ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಪಿಎಲ್ ಗೊಂದಲ; ಅನ್ನ ಭಾಗ್ಯ ಗಗನಕುಸುಮ

Srinivasa Murthy VN
Updated On : 20 Nov 2013, 12:41 pm

-ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ, ರಾಮನಗರ, ನ.19
ಅನ್ನಭಾಗ್ಯ ಯೋಜನೆ ಜಾರಿಗೊಳಿಸಿರುವ ರಾಜ್ಯ ಸರ್ಕಾರವು ಆ ಸವಲತ್ತು ಪಡೆಯಲು ಕಾಯುತ್ತಿರುವ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಆಗಿರುವ ವಿಳಂಬ, ಗೊಂದಲ, ಅದ್ವಾನಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ರಾಮನಗರ ಜಿಲ್ಲೆಯಲ್ಲಿ ಉನ್ನತ ಅಧಿಕಾರಿಗಳ ಅಸಡ್ಡೆ, ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಅಸಹಕಾರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಹೊಣೆಗೇಡಿತನದಿಂದ ಸಾವಿರಾರು ಬಡ ಕುಟುಂಬಗಳಿಗೆ ಇನ್ನೂ ಬಿಪಿಎಲ್ ಕಾರ್ಡ್ ತಲುಪಿಲ್ಲ. ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಆಗಿರುವ ವಿಳಂಬದ ಪರಿಣಾಮ ಅದೆಷ್ಟೋ ಅರ್ಹ ಬಡ ಕುಟುಂಬಗಳು ಅನ್ನಭಾಗ್ಯ ಯೋಜನೆಯಡಿ ನಿಗದಿಪಡಿಸಿದ ಅಕ್ಕಿ ಸಹಿತ ಪಡಿತರ ಪಡೆಯಲಾಗದೆ ಪರಿತಪಿಸುತ್ತಿದ್ದಾರೆ. ಈ ವಿಷಯದಲ್ಲಿ ಜನಪ್ರತಿನಿಧಿಗಳಿಗೂ ಕಾಳಜಿ ಇಲ್ಲದಾಗಿದೆ.
ಉಸಾಬರಿ ಬೇಡವೆಂದರು: ಬಿಪಿಎಲ್ ಕಾರ್ಡ್ ಹಂಚಿಕೆ ವಿಷಯದಲ್ಲಿ ರಾಮನಗರ ಜಿಲ್ಲೆಗೆ ಸಮಗ್ರವಾಗಿ ಒಂದು ಮಾರ್ಗಸೂಚಿ ಅನುಸರಿಸಿಲ್ಲ. ಕನಕಪುರ ತಾಲೂಕಿನಲ್ಲೇ ಒಂದು ಕಾನೂನು ಇದ್ದರೆ, ಉಳಿದ 3 ತಾಲೂಕುಗಳಲ್ಲಿ ಬೇರೆಯದೇ ಕಾನೂನು ಜಾರಿಯಲ್ಲಿರುವುದು ಗೊಂದಲಕ್ಕೆಡೆ ಮಾಡಿದೆ.
ಬಿಪಿಎಲ್ ಕಾರ್ಡ್ ಸೌಲಭ್ಯಕ್ಕೆ ಕುಟುಂಬ ಅರ್ಹವೇ ಅಥವಾ ಇಲ್ಲವೇ ಎನ್ನುವುದನ್ನು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ, ಆಯಾ ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿ ಪೈಕಿ ಒಬ್ಬರು ದೃಢೀಕರಿಸಬೇಕೆನ್ನುವ ನಿಯಮವನ್ನು ರೂಪಿಸಲಾಗಿದೆ.
ಆದರೆ, ಗ್ರಾಮ ಲೆಕ್ಕಿಗರು ಈ ಹೊಣೆ ತಮಗೆ ಸುತಾರಾಂ ಬೇಡವೆಂದು ಜಾರಿಕೊಂಡಿದ್ದಾರೆ. ಅವರಿಗೆ ತಾಕೀತು ಮಾಡಿ, ಕೆಲಸ ತೆಗೆಯಬೇಕಾದ ಮೇಲಧಿಕಾರಿಗಳೂ ಮುಗುಂ ಆಗಿದ್ದಾರೆ. ಹೀಗಾಗಿ ಗ್ರಾ.ಪಂ. ಅಧಿಕಾರಿಗಳ ಮೇಲೆ ಹೊಣೆ ಬಿದ್ದಿದೆ.
ಕನಕಪುರದಲ್ಲಷ್ಟೇ ಸಹಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಪೈಕಿ ಒಬ್ಬರು ಬಿಪಿಎಲ್ ಕಾರ್ಡ್‌ಗೆ ದೃಢೀಕರಿಸುತ್ತಿದ್ದಾರೆ. ಉಳಿದಂತೆ ರಾಮನಗರ, ಚನ್ನಪಟ್ಟಣ, ಮಾಗಡಿ ತಾಲೂಕುಗಳಲ್ಲಿ ಈ ಅಧಿಕಾರಿಗಳು ದೃಢೀಕರಿಸಿ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ.
