ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಕಾಡೆಮಿ-ಎಸ್‌ಡಿಪಿ ಶಿಷ್ಯವೇತನ

Srinivasa Murthy VN
Updated On : 20 Nov 2013, 12:44 pm

ರಾಮನಗರ: ವಿದ್ಯಾರ್ಥಿಗಳನ್ನು ಮೂಲ ವಿಜ್ಞಾನದೆಡೆಗೆ ಆಕರ್ಷಿಸಲು ಮತ್ತು ವಿಜ್ಞಾನ ವಿಷಯದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಶಿಷ್ಯವೇತನ ಹಾಗೂ 2013-14ನೇ ಸಾಲಿನಲ್ಲಿ ಪ್ರೊ. ಡಿ.ಎಂ.ನಂಜುಡಪ್ಪ ಸಮಿತಿಯು ಗುರುತಿಸಿರುವ ರಾಜ್ಯದ 114 ಹಿಂದುಳಿದ ತಾಲೂಕುಗಳ ಆರ್ಥಿಕವಾಗಿ ಹಿಂದುಳಿದ ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಅಕಾಡೆಮಿ-ಎಸ್‌ಡಿಪಿ ಶಿಷ್ಯವೇತನವನ್ನು ನೀಡಲಿದೆ. ಈ ಸಂಬಂಧ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ನ.30ರೊಳಗೆ ಅಕಾಡೆಮಿಗೆ ಕಳುಹಿಸಿಕೊಡಲು ಕಾಲೇಜುಗಳ ಪ್ರಾಂಶುಪಾಲರನ್ನು ಕೋರಲಾಗಿತ್ತು. ಪಟ್ಟಿಯನ್ನು ಕಳುಹಿಸಿಕೊಟ್ಟಿರದ ಕಾಲೇಜುಗಳಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಡಿ.16ರೊಳಗೆ ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸಿ ಕೊಡಬಹುದು. ಡಿ.16ರ ನಂತರ ಬರುವ ಪಟ್ಟಿಯನ್ನು ತಿರಸ್ಕರಿಸಲಾಗುವುದು. ಈಗಾಗಲೇ ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿರುವ ಕಾಲೇಜುಗಳಿಗೆ ಈ ಸೂಚನೆ ಅನ್ವಯಿಸುವುದಿಲ್ಲ. ವಿವರಗಳಿಗೆ ಅಕಾಡೆಮಿಯ ವೆಬ್‌ಸೈಟ್ ವೀಕ್ಷಿಸಬಹುದು ಎಂದು ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಡಾ. ಎಚ್. ಹೊನ್ನೇಗೌಡ ತಿಳಿಸಿದ್ದಾರೆ.

