ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಸಮಾನರು: ಗೋವಿಂದರಾಜು
ಕ.ಪ್ರ.ವಾರ್ತೆ ಮಾಗಡಿ ನ.19
ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಸಮಾನತೆಯ ಶಿಕ್ಷಣದ ತತ್ವದಡಿ ಶಿಕ್ಷಣ ಪಡೆದಾಗ ಮಾತ್ರ ಶಿಕ್ಷಣದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿದೆ ಎಂದು ಹುಲೀಕಟ್ಟೆ ಪಿಯು ಕಾಲೇಜಿನ ಪ್ರಾಂಶುಪಾಲ ಗೋವಿಂದರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆ ಏರ್ಪಡಿಸಿದ್ದ ತಾಲೂಕು ಮಟ್ಟದ ಅಂತರ ಕಾಲೇಜು ಮಟ್ಟದ ಚರ್ಚಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಜನರ ಆರ್ಥಿಕತೆ, ಜಾತಿ ಅಂಶಗಳುಳ್ಳ ಅಸಮಾನ ನೆಲೆಗಳ ಆಧರಿಸಿ ಪಡೆಯುವ ಶಿಕ್ಷಣ ಸಮಾಜದ ಸ್ವಸ್ಥ್ಯವನ್ನು ಕದಡುತ್ತದೆ. ಇದರಿಂದ ಸಮಾನ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಮಾಣ ಬೀರುವುದರಿಂದ ಸಮಾನ ಶಿಕ್ಷಣ ಈ ಹೊತ್ತಿನ ನಾಗರಿಕರಲ್ಲಿ ತುರ್ತು ಅನಿವಾರ್ಯವಾಗಿದೆ ಎಂದರು.
ದಲಿತ ಮುಖಂಡ ಕಲ್ಕೆರೆ ಶಿವಣ್ಣ ಮಾತನಾಡಿ, ಶಿಕ್ಷಣದಿಂದ ವಂಚಿತರಾದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ, ಈ ವಿಮುಖತೆಯೇ ಅಸಮಾನತೆಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಸಮಾನ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಬೇಕು. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾಭಿಮಾನಿಗಳನ್ನಾಗಿ ರೂಪಿಸುತ್ತದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ಸಮಾನ ಶಿಕ್ಷಣ ವ್ಯವಸ್ಥೆ ರೂಪಗೊಳ್ಳಬೇಕಿದೆ ಎಂದರು. ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆಯ ಜಿಲ್ಲಾ ಸಂಚಾಲಕಿ ಬಂಜಗೆರೆ ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಯತ್ರಿ ವಿಜಯಾ ನಾಗೇಶ್, ವಿಜಯರಾಂಪುರ ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಉಪನ್ಯಾಸಕ ತಿಮ್ಮಹನುಮಯ್ಯ, ಸವಿತಾ, ಮಮತ, ಸಿ. ಪಲ್ಲವಿ ಹಾಜರಿದ್ದರು.
ವಿಜೇತರು: ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಜಿ. ಅಭಿಷೇಕ್ ಗೌಡ, ಆಗಲಕೋಟೆ ಕಾಲೇಜಿನ ಎಂ.ಎಸ್. ಪ್ರಜ್ವಲ್ ಪ್ರಥಮ ಬಹುಮಾನ ಪಡೆದರು. ಮಾಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಲ್. ಸತೀಶ್, ಹುಲೀಕಟ್ಟೆ ಕಾಲೇಜಿನ ಪುಷ್ಪಲತಾ ದ್ವಿತೀಯ ಬಹುಮಾನ ಪಡೆದರು. ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯೋಗೇಶ್ವರ್, ಹುಲೀಕಟ್ಟೆ ಕಾಲೇಜಿನ ಎಚ್.ಜಿ. ರೋಹಿತ್ ಇವರು ಸಮಾಧಾನಕರ ಬಹುಮಾನ ಪಡೆದರು.
26ರಿಂದ ದೇಗುಲ ಜೀರ್ಣೋದ್ಧಾರ
ಮಾಗಡಿ: ತಾಲೂಕಿನ ಕುದೂರು ಹೋಬಳಿ ಸೂರಪ್ಪನಹಳ್ಳಿಯಲ್ಲಿ ಉದ್ಭವ ಆಂಜನೇಯಸ್ವಾಮಿಯ ನೂತನ ದೇವಾಲಯದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಮಹೋತ್ಸವ ನ.26ರಿಂದ 28ರವರೆಗೆ ನೆಡೆಯಲಿದೆ. ನ.26ರಂದು ಮಹಾಗಣಪತಿ ಹೋಮ, ನ.27ರಂದು ಅಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ 28ರಂದು ನೂತನ ದೇವಾಲಯ ಜೀರ್ಣೋದ್ಧಾರ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಪಂಡಿತ ವಿದ್ವಾನ್ ಶೇಷಾದ್ರಿ ಭಟ್ ಅವರಿಂದ ಧಾರ್ಮಿಕ ಕೈಂಕರ್ಯ ನೆರವೇರಲಿದೆ. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥಸ್ವಾಮಿಜೀ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಡಿ.ಕೆ. ಸುರೇಶ್ ್ದೇವಾಲಯದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಎಚ್.ಎಂ. ಕೃಷ್ಣಮೂರ್ತಿ, ದಾನಿಗಳಾದ ಹನುಮಂತರಾಯಪ್ಪ, ಚಂದ್ರಪ್ಪ ಸೇರಿದಂತೆ ಇತರೆ ಗಣ್ಯರು ಭಾಗವಹಿಸಲಿದ್ದಾರೆ.