'ಕಸಾಪ ಸದೃಢಕ್ಕೆ ಪ್ರತಿಯೊಬ್ಬ ಕನ್ನಡಿಗ ಶ್ರಮಿಸಲಿ'
ಚನ್ನಪಟ್ಟಣ: ಸರ್ವರನ್ನೂ ಕನ್ನಡ ಕಟ್ಟುವ ಕೆಲಸಕ್ಕೆ ಸಂಘಟಿಸುವ ಉದ್ದೇಶದಿಂದ ತಾಲೂಕು ಕಸಾಪ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಸು.ತ. ರಾಮೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿನ ಮಾಸ್ತಮ್ಮ ವಾಣಿ ಕಾರ್ಯಾಲಯದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನಿಸಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢಗೊಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದರು.
ಕನ್ನಡ ಓದಲು, ಬರೆಯಲು ಬರುವ ಎಲ್ಲರೂ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕೆಂದು ಕರೆ ನೀಡಿದ ಅವರು, ಸಾಹಿತ್ಯಾತ್ಮಕವಾಗಿ ನಾಡನ್ನು ಕಟ್ಟುವ ಕಾರ್ಯಕ್ಕೆ ಶ್ರಮಿಸುತ್ತಿರುವ ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ, ಸಂಘಟನಾತ್ಮಕವಾಗಿ ಬಲಪಡಿಸುವ ಕಾರ್ಯ ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಹನುಂತೇಗೌಡ ಮಾತನಾಡಿ, ಕನ್ನಡ ನಾಡು, ನುಡಿ, ಜಲ, ಸಂರಕ್ಷಣೆಗೆ ಕಸಾಪ ಕಂಕಣಬದ್ಧವಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟದ ಮುಖೇನ ಭಾಷೆಯ ಉಳಿವಿಗೆ ದೀಕ್ಷೆ ತೋಡೋಣ. ತಾಲೂಕಿನ ಸಮಸ್ತರೂ ಪರಿಷತ್ತಿನ ಸದಸ್ಯರಾಗಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ. ಶಿವಮಾದು, ಕನ್ನಡ ಸಾಹಿತ್ಯಕ್ಕೆ ಅಗ್ರಪಂಕ್ತಿ ಹಾಕುವ ಕಾರ್ಯಕ್ಕೆ ತಮ್ಮೆಲ್ಲರ ಬೆಂಬಲವನ್ನು ಸದಸ್ಯತ್ವ ಪಡೆಯುವ ಮೂಲಕ ನೀಡಬೇಕು. ವಿದ್ಯಾರ್ಥಿಗಳು, ರೈತರು, ವಿವಿಧ ಸಂಘಟನಾಕಾರರು, ಎಲ್ಲಾ ಧರ್ಮದವರು ಸದಸ್ಯತ್ವ ಪಡೆದು ಭಾಷೆಯ ಏಳ್ಗೆಗೆ ಕಂಕಣಬದ್ಧರಾಗಬೇಕು. ಪ್ರತಿ ಹೋಬಳಿ ಮಟ್ಟದಲ್ಲೂ ನೋಂದಾವಣೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ನಗರಸಭಾ ಸದಸ್ಯ ಪಿ. ಮಧು ಪತ್ರಕರ್ತ ಡಿ.ಎಂ. ಮಂಜುನಾಥ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್, ಕಾರ್ಯದರ್ಶಿ ಸಿ. ರಾಜಶೇಖರ್, ನಿಕಟಪೂರ್ವ ಅಧ್ಯಕ್ಷ ಎಚ್. ಕೃಷ್ಣೇಗೌಡ, ನಗರಸಭಾ ಸದಸ್ಯ ರಮೇಶ್, ನಾಗರಾಜ್, ಗಿರಿ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ವಿಜಯ್ ರಾಂಪುರ ಸಾಗ್ವತಿಸಿದರು. ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ನಿರೂಪಿಸಿ, ವಂದಿಸಿದರು.
'ಸಾಮಾಜಿಕ ಬದಲಾವಣೆಯಲ್ಲಿ ದಾಸರ ಸಾಹಿತ್ಯ ಪ್ರಮುಖ ಪಾತ್ರ
'ಹೊಸಕೋಟೆ: ಜನರಲ್ಲಿ ಸಾಮಾಜಿಕ ಬದಲಾವಣೆ ತರುವಲ್ಲಿ ಕನಕದಾಸರ ಸಾಹಿತ್ಯ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಎನ್. ನಾಗರಾಜ್ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಏರ್ಪಪಡಿಸಿದ್ದ ಕನಕ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ನೀತಿ ಪಾಲನೆ, ಪ್ರೀತಿಯಿಂದ ಜನರ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯ ಎಂಬುದನ್ನು ಕನಕದಾಸರು ಬಹಳ ಹಿಂದೆಯೇ ನಿರೂಪಿಸಿದ್ದಾರೆ. ಇಂದು ಕೆಲವು ವ್ಯಕ್ತಿಗಳು ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಸಂಘರ್ಷಕ್ಕೆ ಪ್ರಯತ್ನಿಸುತ್ತಿರುವುದು ಖಂಡನೀಯ ಎಂದರು.
ತಹಸೀಲ್ದಾರ್ ಕುಮಾರಸ್ವಾಮಿ ಮಾತನಾಡಿ, ದಾಸ ಪರಂಪರೆಯಲ್ಲಿಯೇ ಕನಕದಾಸರು ಅಗ್ರಗಣ್ಯರಾಗಿದ್ದಾರೆ. ಸಮಾಜದಲ್ಲಿನ ಮೌಢ್ಯತೆ, ಜಾತಿ ಪದ್ಧತಿಯ ಬಗ್ಗೆ ತಮ್ಮ ಗೀತೆಗಳ ಮೂಲಕ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಬಹಳ ಹಿಂದೆಯೇ ಕೈಗೊಂಡು ಜನಪ್ರಿಯತೆ ಗಳಿಸಿದ್ದು ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿ. ಶ್ರೀನಿವಾಸಯ್ಯ ಮಾತನಾಡಿದರು. ತಾಪಂ ಸದಸ್ಯ ಹೇಮಂತ್ಕುಮಾರ್, ಮುಖಂಡರಾದ ಮುನಿಶಾಮಣ್ಣ, ಮುನಿನಂಜಪ್ಪ, ಕಲ್ಲಪ್ಪ, ಬಿಇಒ ಬೈಲಾಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾ ತಂಡಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು.