ರಾಮನಗರ ಅಪರ ಜಿಲ್ಲಾಧಿಕಾರಿ ಅರ್ಚನಾ ವರ್ಗಾವಣೆ
ರಾಮನಗರ: ಇಲ್ಲಿನ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಮೈಸೂರಿಗೆ ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಬಸವರಾಜು ಆಗಮಿಸಿದ್ದಾರೆ. ಮೈಸೂರಿನವರೇ ಆದ ಅರ್ಚನಾ ಅವರು, ಅದೇ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವರ್ಗವಾಗಿದ್ದಾರೆ. ಇದೀಗ ರಾಮನಗರ ಅಪರ ಜಿಲ್ಲಾಧಿಕಾರಿ ಆಗಿ ಬಂದಿರುವ ಬಸವರಾಜು ಕೆಪಿಎಲ್‌ಸಿ ಕಾರ್ಯದರ್ಶಿ ಆಗಿದ್ದರು. ಅದಕ್ಕೂ ಮುನ್ನ ಮೈಸೂರು ಮುಡಾದಲ್ಲಿ ಕಾರ್ಯದರ್ಶಿ ಆಗಿದ್ದರು. ಅರ್ಚನಾ ಅವರು ಈ ಜಿಲ್ಲೆಯಲ್ಲಿ ಐದು ಮಂದಿ ಜಿಲ್ಲಾಧಿಕಾರಿ ಅಧೀನದಲ್ಲಿ ಕೆಲಸ ನಿರ್ವಹಿಸಿದ್ದಾರೆ. ದಕ್ಷತೆ ಮತ್ತು ಪ್ರಾಮಾಣಿಕತೆಯ ಜತೆಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿ ಇಲ್ಲಿ ಜನಾನುರಾಗಿ ಆಗಿದ್ದರು.
ಕಾರು ಬಳಸಿದವರಲ್ಲ: ಬೆಂಗಳೂರು ಸಹಿತ ವಿವಿಧೆಡೆ ವಾಸವಿರುವ ಈ ಜಿಲ್ಲೆಯ ಉನ್ನತ ಅಧಿಕಾರಿಗಳು ಕಚೇರಿ ಕೆಲಸಕ್ಕೆ ಮಾತ್ರವಲ್ಲದೆ ತಮ್ಮ ನಿವಾಸಕ್ಕೆ ತೆರಳುವುದಕ್ಕೂ ಸರ್ಕಾರಿ ಕಾರನ್ನೇ ಬಳಸುತ್ತಿದ್ದರು. ಅದಕ್ಕೆ ಅರ್ಚನಾ ಹೊರತಾಗಿದ್ದರು. ಅರ್ಚನಾ ಅವರಿಗೆ ರಾಮನಗರದಲ್ಲಿ ವಸತಿ ಗೃಹವಿತ್ತು. ಬೆಂಗಳೂರಿಗೆ ತೆರಳಬೇಕೆಂದಾಗ ಕಾರಿನಲ್ಲಿ ಬಸ್ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಂಡು, ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸಿನಲ್ಲೇ ಪ್ರಯಾಣ ಬೆಳೆಸುತ್ತಿದ್ದರು ಎನ್ನುವುದು ವಿಶೇಷ.