ಸಮಾನತೆ ಸಾಧನೆಗೆ ಜಾತಿವಾದಿ ಚಿಂತನೆ ದೂರವಾಗಲಿ
ದೊಡ್ಡಬಳ್ಳಾಪುರ: ಇಲ್ಲಿನ ತಾಲೂಕು ಆಡಳಿತ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ನೇತೃತ್ವದಲ್ಲಿ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಡಾ. ರಾಜ್ಕುಮಾರ್ ಕಲಾ ಭವನ(ಪುರಭವನ)ದಲ್ಲಿ ಸಂಭ್ರಮದಿಂದ ನಡೆಯಿತು.
ಶಾಸಕ ಟಿ. ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸ ಈ ನಾಡು ಕಂಡ ಅತ್ಯಂತ ಚಿಂತನಶೀಲ ವ್ಯಕ್ತಿತ್ವ. ಕುಲದ ನೆಲೆಯ ಕುರಿತು ಪ್ರಶ್ನೆ ಮಾಡುವ ಅವರು ಜಗದಲ್ಲಿ ಎಲ್ಲರೂ ಸಮಾನರು. ಸಮಾನತೆಯೇ ಜಗತ್ತಿನ ಆದರ್ಶ. ಅದನ್ನು ಬಿಟ್ಟರೆ ಸಮಾಜ ನಾಶವಾಗುತ್ತದೆ ಎಂಬ ಎಚ್ಚರಿಕೆಯನ್ನು 5 ಶತಮಾನಗಳ ಹಿಂದೆಯೇ ನೀಡಿದ್ದಾರೆ. ಮೇಲು-ಕೀಳುಗಳ ಭಾವವನ್ನು ಬಿಟ್ಟು ಸರ್ವಸಮಾನವಾದ ಆಲೋಚನೆಗಳನ್ನು ಬಿತ್ತುವ ಮೂಲಕ ವಿಶ್ವಮಾನವರಾಗಿ ಅವರು ಕಾಣುತ್ತಾರೆ. ಅವರ ಆದರ್ಶಗಳ ಪಾಲನೆ ನಮ್ಮ ಹೊಣೆಯಾಗಬೇಕು ಎಂದರು.
ಕೀರ್ತನೆಗಳಲ್ಲಿ ವೈಚಾರಿಕತೆ: ಬೆಂ.ಗ್ರಾ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್. ಹನುಮಂತೇಗೌಡ ಮಾತನಾಡಿ, ಕನಕದಾಸರು ಶ್ರೇಷ್ಠ ಭಕ್ತಿಯ ಸಂಕೇತ. ಭಕ್ತಿ ಪರಂಪರೆಯ ಅಪಾರ ಶಕ್ತಿಯನ್ನು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಅವರು ಕಲಿಯೂ ಹೌದು. ಕವಿಯೂ ಹೌದು. ಕೃಷ್ಣ ಭಕ್ತಿಯ ಜೀವಾಮೃತವನ್ನು ಜಗತ್ತಿಗೆ ನೀಡುವ ಮೂಲಕ ಕೀರ್ತನೆಗಳಲ್ಲಿ ವೈಚಾರಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ ಮಾತನಾಡಿ, ಕನಕದಾಸ ಒಂದು ವರ್ಗ ಅಥವಾ ಜಾತಿಗೆ ಸೇರುವ ವ್ಯಕ್ತಿತ್ವವಾಗಿರದೆ ವಿಶ್ವಾತ್ಮಕ ಚಿಂತನೆಗಳ ಮೂರ್ತರೂಪ ಎನಿಸಿದ್ದಾರೆ. ಸಾಮಾಜಿಕ ಚಿಂತನೆಗಳ ಮೂಲಕ ಎಲ್ಲ ವರ್ಗದ ಜನರಿಗೆ ಹತ್ತಿರವಾದ ಅವರು ನಿಷ್ಠೆ ಮತ್ತು ಪಾರಮಾರ್ಥಿಕ ಚಿಂತನೆಗಳ ಮೂಲಕ ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದವರು ಎಂದರು.
