ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೆಂವಿವಿ ಪದವಿ ಪರೀಕ್ಷೆ; 2 ಕೇಂದ್ರಗಳಲ್ಲಿ 1800ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರು

Srinivasa Murthy VN
Updated On : 19 Nov 2013, 12:44 pm

ದೊಡ್ಡಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ 1 ಮತ್ತು 5ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳು ಸೋಮವಾರ ಆರಂಭವಾದವು. 3ನೇ ಸೆಮಿಸ್ಟರ್ ಪರೀಕ್ಷೆ ಮಂಗಳವಾರ ಆರಂಭವಾಗಲಿದ್ದು, ದೊಡ್ಡಬಳ್ಳಾಪುರದ 2 ಕೇಂದ್ರಗಳಲ್ಲಿ 1, 3 ಮತ್ತು 5ನೇ ಸೆಮಿಸ್ಟರ್ಗಳ ಸುಮಾರು 1800 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಇಲ್ಲಿನ ಕೊಂಗಾಡಿಯಪ್ಪ ಪ್ರಥಮ ದರ್ಜೆ ಕಾಲೇಜು, ದೇವರಾಜ್ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕೊಂಗಾಡಿಯಪ್ಪ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿದ್ದು, ದೇವರಾಜ ಅರಸ್ ಕಾಲೇಜು ಮತ್ತು ಮಾಳವ ಸಂಜೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೊಂಗಾಡಿಯಪ್ಪ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
1800ಕ್ಕೂ ಹೆಚ್ಚು ವಿದ್ಯಾರ್ಥಿಗಳು: ಬಿಕಾಂ, ಬಿಎಸ್ಸಿ, ಬಿಬಿಎಂ ಮತ್ತು ಬಿಎಸ್ಸಿಯ ವಿವಿಧ ಸಂಯೋಜನೆಗಳಲ್ಲಿ ಈ ಬಾರಿ ತಾಲೂಕಿನಲ್ಲಿ ಸುಮಾರು 1800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅಲ್ಲದೆ ಪುನರಾವರ್ತಿತ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯುತ್ತಿದ್ದಾರೆ. ಕೊಂಗಾಡಿಯಪ್ಪ ಕಾಲೇಜು ಕೇಂದ್ರದಲ್ಲಿ ದೇವರಾಜ ಅರಸ್ ಕಾಲೇಜಿನ ಬಿಕಾಂ ಮತ್ತು ಬಿಬಿಎಂನ 250 ವಿದ್ಯಾರ್ಥಿಗಳು, ಕೊಂಗಾಡಿಯಪ್ಪ ಕಾಲೇಜಿನ 700ಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಸೇರಿದಂತೆ 950 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ವಿಷಯಕ್ಕೆ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅದೇ ರೀತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ, ಬಿಬಿಎಂ, ಬಿಎಸ್ಸಿ ಮತ್ತು ಬಿಎ ವಿವಿಧ ಸಂಯೋಜನೆಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷೆಗಳು ಡಿಸೆಂಬರ್ 2ನೇ ವಾರದವರೆಗೆ ನಡೆಯಲಿದ್ದು, ಸೋಮವಾರ 1ನೇ ಸೆಮಿಸ್ಟರ್ಗೆ ಕನ್ನಡ, 5ನೇ ಸೆಮಿಸ್ಟರ್ ಬಿಕಾಂ  ಬಿಬಿಎಂ, ಬಿಎ ಮತ್ತು ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಂಬಂಧ ಪಟ್ಟ ಸಂಯೋಜನೆಗಳ ವಿಷಯಗಳ ಪರೀಕ್ಷೆಗಳು ನಡೆದವು. ಪರೀಕ್ಷಾ ಅಕ್ರಮಗಳು ನಡೆಯದಂತೆ ಹೆಚ್ಚಿನ ನಿಗಾ ವಹಿಸಿದ್ದು, ಪ್ರತಿ ಕೇಂದ್ರದಲ್ಲಿ ತಲಾ ಇಬ್ಬರು ವೀಕ್ಷಕರನ್ನು ನೇಮಿಸಲಾಗಿದೆ. ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಅಕ್ರಮಗಳನ್ನು ತಡೆಯಲು ವಿಶ್ವವಿದ್ಯಾಲಯ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದ್ದು, ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement