ರಂಗನಾಥಸ್ವಾಮಿ ದೇವಾಲಯದಲ್ಲಿ ಲಕ್ಷದೀಪೋತ್ಸವ
ಮಾಗಡಿ: ಐತಿಹಾಸಿಕ ಪ್ರಸಿದ್ಧ ತಿರುಮಲೆ ರಂಗನಾಥಸ್ವಾಮಿ ದೇವಾಲಯದಲ್ಲಿ ಸೋಮವಾರ ಸಂಜೆ ವಿಷ್ಣು ದೀಪೋತ್ಸವದ ಪ್ರಯುಕ್ತ ಅದ್ದೂರಿ ಲಕ್ಷದೀಪೋತ್ಸವ ನೆರವೇರಿತು.
ದೀಪೋತ್ಸವಕ್ಕೂ ಮುನ್ನ ವರುಣನ ಆರ್ಭಟದಿಂದ ಕೆಲಕಾಲ ದೀಪೋತ್ಸವಕ್ಕೆ ತಡೆ ಉಂಟಾಗಿತ್ತು. ಶಾಸಕ ಎಚ್.ಸಿ. ಬಾಲಕೃಷ್ಣ ಶ್ರದ್ಧಾಭಕ್ತಿಯಿಂದ ಜೋತಿ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಂಗನಾಥಸ್ವಾಮಿ ಕೃಪಾಶೀರ್ವಾದದಿಂದ ಹಾಗೂ ಮತದಾರರ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕನಾಗಿದ್ದೇನೆ. ದಯಾಮಯನಾದ ರಂಗನಾಥಸ್ವಾಮಿ ಸಕಲ ಜೀವಕೋಟಿಗೂ ಒಳಿತನ್ನು ಬಯಸಿದ್ದಾನೆ. ದೇವರ ದಯೆಯಿಂದ ನಾವೆಲ್ಲರೂ ಸುಖ, ಶಾಂತಿ ನೆಮ್ಮದಿಯಿಂದ ಬದುಕುತಿದ್ದೇವೆ. ಎಲ್ಲರಿಗೂ ಮತ್ತೊಷ್ಟು ಸುಖ, ಶಾಂತಿ, ನೆಮ್ಮದಿ ಕರುಣಸಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರಲ್ಲದೆ ದೇವಾಲಯದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದರು.
ದೀಪಾಲಂಕಾರ: ದೀಪೋತ್ಸವದ ಅಂಗವಾಗಿ ದೇವಾಲಯವು ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರದಿಂದ ಕಂಗೊಳಿಸಿತ್ತು. ಅರ್ಚಕರು ಸಂಪ್ರದಾಯಕ ವೇದ ಘೋಷಗಳೊಂದಿಗೆ ರಂಗನಾಥಸ್ವಾಮಿ ಅಭಿಷೇಕ ನೆರವೇರಿಸಿ, ವಜ್ರ ಖಚಿತ ಚಿನ್ನದ ಕಿರೀಟಧಾರಣೆ ಮಾಡಿ ಹೂವಿನಿಂದ ಅಲಂಕರಿಸಲಾಗಿತ್ತು. ಇದಕ್ಕೂ ಮುನ್ನ ಹೋಮ, ಹವನ ಪೂರ್ಣಾಹುತಿ ನೆರವೇರಿಸಲಾಗಿತ್ತು. ವಿಷ್ಣು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರು ಹಣತೆ ದೀಪ ಬೆಳಗಿಸಿ, ಭಕ್ತಿ ಭಾವ ಮೆರೆದರು.
ರಸಸಂಜೆ ಸಂಗೀತ ಕಾರ್ಯಕ್ರಮ: ಮಳೆಯ ನಡುವೆಯೇ ರಸಸಂಜೆ ಸಂಗೀತ ಕಾರ್ಯಕ್ರಮ ನಡೆಯಿತು. ಮಳೆಯ ನಡುವೆಯೇ ಭಕ್ತರು ಸಂಗೀತ ಸುಧೆ ಸವಿದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಸ್ಮರಿಸಿ, ಸನ್ಮಾನಿಸಿದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಚಂದ್ರ ಮೋಹನ್, ಪುರಸಭಾ ಸದಸ್ಯರಾದ ಬಸವರಾಜು, ಸುಶೀಲಮ್ಮ, ನಾಗೇಂದ್ರ, ಬಾಲಾಜಿ ರಂಗನಾಥ್, ಕುಮಾರಸ್ವಾಮಿ, ಜಯರಾಮು, ರಮೇಶ ಗುಪ್ತಾ, ನಾಗರಾಜು, ಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ. ಧನಂಜಯ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ದೇವರಾಜು, ಬ್ಯಾಟಪ್ಪ, ಭೈರಪ್ಪ, ರವೀಶ್, ಪಾರುಪತ್ತೇಗಾರ ಕೆಂಪಣ್ಣ ಸೇರಿದಂತೆ ನೂರಾರು ಗಣ್ಯರು, ಭಕ್ತರು ಭಾಗವಹಿಸಿದ್ದರು.