ಜಾತಿವಾದ ಅತ್ಯಂತ ಅಪಾಯಕಾರಿ: ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕಸಾಪ ತಾ. ಅಧ್ಯಕ್ಷ ರವಿಕಿರಣ್, ಕನಕರ ಚಿಂತನೆಗಳನ್ನು ಬಾಯಲ್ಲಿ ಹೇಳುತ್ತಾ ಜಾತಿವಾದದ ಬೆನ್ನಿಗೆ ಬಿದ್ದಿರುವ ಇಂದಿನ ವ್ಯವಸ್ಥೆ ಅತ್ಯಂತ ಅಪಾಯಕಾರಿ. ಪೇಜಾವರ ತೀರ್ಥರು ಕುರುಬರಿಗೆ ವೈಷ್ಣವ ದೀಕ್ಷೆ ಕೊಡುವ ಮಾತನ್ನಾಡುವುದು ಸಾಮಾಜಿಕ ನ್ಯಾಯಕ್ಕೆ ತಕ್ಕುದಲ್ಲ. ದೀಕ್ಷೆ ವಿಚಾರವೇ ಒಂದು, ಅತಿಶ್ರೇಷ್ಠ ಮತ್ತೊಂದು ಕನಿಷ್ಠ ಎಂಬ ಭಾವನೆಯನ್ನು ಬೆಳೆಸುತ್ತದೆ. ಸ್ವಾಭಿಮಾನಿ ಬದುಕು ಪಂಥ, ಜಾತಿ, ವರ್ಗ ಸಮೀಕರಣಗಳನ್ನು ಮೀರಿದ್ದು. ವಿಶ್ವೇಶ್ವರ ತೀರ್ಥರು ಈ ಬಗ್ಗೆ ವೈಚಾರಿಕ ಚಿಂತನೆಗೆ ತೊಡಗಬೇಕೇ ವಿನಃ ವೈಷ್ಣವ ರಾಯಭಾರವನ್ನಲ್ಲ. ಕನಕದಾಸ ಭಾರತೀಯ ಸಾಹಿತ್ಯದ ಮೊದಲ ಬಂಡಾಯ ಕವಿಯಾಗಿ ಕಾಣಿಸುತ್ತಾನೆ. ರಾಮಧಾನ್ಯ ಚರಿತೆಯ ಮೂಲಕ ತಳವರ್ಗ ಮತ್ತು ಮೇಲ್ವರ್ಗದ ತರ್ಕಬದ್ಧ ವಿಮರ್ಶೆ ಮತ್ತು ಸಂಘರ್ಷವನ್ನು ಚಿತ್ರಿಸಿ, ಕೊನೆಯಲ್ಲಿ ನೆಲದ ಸಂಸ್ಕೃತಿಯ ಗೆಲವಿನೊಂದಿಗೆ ತಾನು ಶೋಷಿತಪರವಾದ ದನಿ ಎಂಬುದನ್ನು ಸಾಂಕೇತಿಕ ಅರ್ಥದಲ್ಲಿ ನೀಡುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಗಾಯಕ ಪಂಚಾಕ್ಷರಿ ಹಿರೇಮಠ ಮತ್ತು ತಂಡದಿಂದ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ತಹಸೀಲ್ದಾರ್ ಕೆ.ಬಿ. ಸಿದ್ದಲಿಂಗಯ್ಯ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್, ನಗರಸಭೆ ಪೌರಾಯುಕ್ತ ಡಾ. ಪಿ. ಬಿಳಿಕೆಂಚಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ತಿಮ್ಮೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹನುಮಂತರಾಯಪ್ಪ, ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ನಗರಸಭಾ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ವಿವಿಧ ಇಲಾಖೆಗಳ ಪ್ರಮುಖರು ಹಾಜರಿದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಇಲ್ಲಿನ ತಾಲೂಕು ಕಚೇರಿ ಮುಂಭಾಗದಿಂದ ಕನಕದಾಸರ ಭಾವಚಿತ್ರದ ಸಂಭ್ರಮದ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಜಾನಪದ ತಂಡಗಳೊಂದಿಗೆ ನಡೆದ ಮೆರವಣಿಗೆ ಗಮನ ಸೆಳೆಯಿತು.
ನಗರಸಭಾ ಸದಸ್ಯರಿಂದ ಸಭಾತ್ಯಾಗ
ದೊಡ್ಡಬಳ್ಳಾಪುರ: ಇಲ್ಲಿನ ನಗರಸಭೆಯ ಪೌರ ಕಾರ್ಮಿಕರಿಗೆ ವಿವಿಧ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮ ಡಾ. ರಾಜ್ಕುಮಾರ್ ಕಲಾಭವನ(ಪುರಭವನ)ದಲ್ಲಿ ಬುಧವಾರ ನಡೆಯಿತು.