ಉದ್ಯೋಗ ಖಾತ್ರಿ, ಸಿವಿಲ್ ಕಾಮಗಾರಿಗಳು ಮತ್ತಿತರೆ ಕಡತಗಳಿಗೆ ಸಹಿ ಹಾಕಲು ಕಮಿಷನ್ ನಿಟ್ಟಿಸುವ ಕಾರಣಕ್ಕೆ ಪಿಡಿಒ ಹಾಗೂ ಕಾರ್ಯದರ್ಶಿ ನಡುವೆ ಪೈಪೋಟಿ ಇರುತ್ತದೆ. ಆದರೆ, ಬಡ ಕುಟುಂಬಗಳಿಗೆ ಸವಲತ್ತು ನೀಡಿಕೆ ವಿಷಯದಲ್ಲಿ ಮಾತ್ರ ಹೊಣೆ ನಿರಾಕರಿಸಲಾಗುತ್ತಿದೆ.
ಬಿಪಿಎಲ್ ಕಾರ್ಡ್ ವಿತರಣೆ ವಿಷಯದಲ್ಲಿ ಗ್ರಾಮ ಲೆಕ್ಕಿಗರು, ಗ್ರಾಪಂ ಪಿಡಿಒ ಮತ್ತು ಕಾರ್ಯದರ್ಶಿಗಳ ಅಸಹಕಾರದ ಬಗ್ಗೆ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಕಿಡಿ ಕಾರಿದ್ದು, ಮಾಸಾಂತ್ಯದೊಳಗೆ ತಮ್ಮ ಕ್ಷೇತ್ರದಲ್ಲಿ ಕಾರ್ಡ್ ಹಂಚಿಕೆ ಪೂರ್ಣಗೊಳಿಸಲು ತಾಕೀತು ಮಾಡಿದ್ದಾರೆ.
ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಅಧಿಕಾರಿಗಳಿಗೆ ಮಾತಿನ ಚಾಟಿ ಬೀಸುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ. ಕನಕಪುರದ ಮಾರ್ಗಸೂಚಿಯನ್ನು ಉಳಿದೆಡೆಯೂ ಅನುಸರಿಸಲು ಇರುವ ಅಡ್ಡಿಯಾದರೂ ಏನೆನ್ನುವುದನ್ನು ಮೇಲಧಿಕಾರಿಗಳು ಪ್ರಶ್ನಿಸುವ ಗೋಜಿಗೆ ಹೋಗಿಲ್ಲ.

ಕಾರ್ಡ್ ಹಂಚಿಕೆ ವಿವರ
ಕನಕಪುರ ತಾಲೂಕಿನಲ್ಲಿ ಸಲ್ಲಿಕೆಯಾಗಿರುವ 26,600 ಅರ್ಜಿಗಳ ಪೈಕಿ 11,345 ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ರಾಮನಗರ ತಾಲೂಕಿನ 16,838 ಅರ್ಜಿದಾರರಲ್ಲಿ ಕೇವಲ 1181 ಕುಟುಂಬಗಳಿಗಷ್ಟೇ ಈವರೆಗೆ ಬಿಪಿಎಲ್ ಕಾರ್ಡ್ ತಲುಪಿದೆ. ಚನ್ನಪಟ್ಟಣ ತಾಲೂಕಿನಲ್ಲೂ ಪ್ರಗತಿ ಕಾಣದಾಗಿದೆ. ಅಲ್ಲಿನ 15,168 ಅರ್ಜಿದಾರರ ಪೈಕಿ 3600 ಕುಟುಂಬಕ್ಕೆ ಮಾತ್ರ ಕಾರ್ಡ್ ತಲುಪಿದೆ. ಇಡೀ ಜಿಲ್ಲೆಯಲ್ಲಿ ಅತಿ ಕಡಿಮೆ ಕಾರ್ಡ್ ಹಂಚಿರುವುದು ಮಾಗಡಿ ತಾಲೂಕಿನಲ್ಲೇ. ಅಲ್ಲಿ ಈವರೆಗೆ ಹಂಚಿಕೆ ಆಗಿರುವುದು ಬರೇ 230 ಕಾರ್ಡ್.

