ಜ.1ರಿಂದ ಎಲ್ಪಿಜಿ ಸಬ್ಸಿಡಿ ನೇರ ವರ್ಗಾವಣೆ
ವಿಶೇಷ ವರದಿ
ರಾಮನಗರ: ಅಡುಗೆ ಅನಿಲ ಗ್ರಾಹಕರಿಗೆ ಸಬ್ಸಿಡಿ ನೇರ ಸೌಲಭ್ಯ ವರ್ಗಾವಣೆ ಕಾರ್ಯಕ್ರಮ ರಾಮನಗರ ಜಿಲ್ಲೆಯಲ್ಲಿ 2014ನೇ ಜ.1ರಿಂದ ಜಾರಿಗೆ ಬರಲಿದೆ. ಹೀಗಾಗಿ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಎಲ್ಪಿಜಿ ಬಳಕೆದಾರರ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ಜೋಡಿಸುವಂತೆ ಸೂಚಿಸಲಾಗಿದೆ.
ಆಧಾರ್ ಸಂಖ್ಯೆಯನ್ನು ಎಲ್ಪಿಜಿ ಬಳಕೆದಾರರ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗೆ ಜೋಡಿಸಿದ ಗ್ರಾಹಕರಿಗೆ ಮಾತ್ರವೇ ಮಾರುಕಟ್ಟೆ ದರದ ಮೇರೆಗೆ ಅಡುಗೆ ಅನಿಲ ಸರಬರಾಜು ಮಾಡಲಿದ್ದು, ನಂತರ ಅವರ ಪಾಲಿನ ಸಬ್ಸಿಡಿ ಬಾಬ್ತನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಇನ್ನಷ್ಟೇ ಚುರುಕು ಸಾಧ್ಯತೆ: ರಾಮನಗರ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ಅಷ್ಟಾಗಿ ಚುರುಕುಗೊಂಡಿರಲಿಲ್ಲ. ಇದುವರೆಗೆ ಜಿಲ್ಲಾದ್ಯಂತ ಶೇ.30ಕ್ಕಿಂತ ಕಡಿಮೆ ಸಂಖ್ಯೆಯ ಜನರಷ್ಟೇ ನೋಂದಣಿ ಮಾಡಿಸಿದ್ದಾರೆ. ಇದೀಗ ಎಲ್ಪಿಜಿಗೆ ಆಧಾರ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆ ಚುರುಕಾಗುವ ಸಾಧ್ಯತೆ ಇದೆ.
ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಸರ್ಕಾರ ಹೇಳಿದ್ದ ಹಿನ್ನೆಲೆಯಲ್ಲಿ ಜನರು ನೋಂದಣಿಗೆ ಆಸಕ್ತಿಯನ್ನೇ ತೋರಿರಲಿಲ್ಲ. ಇನ್ನು ಮುಂದೆ ಆಧಾರ್ ಕಾರ್ಡ್ಗಾಗಿ ನೋಂದಣಿ ಕೇಂದ್ರಗಳಲ್ಲಿ ಮುಗಿ ಬೀಳುವ ಸಾಧ್ಯತೆ ಇದೆ.
ವಸೂಲಿ ಬಾಜಿ ಜೋರು: ಆಧಾರ್ ನೋಂದಣಿ ಸಂಪೂರ್ಣ ಉಚಿತವೆಂದು ಜಿಲ್ಲಾಡಳಿತ ಪದೇ ಪದೇ ಹೇಳುತ್ತಲೇ ಇದೆ. ಇಷ್ಟಾಗಿಯೂ ಜಿಲ್ಲೆಯ ಬಹುತೇಕ ನೋಂದಣಿ ಕೇಂದ್ರಗಳಲ್ಲಿ ವಸೂಲಿ ಬಾಜಿ ಜೋರಾಗಿರುವ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಖಾಸಗಿ ನೋಂದಣಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಅರ್ಜಿಗೆ 10, ನೋಂದಣಿ ಪ್ರಕ್ರಿಯೆಗೆ 50ರವರೆಗೆ ಹಣ ವಸೂಲಿ ಮಾಡಲಾಗುತ್ತಿದೆ. ಸರ್ಕಾರಿ ವ್ಯವಸ್ಥೆ ಇಲಾಖೆ ಇಲ್ಲವೇ ಸಂಸ್ಥೆಗಳಲ್ಲಿ ನಡೆಯುತ್ತಿರುವ ನೋಂದಣಿ ಪ್ರಕ್ರಿಯೆಗಳೂ ಹಣ ವಸೂಲಿಯಿಂದ ಮುಕ್ತವಾಗಿಲ್ಲ.
ನೋಂದಣಿ ಪ್ರಕ್ರಿಯೆಯನ್ನು ವಹಿಸಿಕೊಂಡ ಖಾಸಗಿಯವರು ತಾವು ಕಂಪ್ಯೂಟರ್, ಕ್ಯಾಮೆರಾ, ಇಂಟರ್ನೆಟ್, ವಿದ್ಯುತ್ ಬಿಲ್ ಪಾವತಿಸುವುದಕ್ಕೆ ಹಣ ವಸೂಲಿ ಮಾಡುತ್ತಿದ್ದೇವೆ ಎಂದು ರಾಜಾರೋಷವಾಗಿಯೇ ಹೇಳಿಕೊಳ್ಳುತ್ತಿದ್ದಾರೆ.
