನ್ನು ಬಿಟ್ಟು ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ನಮ್ಮ ಕ್ಷೇತ್ರದಲ್ಲಿ ಬೇರೆ ಪಕ್ಷದ ಶಾಸಕರಿದ್ದಾರೆ ಎಂಬ ಕಾರಣಕ್ಕೆ ತಾಲೂಕಿನ ಜನತೆಗೆ ಅನ್ಯಾಯ ಮಾಡುತ್ತಿರುವ ಸರ್ಕಾರದ ಕ್ರಮ ನಿಜಕ್ಕೂ ದುರಾದೃಷ್ಟಕಾರಿಯಾಗಿದ್ದು ಸರ್ಕಾರ ಮೌಲ್ಯಹೀನವಾಗಿದೆ ಎಂಬ ಸಂಗತಿಯನ್ನು ಈ ಕ್ರಮ ಎತ್ತಿ ಹಿಡಿದಿದೆ ಎಂದು ಕಿಡಿಕಾರಿದರು. ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವ ಮೂಲಕ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ರಾಜ್ಯ ರೈತ ಸಂಘ ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಅಧಿಕಾರಿಗಳ ಮಾಹಿತಿ ಅಲ್ಲ

ರಾಮನಗರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಶೇ.30ರಷ್ಟು ಬೆಳೆ ನಷ್ಟವಾಗಿದೆ. ಈ ಪೈಕಿ ಅತಿ ಹೆಚ್ಚು ಬೆಳೆ ನಷ್ಟವಾಗಿರುವುದು ಚನ್ನಪಟ್ಟಣ ತಾಲೂಕಿನಲ್ಲೇ. ಅಲ್ಲಿ ಮುಂಗಾರು ತೀರಾ ವಿಳಂಬವಾಗಿ ಸುರಿದು ರಾಗಿ ಬಿತ್ತನೆ ತಡವಾಗಿತ್ತು. ಹಲವೆಡೆ ಈಗಷ್ಟೇ ಕಾಚಕ್ಕಿ ಹಂತದಲ್ಲಿ ರಾಗಿ ಬೆಳೆ ಇದೆ. ಬರಪೀಡಿತ ತಾಲೂಕುಗಳ ಘೋಷಣೆ ವಿಷಯದಲ್ಲಿ ರಾಜ್ಯ ಸರ್ಕಾರವು ಕೃಷಿ ಇಲಾಖೆಯಿಂದ ವರದಿಯನ್ನೇ ಪಡೆದಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಸಂಬಂಧಿಸಿದವರ ಜತೆ ಚರ್ಚೆ

ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಚನ್ನಪಟ್ಟಣ ಕೈಬಿಟ್ಟಿರುವ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಅಗತ್ಯ ಮಾಹಿತಿಯೊಂದಿಗೆ ಕಂದಾಯ ಸಚಿವರನ್ನು ಭೇಟಿಯಾಗಿ ಚನ್ನಪಟ್ಟಣವನ್ನು ಬರಪೀಡಿತವೆಂದು ಘೋಷಿಸುವಂತೆ ಒತ್ತಾಯಿಸುವೆ.
-ಸಿ.ಪಿ. ಯೋಗೇಶ್ವರ್, ಶಾಸಕ, ಚನ್ನಪಟ್ಟಣ

ಅವೈಜ್ಞಾನಿಕ ತೀರ್ಮಾನ

ಬರಪೀಡಿತ ತಾಲೂಕುಗಳ ಘೋಷಣೆಯಲ್ಲಿ ಕ್ಷುಲ್ಲಕ ರಾಜಕಾರಣ ಮತ್ತು ಅವೈಜ್ಞಾನಿಕ ತೀರ್ಮಾನ ಎದ್ದು ಕಾಣುತ್ತಿದೆ. ತಕ್ಷಣವೇ ಚನ್ನಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
-ಸಿ. ಪುಟ್ಟಸ್ವಾಮಿ, ರೈತ ಮುಖಂಡ

ಸೇರ್ಪಡೆಗೆ ಒತ್ತಾಯ

ಚನ್ನಪಟ್ಟಣ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀರಾ ಕುಸಿದು ಕುಡಿಯುವ ನೀರಿಗೂ ಹಾಹಾಕಾರವಿದೆ. ಮಳೆ ಅಭಾವ ಮತ್ತು ಬೆಳೆ ನಷ್ಟಕ್ಕೆ ಆ ತಾಲೂಕು ಗುರಿಯಾಗಿದೆ. ಹೀಗಾಗಿ ಚನ್ನಪಟ್ಟಣವನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವ ಕ್ರಮ ಸರಿಯಲ್ಲ. ಚನ್ನಪಟ್ಟಣವನ್ನು ಬರಪೀಡಿತವೆಂದು ಘೋಷಿಸಲು ಸರ್ಕಾರ  ಕ್ರಮ ಕೈಗೊಳ್ಳಬೇಕು.
-ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement