ವಿಪತ್ತು ನಿರ್ವಹಣೆ ಎಲ್ಲಾ ಇಲಾಖೆಗಳೂ ಸಜ್ಜಾಗಿರಲಿ
ಕ.ಪ್ರ.ವಾರ್ತೆ ಮಾಗಡಿ ನ.18
ಎಲ್ಲಾ ಇಲಾಖೆಗಳು ವಿಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಶ್ವನಾಥ್ ಹೇಳಿದರು. ಮಾಗಡಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಬರ ಪರಿಹಾರ, ಭೂಕಂಪ, ಅತಿವೃಷ್ಟಿಯಿಂದ ಅನಾಹುತಕ್ಕೆ ನಾಗರಿಕರಿಗೆ ಹಾಗೂ ಆಸ್ತಿಪಾಸ್ತಿ ನಷ್ಟ ಉಂಟಾದರೆ ಹೇಗೆ ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸಮಾರೋಪಾದಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ತಾ.ಪಂ. ಇಒ ಕೆ.ಬಿ. ಅಕ್ಕೋಜಿ ಮಾತನಾಡಿ, ಅಧಿಕಾರಿಗಳು, ನಾಗರಿಕರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಸಾರ್ವಜನಿಕರು ಸಹ ಅಧಿಕಾರಿಗಳೊಂದಿಗೆ ಸ್ಪಂಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಾಜದ ಆಸ್ತಿಪಾಸ್ತಿಗಳಿಗೆ ನಷ್ಟವಾಗದಂತೆ ಕಾಯ್ದುಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೈಸೂರಿನ ಸಂಪನ್ಮೂಲ ವ್ಯಕ್ತಿ ಡಾ. ಪರಮೇಶ್ವರ್ ತರಬೇತಿ ನೀಡಿದರು.
ತಹಸೀಲ್ದಾರ್ ಸಿ.ಎಚ್. ಶಿವಕುಮಾರ್ ಅಧಿಕಾರಿಗಳ ಹೊಣೆಗಾರಿಕೆ ಕುರಿತು ವಿವರಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಸಹಕಾರ ಸಂಘಕ್ಕೆ ಪುಟ್ಟಸ್ವಾಮಯ್ಯ ಅವಿರೋಧ ಆಯ್ಕೆ
ಮಾಗಡಿ: ವೀರೇಗೌಡನದೊಡ್ಡಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ತ್ಯಾಗದೆರೆಪಾಳ್ಯದ ಟಿ.ಸಿ. ಪುಟ್ಟಸ್ವಾಮಯ್ಯ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಸಿ. ಪುಟ್ಟಸ್ವಾಮಯ್ಯ ಮಾತನಾಡಿ, ಎಲ್ಲಾ ನಿರ್ದೇಶಕರ ಸಹಕಾರ ಮತ್ತು ಪ್ರೋತ್ಸಾಹದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಶ್ರಮಿಸಿದ್ದಾರೆ. ಅವರೆಲ್ಲರಿಗೂ ಮೊದಲು ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ನಿರ್ದೇಶಕರ ಸಹಕಾರದಿಂದ ರೈತರಿಗೆ ಅನುಕೂಲಕರವಾದ ಕೃಷಿ ಪರಿಕರಗಳನ್ನು ಹಾಗೂ ಕಾಲ ಕಾಲಕ್ಕೆ ರಸಗೊಬ್ಬರ ಪೂರೈಕೆಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರೈತರು ಸಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಮುಂದಾಗಬೇಕು ಎಂದು ಪುಟ್ಟಸ್ವಾಮಯ್ಯ ರೈತರಿಗೆ ಕರೆ ನೀಡಿದರು.ನಿರ್ದೇಶಕರಾದ ಲೋಕೇಶ್, ಕೃಷ್ಣಪ್ಪ, ಕರಿಯಪ್ಪ, ರಂಗನರಸಿಂಹಯ್ಯ, ಗಂಗಣ್ಣ, ಮಹಾದೇವಯ್ಯ, ದಾಕ್ಷಾಯಿಣಮ್ಮ, ಕಪನಯ್ಯ, ನಾರಾಯಣಪ್ಪ, ಕೋಟಪ್ಪ, ರಾಜಣ್ಣ, ಬಿ.ಜಿ. ಸೂರಪ್ಪ, ಕಾಳೇಗೌಡ, ಬಾಲಿ ಚಿಕ್ಕಣ್ಣ ಇತರರು ನೂತನ ಅಧ್ಯಕ್ಷ ಪುಟ್ಟಸ್ವಾಮಯ್ಯ ಅವರಿಗೆ ಹಾರ ಹಾಕಿ ಅಭಿನಂದಿಸಿದರು. ನಿರ್ದೇಶಕರುಗಳನ್ನು ನೂತನ ಅಧ್ಯಕ್ಷ ಪುಟ್ಟಸ್ವಾಮಯ್ಯ ಅಭಿನಂದಿಸಿದರು. ಇದೇ ವೇಳೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.