ಅಮಾನತು ಹಿಂದೆ ರಾಜಕಾರಣ
ರಾಮನಗರ ತಾಲೂಕಿನ ಕೆಂಚನಕುಪ್ಪೆಯಲ್ಲಿರುವ ತಾಪಂ ಕಾಂಗ್ರೆಸ್ ಸದಸ್ಯೆ ಶೀಲಮ್ಮ ಮಾಲೀಕತ್ವದ ಸರ್ಕಾರಿ ನ್ಯಾಯಬೆಲೆ ಅಂಗಡಿ ಅಮಾನತಿಗೆ ಸ್ವಪಕ್ಷೀಯ ಪ್ರಭಾವಿಗಳ ಓಟಿನ ರಾಜಕಾರಣವೇ ಕಾರಣವೆನ್ನುವ ಗುಮಾನಿ ಮೂಡಿದೆ. ಶೀಲಮ್ಮ ಅವರು ಈಚೆಗೆ ನಡೆದ ತಾ.ಪಂ. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಅಣತಿಯಂತೆ ನಡೆದುಕೊಂಡಿದ್ದರು. ಈ ಪ್ರತೀಕಾರಕ್ಕಾಗಿ ಕಾಂಗ್ರೆಸ್ ನಾಯಕರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಶೀಲಮ್ಮ ಅವರ ನ್ಯಾಯಬೆಲೆ ಅಂಗಡಿಯನ್ನು ಅಮಾನತುಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ತಾ.ಪಂ. ಅಧ್ಯಕ್ಷ ಸ್ಥಾನವೂ ತೆರವಾಯಿತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದಲ್ಲಿ ನ್ಯಾಯಬೆಲೆ ಅಂಗಡಿಯ ಅಮಾನತು ರದ್ದು ಮಾಡಿಸುವುದಾಗಿ ಕಾಂಗ್ರೆಸ್ ಮುಖಂಡರು ಶೀಲಮ್ಮ ಅವರಿಗೆ ಆಮಿಷ ಒಡ್ಡಿದ್ದರು ಎನ್ನಲಾಗಿದೆ. ಜೆಡಿಎಸ್ ಸದಸ್ಯರು ಸಾಮೂಹಿಕ ಗೈರಾದ ಹಿನ್ನೆಲೆಯಲ್ಲಿ ನ.12ರಂದು ನಡೆಯಬೇಕಿದ್ದ ಅಧ್ಯಕ್ಷ ಸ್ಥಾನದ ಚುನಾವಣೆ ನ.26ಕ್ಕೆ ಮುಂದೂಡಲ್ಪಟ್ಟಿತು. ಶೀಲಮ್ಮ ಅವರು ಕಾಂಗ್ರೆಸ್ ಸದಸ್ಯರ ಗುಂಪಿನೊಂದಿಗೆ ಸಭೆಗೆ ಹಾಜರಾಗಿದ್ದು, ನ್ಯಾಯಬೆಲೆ ಅಂಗಡಿ ಅಮಾನತು ರದ್ದತಿ ನಿರೀಕ್ಷೆಯಲ್ಲಿದ್ದರು.
ನ.26ರ ಚುನಾವಣೆ ಬಳಿಕವಷ್ಟೇ ನ್ಯಾಯಬೆಲೆ ಅಂಗಡಿ ಅಮಾನತು ರದ್ಧತಿ ವಿಷಯ ನಿರ್ಧಾರವಾಗಬೇಕಿದೆ. ಪಕ್ಷನಿಷ್ಠೆಗೆ ಆಮಿಷವೇ ಕಾರಣವೆನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಈ ವಿಷಯ ಜಿ.ಪಂ. ಅಧ್ಯಕ್ಷರ ನೇತೃತ್ವದ ಕೆಡಿಪಿ ಸಭೆಯಲ್ಲೂ ಚರ್ಚೆಗೆ ಬಂದಿದೆ. ಪಡಿತರ ಆಹಾರ ಪದಾರ್ಥಗಳ ದುರುಪಯೋಗ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿ ಅಮಾನತುಪಡಿಸಲಾಗಿದೆ ಎಂದು ಅಧಿಕಾರಿಗಳು ಕಾರಣ ನೀಡಿದ್ದಾರೆ. ಶೀಲಮ್ಮ ಅವರು ಪಕ್ಷನಿಷ್ಠೆ ತೋರಿದರೆ ಆರೋಪಗಳೆಲ್ಲ ಹುರುಳಿಲ್ಲದಂತಾಗಲಿವೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ರಾಮನಗರ ಜಿಲ್ಲಾದ್ಯಂತ ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ವಿಳಂಬ ಸಲ್ಲದು. ಮಾಸಾಂತ್ಯದೊಳಗೆ ಎಲ್ಲ ಅರ್ಹ ಕುಟುಂಬಗಳಿಗೂ ಬಿಪಿಎಲ್ ಕಾರ್ಡ್ ವಿತರಣೆಯಾಗಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಸಬೂಬು ಹೇಳುವುದನ್ನು ಬಿಟ್ಟು ಕಾಳಜಿಯಿಂದ ಕೆಲಸ ಮಾಡಬೇಕು.
- ಎಚ್.ಸಿ. ರಾಜು, ಜಿ.ಪಂ. ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement