'ಕುಷ್ಠರೋಗ ನಿರ್ಮೂಲನೆಗೆ ಶ್ರಮಿಸಬೇಕಿದೆ'
ಚನ್ನಪಟ್ಟಣ: ಆರೋಗ್ಯ ಇಲಾಖೆ ಮತ್ತು ಸರ್ಕಾರದ ಪರಿಶ್ರಮದಿಂದಾಗಿ ಕುಷ್ಠರೋಗ ನಿಯಂತ್ರಣಕ್ಕೆ ಬಂದಿದೆಯಾದರೂ ಈ ರೋಗವನ್ನು ನಿರ್ಮೂಲನೆ ಮಾಡಲು ನಾವೆಲ್ಲ ಶ್ರಮಿಸಬೇಕಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂ ಸೇವಾ ಸಂಸ್ಥೆಗಳಿಗೆ ಕುಷ್ಠರೋಗದ ಬಗೆಗಿನ ಕಾರ್ಯಾಗಾರದಲ್ಲಿ ಮಾತನಾಡಿ, ಕುಷ್ಠರೋಗದ ವಿರುದ್ಧ ನಿರಂತರ ಹೋರಾಟ ಅಗತ್ಯವಾಗಿದ್ದು ಆರೋಗ್ಯ ಇಲಾಖೆಯ ನಿರಂತರ ಪರಿಶ್ರಮದಿಂದಾಗಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಇಂದು ಹೇಳ ಹೆಸರಿಲ್ಲದಂತಾಗಿದೆ ಎಂದರು.
ಆರೋಗ್ಯ ಇಲಾಖೆ ರಕ್ತ ಪರೀಕ್ಷಕ ಪುಟ್ಟಸ್ವಾಮಿಗೌಡ ಮಾತನಾಡಿ, ರೋಗ ನಿರೋಧಕ ಶಕ್ತಿ ಕಡಿಮೆಯಾದವರಿಗೆ ಕುಷ್ಠರೋಗ ತಗುಲುತ್ತದೆ. ನಮ್ಮ ದೇಹದ ಯಾವುದೇ ಭಾಗದಲ್ಲಿ ತಾಮ್ರ ಬಣ್ಣದ ಮಚ್ಚೆ ಕಂಡು ಬಂದ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೋರಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಲೋಕೇಶ್, ವೆಂಕಟೇಶ್, ರಾಮ್ಪ್ರುಸಾದ್, ಎಂ.ಸಿ. ದಯಾಳ್, ಜಗದೀಶ್ ಪ್ರಸನ್ನ, ರಾಮು, ವಿನಯ್, ರಮೇಶ್‌ಕುಮಾರ್ ಇದ್ದರು. ವೇಣುಗೋಪಾಲ್ ಸ್ವಾಗತಿಸಿ, ವಂದಿಸಿದರು.