ದಂಧೆಕೋರರ ಹಾವಳಿ: ಇನ್ನು ಗ್ರಾಮ ಪಂಚಾಯಿತಿ, ಅಂಚೆ ಕಚೇರಿ ಸಹಿತ ವಿವಿಧೆಡೆ ಇರುವ ನೋಂದಣಿ ಕೇಂದ್ರಗಳಲ್ಲೂ ಅರ್ಜಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಅರ್ಜಿ ನೀಡುವುದರಲ್ಲೂ ಶಿಫಾರಸು, ಲಾಬಿ ನಡೆಯುತ್ತಿರುವ ಪರಿಣಾಮ ಅದೆಷ್ಟೋ ಮಂದಿ ನೋಂದಣಿಗೆ ನಿರಾಸಕ್ತಿ ತೋರಿದ ನಿದರ್ಶನ ಉಂಟು. ಈ ಅಕ್ರಮಗಳ ಬಗ್ಗೆ ದೂರು ಕೇಳಿ ಬಂದ ಕಡೆ ತೆರಳಿ ಪರಿಶೀಲಿಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಿದ ನಿದರ್ಶನ ತೀರಾ ವಿರಳವಾಗಿದೆ. ಈ ಹಿನ್ನೆಲೆಯಲ್ಲಿ ದಂಧೆಕೋರರಿಗೆ ಅಧಿಕಾರಿಗಳದ್ದೇ ಕುಮ್ಮಕ್ಕು ಇದೆ ಎನ್ನುವ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತಾಗಿದೆ.
ಗ್ರಾ.ಪಂ.ಗಳ ಅಸಹಕಾರ: ಕೆಲ ಗ್ರಾಮ ಪಂಚಾಯಿತಿಗಳು ತಮ್ಮ ಕಟ್ಟಡಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಥಳಾವಕಾಶವಿದ್ದಾಗ್ಯೂ ಆಧಾರ್ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲು ಹಿಂದೇಟು ಹಾಕುತ್ತಿವೆ. ಹಾಗೊಮ್ಮೆ ಅವಕಾಶ ನೀಡಿದರೂ ನೋಂದಣಿ ಸಿಬ್ಬಂದಿಗೆ ಅನಗತ್ಯ ಕಿರಿಕಿರಿ ಉಂಟು ಮಾಡಿ, ಬೇಗನೆ ಎತ್ತಂಗಡಿ ಮಾಡಿಸುತ್ತಿದ್ದಾರೆ.
ಅಲ್ಲೊಂದು ಇಲ್ಲೊಂದು ಕಡೆ ಆಧಾರ್ ನೋಂದಣಿ ಕಾರ್ಯಕ್ರಮಕ್ಕೆ ಗ್ರಾ.ಪಂ.ಗಳಲ್ಲಿ ಅವಕಾಶವನ್ನೇನೋ ಕಲ್ಪಿಸಲಾಗಿದೆ. ನೋಂದಣಿ ಮಾಡುವವರು ಆ ಗ್ರಾ.ಪಂ.ನ ವಿದ್ಯುತ್ ಬಿಲ್ ಸಹಿತ ಇತರೆ ಸಣ್ಣ ಪುಟ್ಟ ಖರ್ಚುಗಳನ್ನು ನಿರ್ವಹಿಸಬೇಕಿದೆ. ಇದನ್ನೇ ಮುಂದಿಟ್ಟುಕೊಂಡು ಹಣ ವಸೂಲಿ ಮಾಡುತ್ತಿರುವುದೂ ಉಂಟು.
ಅನುಷ್ಠಾನಕ್ಕೆ ಸಮಿತಿ ರಚನೆ
ಈ ಯೋಜನೆಯ ಕ್ರಮಬದ್ಧ ಅನುಷ್ಠಾನಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಮಟ್ಟದಲ್ಲಿ ಮೇಲ್ವಿಚಾರಣೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಸಮಿತಿ ಅಧ್ಯಕ್ಷರಾಗಿರುತ್ತಾರೆ.
ಜಿಲ್ಲಾ ಮಟ್ಟದ ಸಮಿತಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು, ಪೌರ ಸಂಸ್ಥೆಯ ಆಯುಕ್ತ ಇಲ್ಲವೇ ಮುಖ್ಯಾಧಿಕಾರಿ, ಲೀಡ್ ಬ್ಯಾಂಕ್ ಮ್ಯಾನೇಜರ್, ತೈಲ ಮಾರಾಟ ಕಂಪನಿ ಪ್ರತಿನಿಧಿಗಳು, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯಿಂದ ನಾಮ ನಿರ್ದೇಶನಗೊಂಡ ಇತರರು ಸದಸ್ಯರಾಗಿರುತ್ತಾರೆ.
ತೈಲ ಮಾರಾಟ ಕಂಪನಿಗಳ ಜಿಲ್ಲಾ ಮಟ್ಟದ ಸಮನ್ವಯಕರು ಸಮಿತಿ ಸಂಚಾಲಕರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅನುವಾಗಲು ವಿವಿಧ ಪಾಲುದಾರರುಗಳ ನಡುವೆ ಸಮನ್ವಯವನ್ನು ಕಾಯ್ದುಕೊಳ್ಳುವುದು ಈ ಸಮಿತಿಯ ಉದ್ದೇಶವಾಗಿರುತ್ತದೆ.