ಆಸ್ತಿ ವಿವಾದ; ತಾಯಿ-ಮಗನ ಕೊಲೆಗೆ ವಿಫಲ ಯತ್ನ
ಕ.ಪ್ರ.ವಾರ್ತೆ ರಾಮನಗರ ನ. 20
ಆಸ್ತಿ ವಿಚಾರವಾಗಿ ತಾಯಿ- ಮಗನನ್ನು ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಚಿಕ್ಕಗಂಗವಾಡಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಚಿಕ್ಕಗಂಗವಾಡಿ ಗ್ರಾಮದ ಗ್ರಾ.ಪಂ. ಮಾಜಿ ಸದಸ್ಯೆ ಭಾಗ್ಯಮ್ಮ ಮತ್ತು ಈಕೆಯ ಪುತ್ರ ಶಶಿಕುಮಾರ್ ತೀವ್ರ ಗಾಯಗೊಂಡವರು. ಬುಧವಾರ ಮಧ್ಯಾಹ್ನ 2ರ ಸಮಯದಲ್ಲಿ ಜಮೀನಿನಲ್ಲಿ ಭಾಗ್ಯಮ್ಮ ಮತ್ತು ಶಶಿಕುಮಾರ್ ಕೃಷಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಭದ್ರಯ್ಯ, ಪಾರ್ವತಮ್ಮ, ವಸಂತ ಮತ್ತು ವೀರಭದ್ರಯ್ಯ ಎಂಬುವರು ಏಕಾಏಕಿ ದಾಳಿ ಮಾಡಿ, ಚಾಕುವಿನಿಂದ ಕತ್ತು ಕೊಯ್ದಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದವರನ್ನು ಸತ್ತು ಹೋಗಿರಬಹುದು ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಭಾಗ್ಯಮ್ಮಳನ್ನು ಬೆಂಗಳೂರಿನ ವಿಕ್ಟೋರಿಯಾ ಮತ್ತು ಶಶಿಕುಮಾರ್ನನ್ನು ನಿಮ್ಹಾನ್ಸ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪಕ್ಕದ ಜಮೀನಿನ ಯಾಲಕ್ಕಯ್ಯ ಎಂಬುವರು ನೀಡಿರುವ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಘಟನೆ ಹಿನ್ನೆಲೆ: ಭಾಗ್ಯಮ್ಮ ಕುಟುಂಬ ಗ್ರಾಮದ ಗೋಮಾಳ ಜಮೀನಿನಲ್ಲಿ ಬಗರ್ಹುಕುಂ ಸಾಗುವಳಿ ಮಾಡುತ್ತಿತ್ತು. ಇದೇ ಜಮೀನಿಗೆ ಭದ್ರಯ್ಯ ಅವರು ಸಾಗುವಳಿ ಪತ್ರ ಪಡೆದುಕೊಂಡಿದ್ದರು. ಜಮೀನು ತಮಗೇ ಸೇರಬೇಕೆಂದು ಇಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೇ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.
ಈ ಹಿಂದೆ ಭಾಗ್ಯಮ್ಮ ಅವರು ನೀಡಿದ ದೂರಿನ ಮೇರೆಗೆ ಭದ್ರಯ್ಯ ಮತ್ತು ಮಕ್ಕಳು ಜೈಲು ವಾಸ ಅನುಭವಿಸಿದ್ದರೆಂದು ತಿಳಿದುಬಂದಿದೆ. ಅದೇ ದ್ವೇಷದ ಹಿನ್ನೆಲೆಯಲ್ಲಿ ಭಾಗ್ಯಮ್ಮ ಮತ್ತು ಶಶಿಕುಮಾರನನ್ನು ಕೊಲ್ಲುವ ಉದ್ದೇಶದಿಂದ ಪೂರ್ವಯೋಜಿತ ಸಂಚು ರೂಪಿಸಿ ಈ ಕೃತ್ಯ ನಡೆಸಿದ್ದಾರೆಂದು ಹೇಳಲಾಗಿದೆ.