ಪೌರ ಕಾರ್ಮಿಕದ ದಿನಾಚರಣೆ ಅಂಗವಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪೌರಾಯುಕ್ತರು ನಗರಸಭೆ ಸದಸ್ಯರಿಗೆ ಸುತ್ತೋಲೆ ಕಳುಹಿಸಿದ್ದರು. ಆದರೆ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದ ಭಾಗವಾಗಿ ಈ ಕಾರ್ಯಕ್ರಮವನ್ನು ಬೇಕಾಬಿಟ್ಟಿಯಾಗಿ ಮುಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹಿರಿಯ ನಗರಸಭಾ ಸದಸ್ಯ ತ.ನ. ಪ್ರಭುದೇವ್ ನೇತೃತ್ವದಲ್ಲಿ ಹಲವು ನಗರಸಭಾ ಸದಸ್ಯರು ಆಯುಕ್ತರ ವರ್ತನೆ ಖಂಡಿಸಿದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಮಾಡುತ್ತಿದ್ದೀರಿ. ಅವರ ಕುಂದುಕೊರತೆಗಳನ್ನು ಆಲಿಸುವ ಸೌಜನ್ಯ ತೋರಿ. ಪೌರ ಕಾರ್ಮಿಕರ ಜಿಲ್ಲಾ ಮತ್ತು ತಾಲೂಕು ಸಂಘಗಳ ಅಧ್ಯಕ್ಷರುಗಳೂ ಇದ್ದಾರೆ. ವ್ಯವಸ್ಥಿತವಾಗಿ ಕಾರ್ಯಕ್ರಮ ಯೋಜಿಸಿ. ಅದನ್ನು ಬಿಟ್ಟು ಮತ್ತೊಂದು ಕಾರ್ಯಕ್ರಮದಲ್ಲೇ ಸಲಕರಣೆಗಳನ್ನು ವಿತರಿಸಿ ಕೈತೊಳೆದುಕೊಳ್ಳುವ ನಿರ್ಲಕ್ಷ್ಯ ಧೋರಣೆ ಬೇಡ ಎಂದು ಏರಿದ ಧ್ವನಿಯಲ್ಲಿ ಆಗ್ರಹಿಸಿದರು.
ನಗರಸಭೆಯ ಕೆಲ ಸದಸ್ಯರು ಮತ್ತು ಅಧಿಕಾರಿಗಳ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಶಾಸಕ ಟಿ. ವೆಂಕಟರಮಣಯ್ಯ ಮಧ್ಯ ಪ್ರವೇಶಿಸಿ, ಆಕ್ರೋಶ ವ್ಯಕ್ತಪಡಿಸಿದ ನಗರಸಭಾ ಸದಸ್ಯರನ್ನು ಸಮಾಧಾನಪಡಿಸಿದರು.
ಸಭಾತ್ಯಾಗ: ತದನಂತರ ಪ್ರತ್ಯೇಕವಾಗಿಯೇ ಸಭೆ ಆರಂಭವಾಯಿತಾದರೂ, ಹಲವು ಮಂದಿ ನಗರಸಭಾ ಸದಸ್ಯರು ಸಭೆಯಿಂದ ಹೊರನಡೆದರು. ಅಧಿಕಾರಿಗಳು ಮತ್ತು ನಗರಸಭಾ ಸದಸ್ಯರ ನಡುವಿನ ವಾಗ್ವಾದಕ್ಕೆ ಸಭೆಯಲ್ಲಿದ್ದ ಪೌರ ಕಾರ್ಮಿಕರು ಮೂಲ ಸಾಕ್ಷಿಯಾಗಬೇಕಾಯಿತು.
ಸಾಮಗ್ರಿ ವಿತರಣೆ: ನಂತರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಟಿ. ವೆಂಕಟರಮಣಯ್ಯ ಪೌರ ಕಾರ್ಮಿಕರ ಕಲ್ಯಾಣ ನಿಧಿಯಿಂದ ಪೌರ ಕಾರ್ಮಿಕರಿಗೆ ಕುಕ್ಕರ್, ಹೆಲ್ಮೆಟ್, ಬೂಟ್ಸ್, ಮುಖಗವಸು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಿದರು. ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ 75 ಪೌರ ಕಾರ್ಮಿಕರಿಗೂ ಸಾಮಗ್ರಿಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಸರಿಯಾಗಿ ತಲುಪಿಸುವುದು ಅಧಿಕಾರಿಗಳ ಕರ್ತವ್ಯ. ಇಡೀ ಸಮಾಜದ ಕೊಳಕನ್ನು ತೆಗೆಯುವ ಪೌರ ಕಾರ್ಮಿಕರ ಬದುಕು ಹಸನಾಗಬೇಕು. ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಯೋಜನೆಗಳು ತಲುಪಬೇಕು ಎಂದರು.
ನಗರಸಭಾ ಪೌರಾಯುಕ್ತ ಡಾ. ಬಿಳಿಕೆಂಚಪ್ಪ, ಪೌರ ಕಾರ್ಮಿಕರ ಜಿಲ್ಲಾ ಸಂಘದ ಅಧ್ಯಕ್ಷ ಮಂಜುನಾಥ್, ತಾಲೂಕು ಘಟಕದ ಅಧ್ಯಕ್ಷ ತಿಪ್ಪಣ್ಣ, ನಗರಸಭಾ ಸದಸ್ಯರಾದ ಕೆ.ಜಿ. ರಘುರಾಂ, ಲೋಕೇಶ್ಬಾಬು, ಎಚ್.ಎಸ್. ಶಿವಶಂಕರ್, ಎನ್.ಕೆ. ರಮೇಶ್, ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.