ಟಿ. ಅಗ್ರಹಾರದಲ್ಲಿ ಕನ್ನಡ ರಾಜ್ಯೋತ್ಸವ
ದೇವನಹಳ್ಳಿ: ತಾಲೂಕು ಚನ್ನರಾಯಪಟ್ಟಣ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಹಾಗೂ ದೇವನಹಳ್ಳಿ ತಾಲೂಕು ಪರಿವರ್ತನಾ ಕಲಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಗೀತ ಗಾಯನ ಮತ್ತು ಉಪನ್ಯಾಸ ಸಮಾರಂಭವನ್ನು ಟಿ. ಅಗ್ರಹಾರ ಗ್ರಾಮದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ತಾಲೂಕು ಕಸಾಪ ಅಧ್ಯಕ್ಷ ರಾಜಗೋಪಾಲ್ ನೆರವೇರಿಸಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಪ್ರತಿದಿನ ಕನ್ನಡಾಸಕ್ತರ ಮನೆಯಂಗಳಗಳಲ್ಲಿ ಕನ್ನಡ ಸಾಹಿತ್ಯ, ಕಲೆ, ರಂಗಗೀತೆ, ಭಾವಗೀತೆ, ಅಲ್ಲದೆ ಸಾಹಿತಿಗಳಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮ ನಡೆಸಿ ಕನ್ನಡದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಯಲಿಯೂರು ದೇವರಾಜ್ ವಹಿಸಿ ಕನ್ನಡದ ಎಂಟು ಮಂದಿ ನಾಡೋಜರಿಗೆ ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಬೇರೆ ಯಾವುದೇ ಭಾಷೆಯ ಸಾಹಿತಿಗಳಿಗೆ ದೊರೆತಿಲ್ಲ ಎಂದರಲ್ಲದೆ, ನಮ್ಮ ನೆಲದಲ್ಲಿ ವಾಸಿಸುವ ಎಲ್ಲ ಭಾಷೆಯ ಜನರು ಕನ್ನಡವನ್ನು ಕಲಿತು ಕನ್ನಡದಲ್ಲಿ ಮಾತನಾಡುವುದನ್ನು ಕಲಿಯಬೇಕು ಎಂದರು.
ವಿಜಯಪುರದ ಸಾಹಿತಿ ಚಂದ್ರಶೇಖರ ಹಡಪದ್ ನಾಟಕ ಮತ್ತು ಸಾಮಾಜಿಕ ಪರಿಣಾಮ ಬಗ್ಗೆ ಉಪನ್ಯಾಸ ನೀಡಿದರು. ನಾಯ್ಡು ಸಂಗಡಿಗರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು, ವಕೀಲ ಶಿವಕುಮಾರ್ ವಂದಿಸಿದರು.

13 ವರ್ಷದ ಬಾಲಕ ನಾಪತ್ತೆ
ಸೂಲಿಬೆಲೆ: ಪಟ್ಟಣದ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ 13 ವರ್ಷದ ನವೀನ್ ಎಂಬ ಬಾಲಕ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಬಾಲಕನ ತಂದೆ ಕೋಲಾರ ಜಿಲ್ಲೆಯ ಅಣ್ಣೇನಹಳ್ಳಿ ಗ್ರಾಮದ ಗಂಗಪ್ಪ ಎಂಬಾತ ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದು, ಬಾಲಕ ಸೂಲಿಬೆಲೆಯ ಕೋಳಿ ಫಾರಂನಲ್ಲಿ ಕೆಲಸೆ ಮಾಡುತ್ತಿದ್ದ ಎನ್ನಲಾಗಿದೆ. ನಾಲ್ಕು ಅಡಿ ಎತ್ತರ, ಸಾಧಾರಣ ಮೈಕಟ್ಟು, ಗುಂಡ ಮುಖ, ಕಪ್ಪು ಬಣ್ಣದ ನೀಲಿ ಬಣ್ಣದ ಪ್ಯಾಂಟು, ಹಳದಿ ಬಣ್ಣದ ಶರ್ಟ ಧರಿಸಿದ್ದಾನೆ. ಈತನ ಬಗ್ಗೆ ಸುಳಿವು ಕಂಡವರು ಸೂಲಿಬೆಲೆ ಪೊಲೀಸ್ ಠಾಣಿ ದೂ. 080- 27952415 ಸಂಪರ್ಕಿಸಲು ಪ್ರಕಟಣಿಯಲ್ಲಿ ಕೋರಿದೆ.

ಇಂದು ಕನಕ ಜಯಂತಿ
ಸೂಲಿಬೆಲೆ: ಪಟ್ಟಣದ ಚನ್ನಬೈರೇಗೌಡ ನಗರದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನ.20ರಂದು ಕನಕ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಉಪನ್ಯಾಸಕ ಕೆ.ಎಚ್. ಹನುಮಂತರಾಯಪ್ಪ ತಿಳಿಸಿದ್ದಾರೆ. ಪ್ರಾಂಶುಪಾಲ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ತಾಪಂ ಮಾಜಿ ಸದಸ್ಯ ಚನ್ನಪ್ಪ ಮಕ್ಕಳಿಗೆ ಸಿಹಿ  ಹಾಗೂ ಬಹುಮಾನಗಳನ್ನು ನೀಡಲಿದ್ದಾರೆ. ಕನ್ನಡ ಶಾಲೆಯಲ್ಲಿ: ಜನತಾ ಕಾಲೊನಿಯಲ್ಲಿರುವ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕನಕ ಜಯಂತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಪುನರ್ ರಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅರಸನಹಳ್ಳಿಯಲ್ಲಿ ಇಂದು ಕನ್ನಡ ರಾಜ್ಯೋತ್ಸವ
ಸೂಲಿಬೆಲೆ: ಇಲ್ಲಿಗೆ ಸಮೀಪದ ಅರಸನಹಳ್ಳಿ ಗ್ರಾಮದಲ್ಲಿ ನ.20ರಂದು ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಗ್ರಾಮ ಶಾಖೆಯ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮದ ಮಹೇಶ್ವರ ದೇವಾಲಯದಲ್ಲಿ ಆವರಣದಲ್ಲಿ ನಡೆಯಲಿರುವ ಸಮಾರಂಭವನ್ನು ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಉದ್ಘಾಟಿಸಲಿದ್ದು, ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ  ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡ ಬಿ.ಎನ್. ಗೋಪಾಲಗೌಡ, ಬಿ.ಎಂ. ನಾರಾಯಣಸ್ವಾಮಿ, ಬಿ.ವಿ. ಸತೀಶ್‌ಗೌಡ, ರಾಜಶೇಖರಗೌಡ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ ಪ್ರಕಟಣಿಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ ದೇವತೆಗಳ ಪ್ರತಿಷ್ಠಾಪನೆ
ಕನಕಪುರ: ಕನಕಪುರದ ಹಾರೋಹಳ್ಳಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಅರುಣಾಚಲೇಶ್ವರ ದೇವಾಲಯದ ಜೀರ್ಣೋದ್ಧಾರ ಹಾಗೂ ಪ್ರಾಂಗಣದ ಮಂಟಪಗಳಲ್ಲಿ 30 ವಿವಿಧ ದೇವತೆಗಳ ಪ್ರತಿಷ್ಠಾಪನಾ ಕಾರ್ಯಕ್ರಮ ನ.20ರಿಂದ ನ.28ರವರೆಗೆ ನಡೆಯಲಿದೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ಮಲ್ಲಪ್ಪ ತಿಳಿಸಿದ್ದಾರೆ. ದೇವತಾ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ವಿಧಿ- ವಿಧಾನಗಳು ಋತ್ವಿಕರಾದ ದಿನೇಶ್ ಗುರೂಜಿ ತಂಡದವರು ನೆರವೇರಿಸಲಿದೆ.

ಇಂದು ಕನಕದಾಸ ಜಯಂತ್ಯುತ್ಸವ
ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮ ನ.20ರಂದು ಇಲ್ಲಿನ ಡಾ. ರಾಜ್‌ಕುಮಾರ್ ಕಲಾ ಭವನ(ಪುರಭವನ)ದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಎನ್. ಹನುಮಂತೇಗೌಡ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಸಮಾರಂಭವನ್ನು ತಹಸೀಲ್ದಾರ್ ಕೆ.ಬಿ. ಸಿದ್ದಲಿಂಗಯ್ಯ ಉದ್ಘಾಟಿಸುವರು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ಪುಟ್ಟಣ್ಣ, ತಾ.ಪಂ ಪ್ರಭಾರ ಅಧ್ಯಕ್ಷ ರಮಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಸುಶೀಲ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ, ತಾ. ಅಧ್ಯಕ್ಷ ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಲಿದ್ದಾರೆ.

ಸಹಕಾರ ಸಂಸ್ಕೃತಿ ಮೌಲ್ಯಗಳ ಉತ್ತೇಜನ ದಿನ ಇಂದು
ದೊಡ್ಡಬಳ್ಳಾಪುರ: 60ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾ ಮಂಡಲ ಮತ್ತು ಬೆಂ.ಗ್ರಾ. ಜಿಲ್ಲಾ ಸಹಕಾರಿ ಯುನಿಯನ್, ಟಿಎಪಿಎಂಸಿಎಸ್ ಮತ್ತು ಪಿಎಲ್‌ಡಿ ಬ್ಯಾಂಕುಗಳ ಸಹಯೋಗದಲ್ಲಿ ಸಹಕಾರ ಸಂಸ್ಕೃತಿ ಮತ್ತು ಮೌಲ್ಯಗಳ ಉತ್ತೇಜನ ದಿನ ನ.20ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಟಿಎಪಿಎಂಸಿಎಸ್ ಸಭಾಂಗಣದಲ್ಲಿ ನಡೆಯಲಿದೆ. ಶಾಸಕ ಟಿ. ವೆಂಕಟರಮಣಯ್ಯ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಆರ್.ಜಿ. ವೆಂಕಟಾಚಲಯ್ಯ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಜೆ. ನರಸಿಂಹಸ್ವಾಮಿ, ಜಿ.ಪಂ. ಉಪಾಧ್ಯಕ್ಷ ಎನ್. ಹನುಮಂತೇಗೌಡ, ಸಹಕಾರ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ನಾರಾಯಣಗೌಡ, ನಿರ್ದೇಶಕ ಟಿ.ವಿ. ಲಕ್ಷ್ಮೀನಾರಾಯಣ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ. ನಾರಾಯಣಸ್ವಾಮಿ, ಟಿಎಪಿಎಂಸಿಎಸ್ ಅಧ್ಯಕ್ಷ ಆಂಜನಪ್ಪ ಮತ್ತಿತರರು ಭಾಗವಹಿಸಲಿದ್ದಾರೆ.

ಇಂದು ರಾಜ್ಯೋತ್ಸವ, ಕನಕ ಜಯಂತಿ
ದೇವನಹಳ್ಳಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಕುರುಬರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ 526ನೇ ಕನಕದಾಸ ಜಯಂತಿ ಸಮಾರಂಭ ಬುಧವಾರ ಇಲ್ಲಿನ ಹಳೇ ಬಸ್ ನಿಲ್ದಾಣ ಬಳಿ ನಿರ್ಮಿಸಿರುವ ಕನಕ ಮಂಟಪದಲ್ಲಿ ಆಯೋಜಿಸಲಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಕೃಷಿ ಸಚಿವ ಕೃಷ್ಣಭೈರೇಗೌಡ ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಸದಸ್ಯ ರಾಮಚಂದ್ರೇಗೌಡ ಭಾಗವಹಿಸಲಿದ್ದಾರೆ. ಜಾನಪದ ವಿದ್ವಾಂಸರು ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಕಾಳೇಗೌಡ ನಾಗವಾರ ಉಪನ್ಯಾಸ ನೀಡಲಿದ್ದಾರೆ.

ಇಂದು ಕನಕ ಜಯಂತಿ
ಮಾಗಡಿ: ತಾಲೂಕು ಆಡಳಿತ ಮತ್ತು ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.20ರಂದು ಬೆಳಗ್ಗೆ 10.30ಕ್ಕೆ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕನಕದಾಸ ಜಯಂತ್ಯುತ್ಸವ ಏರ್ಪಡಿಸಿರುವುದಾಗಿ ತಹಸೀಲ್ದಾರ್ ಸಿ.ಎಚ್. ಶಿವಕುಮಾರ್ ತಿಳಿಸಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮುದ್ದುರಾಜ ಯಾದವ್, ಧನಂಜಯ, ವಿಜಯಕುಮಾರ್, ರಂಗಸ್ವಾಮಯ್ಯ, ಹಂಸಕುಮಾರಿ, ತಾ.ಪಂ. ಅಧ್ಯಕ್ಷ ಜಿ. ಕೃಷ್ಣ, ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಬೀರಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಅಕ್ಕೋಜಿ, ಬಿಇಒ ರಂಗಸ್ವಾಮಿ, ಸಿಪಿಐ ಯಲಗಯ್ಯ, ಪುರಸಭಾ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ ಸೇರಿದಂತೆ ಅನೇಕ ಗಣ್ಯರು, ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement