ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ರೈತರಿಗಿನ್ನೂ ಕಾಲುಬಾಯಿ ಪರಿಹಾರ ಮರೀಚಿಕೆ

Srinivasa Murthy VN
Updated On : 22 Nov 2013, 12:14 pm

-ಮತ್ತೀಕೆರೆ ಜಯರಾಮ್
ರಾಮನಗರ: ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳ ಸಮೀಕ್ಷೆ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ನಿಯೋಜಿತ ಅಧಿಕಾರಿಗಳ ಸಮಿತಿ ಪಟ್ಟಿ ಅಂತಿಮವಾಗಿ ಸಿದ್ಧಪಡಿಸದ ಪರಿಣಾಮ ಕೆಎಂಎಫ್ ಮತ್ತು ಸರ್ಕಾರ ಘೋಷಿಸಿರುವ ಪರಿಹಾರ ಧನ ಸಂತ್ರಸ್ತ ರೈತರ ಪಾಲಿಗಿನ್ನೂ ಮರೀಚಿಕೆಯಾಗಿದೆ.
ಮೃತ ರಾಸುಗಳಿಗೆ ಕೆಎಂಎಫ್ ಸೆ.30ರಂದೇ ಪರಿಹಾರ ಘೋಷಿಸಿದೆ. ಸರ್ಕಾರವು ಅ.11ರಂದು ಪರಿಹಾರ ಪ್ರಕಟಿಸಿದೆ. ಇಷ್ಟಾಗಿಯೂ ಜಾನುವಾರುಗಳ ಮಾಲೀಕರಿಗಿನ್ನೂ ಪರಿಹಾರ ದಕ್ಕದಿರಲು 'ದೇವರು ಕೊಟ್ಟರೂ ಪೂಜಾರಿ ಕೊಡ' ಎನ್ನುವ ಅಧಿಕಾರಿಗಳ ಧೋರಣೆಯೇ ಕಾರಣವಾಗಿದೆ.
ರಾಮನಗರ ಜಿಲ್ಲೆಯ 4 ತಾಲೂಕುಗಳ ಪೈಕಿ ಯಾವೊಂದು ತಾಲೂಕಿನಿಂದಲೂ ಇದುವರೆಗೆ ಜಿಲ್ಲಾಡಳಿತಕ್ಕೆ ಪಟ್ಟಿ ಸಲ್ಲಿಕೆಯಾಗಿಲ್ಲ. ಜೀವನಾಧಾರವಾಗಿದ್ದ ಜಾನುವಾರು ಕಳೆದುಕೊಂಡಿರುವ ಹೈನೋದ್ಯಮ ಅವಲಂಬಿತ ರೈತರು ಪರಿಹಾರಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.
ತಂಡದಲ್ಲಿರುವ ಅಧಿಕಾರಿಗಳು: ಸರ್ಕಾರವು ಪರಿಹಾರ ಘೋಷಿಸಿದ ಸಂದರ್ಭದಲ್ಲೇ ಮೃತ ರಾಸುಗಳ ನಿಖರ ಮಾಹಿತಿ ಸಂಗ್ರಹಿಸಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಐವರು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿತ್ತು. ಅದರಲ್ಲಿ ತಾಪಂ ಇಒ ಸಹ ಅಧ್ಯಕ್ಷರಾಗಿದ್ದಾರೆ.
ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಕೆಎಂಎಫ್ ಅಧೀನದ ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯಸ್ಥಾಪಕ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸದಸ್ಯರಾಗಿ ನಿಯೋಜನೆಗೊಂಡಿದ್ದಾರೆ.
ಸಮಿತಿಯು ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದೆ. ಸಮೀಕ್ಷೆ ಕಾರ್ಯಕ್ಕಾಗಿ ನೆರವಾಗುವಂತೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೆಎಂಎಫ್ ಸಿಬ್ಬಂದಿಗೆ ಸ್ಪಷ್ಟ ಸೂಚನೆಯನ್ನೂ ನೀಡಲಾಗಿತ್ತು.
ವರದಿ ಮಾಡುವ ಬಗೆ: ತಾಲೂಕು ಮಟ್ಟದ ಸಮಿತಿಯು ರಾಸು ಸಾವನ್ನಪ್ಪಿದ 72 ತಾಸಿನೊಳಗೆ ಮರಣೋತ್ತರ ಪರೀಕ್ಷೆ ವರದಿಯೊಂದಿಗೆ ಮಾಹಿತಿ ಕಲೆ ಹಾಕಬೇಕು. ಅದಾಗಲೇ ಸಾವನ್ನಪ್ಪಿದ್ದ ರಾಸುಗಳ ಮರಣೋತ್ತರ ಪರೀಕ್ಷೆ ವರದಿ ಇಲ್ಲದಿದ್ದಲ್ಲಿ ಮಹಜರ್ ವರದಿ(ಪಂಚನಾಮೆ) ನಡೆಸಿ ನಡೆಸಬೇಕೆಂದು ಸೂಚಿಸಲಾಗಿತ್ತು. ತಾಲೂಕು ಮಟ್ಟದಲ್ಲಿ ಸಿದ್ಧಪಡಿಸಿದ ಅಂತಿಮ ಪಟ್ಟಿಯನ್ನು ತಹಸೀಲ್ದಾರ್, ತಾ.ಪಂ. ಇಒ, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರು ಅನುಮೋದಿಸಿ ವಿವರಗಳೊಂದಿಗೆ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರಿಗೆ ಸಲ್ಲಿಸಬೇಕಿದೆ. ಅದಿನ್ನೂ ಕಾರ್ಯಗತವಾಗಿಲ್ಲ.  ಬಹುತೇಕ ಕಡೆ ಮಹಜರು ಮತ್ತು ಸ್ಥಳ ಪರಿಶೀಲನೆ ಕಾರ್ಯಕ್ಕೆ ತಹಸೀಲ್ದಾರ್, ತಾಪಂ ಇಒ ತೆರಳಿಲ್ಲ. ಅವರು ತಮ್ಮ ಅಧೀನದ ಸಿಬ್ಬಂದಿಯನ್ನು ಸಮಿತಿಯೊಂದಿಗೆ ಸಾಗ ಹಾಕಿದ್ದಾರೆ. ಈ ಇಬ್ಬರು ಅಧಿಕಾರಿಗಳ ಕೆಲಸ ಪಟ್ಟಿಗೆ ಅನುಮೋದನೆ ನೀಡುವುದಕ್ಕಷ್ಟೇ ಸೀಮಿತವಾಗಿದೆ.
ಜಿಲ್ಲೆ ವ್ಯಾಪ್ತಿಯ ತಾಲೂಕುಗಳಿಂದ ಪಡೆದ ವಿವರಗಳನ್ನು ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರು ಮತ್ತು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಆಖೈರುಗೊಳಿಸಿ, ಜಿ.ಪಂ. ಸಿಇಒ ಮುಖಾಂತರ ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆ ಆಯುಕ್ತರಿಗೆ ರವಾನಿಸಬೇಕಿದೆ.
ಪರಿಹಾರ ಹಂಚಿಕೆ ಕ್ರಮ: ಪಟ್ಟಿಗೆ ಸರ್ಕಾರದ ಅನುಮೋದನೆ ದೊರೆತ ಬಳಿಕ ಕೆಎಂಎಫ್ ತನ್ನ ಪಾಲಿನ ಪರಿಹಾರ ಮೊತ್ತವನ್ನು ಸರ್ಕಾರಕ್ಕೆ ಠೇವಣಿ ಮಾಡಲಿದೆ. ಆ ಜತೆಗೆ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಸೇರಿಸಿ ಆಯಾ ಜಿಲ್ಲೆ ಪಾಲಿನ ಮೊತ್ತವನ್ನು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ಬಿಡುಗಡೆ ಮಾಡಲಿದೆ.
ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ರೈತರಿಗೆ ಪರಿಹಾರ ಧನ ತಲುಪಲು ಕನಿಷ್ಠ ಒಂದೂವರೆಯಿಂದ ಎರಡು ತಿಂಗಳಾಗುತ್ತದೆ. ಒಂದೊಮ್ಮೆ ತಹಸೀಲ್ದಾರ್ ನೇತೃತ್ವದ ತಾಲೂಕು ಸಮಿತಿಗಳು ಪಟ್ಟಿಯನ್ನು ತ್ವರಿತವಾಗಿ ಸಲ್ಲಿಸಿದ್ದರೆ ಪರಿಹಾರ ಧನ ತ್ವರಿತ ವಿತರಣೆಗೆ ಸಹಕಾರಿ ಆಗುತ್ತಿತ್ತು.

ಗಳಲೇ ರೋಗವೇ ಇಲ್ಲವಂತೆ
ಜಾನುವಾರುಗಳಿಗೆ ತಲೆದೋರಿರುವುದು ಕಾಲುಬಾಯಿ ಜ್ವರ ಮಾತ್ರವೇ. ಗಳಲೇ ರೋಗ ಆವರಿಸಿರುವುದು ಮರಣೋತ್ತರ ಪರೀಕ್ಷೆಯಲ್ಲಿ ರುಜುವಾತಾಗಿಯೇ ಇಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ಉನ್ನತ ಅಧಿಕಾರಿಯೊಬ್ಬರ ಸ್ಪಷ್ಟನೆ. ಗಳಲೇ ರೋಗದಿಂದ ಜಾನುವಾರುಗಳ ಸಾವೆನ್ನುವುದನ್ನು ಕೆಎಂಎಫ್ ಪಶು ವೈದ್ಯಾಧಿಕಾರಿಗಳು ಸ್ವಾರ್ಥಕ್ಕಾಗಿಯೇ ಬಿಂಬಿಸಿದ್ದಾರೆ. ಗಳಲೇ ರೋಗದ ಲಸಿಕೆ ನೀಡಿಕೆಗೆ ದೊರೆಯುವ ಕೇಂದ್ರದ ಸಬ್ಸಿಡಿ ಮೊತ್ತದ ಕಬಳಿಕೆಗಾಗಿಯೇ ಇಷ್ಟೆಲ್ಲ ನಡೆದಿದೆ ಎನ್ನುವುದು ಅವರ ಆರೋಪವಾಗಿದೆ.  ಸದ್ಯ, ಗಳಲೇ ರೋಗದ ಮುಂಜಾಗ್ರತಾ ಲಸಿಕೆ ನೀಡುವ ಕಾರ್ಯಕ್ರಮ ಪಶು ಸಂಗೋಪನಾ ಇಲಾಖೆ ವ್ಯಾಪ್ತಿಯಲ್ಲಿದೆ. ಅದನ್ನು ಹೇಗಾದರೂ ಕಸಿದುಕೊಳ್ಳುವ ಹುನ್ನಾರವೇ ಕೆಎಂಎಫ್ ಪಶು ವೈದ್ಯಾಧಿಕಾರಿಗಳು ಗಳಲೇ ರೋಗವೆಂದು ಹಬ್ಬಿಸುವುದಕ್ಕೆ ಕಾರಣ ಎಂದು ಅವರು ವಿವರಣೆ ನೀಡಿದ್ದಾರೆ.

ವಿಮೆ ಇದ್ದರೆ ಪರಿಹಾರವಿಲ್ಲ
ವಿಮೆ ಸೌಲಭ್ಯ ಹೊಂದಿದ ಮೃತ ರಾಸುಗಳು ಸರ್ಕಾರ ಮತ್ತು ಕೆಎಂಎಫ್ ಪೈಕಿ ಯಾವುದೇ ಪರಿಹಾರಕ್ಕೂ ಅರ್ಹವಲ್ಲ. ಹೀಗಾಗಿ ಮೃತ ರಾಸುಗಳ ಪಟ್ಟಿ ಸಿದ್ಧಪಡಿಸುವಾಗ ವಿಮೆ ಸಹಿತ ಮತ್ತು ರಹಿತ ವಿವರವನ್ನು ಕಡ್ಡಾಯವಾಗಿ ನಮೂದಿಸಲು ತಾಲೂಕು ಸಮಿತಿಗಳಿಗೆ ಸರ್ಕಾರ ಸೂಚಿಸಿದೆ. ಕೆಎಂಎಫ್ ತನ್ನ ಪರಿಹಾರಕ್ಕೆ ವಿಮೆ ವಿಷಯ ಪ್ರಸ್ತಾಪಿಸಿರಲಿಲ್ಲ. ಆದರೆ, ಸರ್ಕಾರವು ವಿಮೆ ಸೌಲಭ್ಯ ಹೊಂದಿಲ್ಲದ ರಾಸುಗಳಿಗೆ ಮಾತ್ರವೇ ಪರಿಹರವೆನ್ನುವ ಷರತ್ತು ವಿಧಿಸಿದೆ. ಇದೀಗ ಒಟ್ಟಿಗೆ ನೀಡುತ್ತಿರುವ ಪರಿಹಾರಕ್ಕೆ ವಿಮೆ ವ್ಯಾಪ್ತಿಗೆ ಒಳಪಟ್ಟ ರಾಸುಗಳನ್ನು ಪರಿಗಣಿಸಲಾಗುತ್ತಿಲ್ಲ.

ಮತ್ತೆ ಆವರಿಸಿದ ರೋಗ
ಕಾಲುಬಾಯಿ ಜ್ವರಬಾಧೆ ಮೊದಲಿಗೆ ಕಾಣಿಸಿಕೊಂಡಿದ್ದೇ ರಾಮನಗರ ಜಿಲ್ಲೆಯಲ್ಲಿ. ಕೆಲವೇ ದಿನಗಳಲ್ಲಿ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿತ್ತು. ವಿವಿಧ ಕಾರ್ಯಕ್ರಮಗಳ ಬಳಿಕ ಇಲ್ಲಿ ನಿಯಂತ್ರಣಕ್ಕೆ ಬಂದ ರೋಗವು ಇದೀಗ ಇನ್ನಷ್ಟು ಜಿಲ್ಲೆಗಳಲ್ಲಿ ಆವರಿಸಿದೆ.  ಈ ಭಾಗದಲ್ಲಿ ರೋಗ ಉಲ್ಬಣಿಸಿದಾಗಲೇ ರೋಗವಿಲ್ಲದ ಜಿಲ್ಲೆಗಳಲ್ಲಿ ಮುಂಜಾಗ್ರತಾ ಲಸಿಕೆ ನೀಡಿ, ಎಚ್ಚರ ವಹಿಸಿದ್ದರೆ ಅಲ್ಲೆಲ್ಲ ರೋಗ ಬಾರದಂತೆ ತಡೆಗಟ್ಟಲು ಸಾಧ್ಯವಿತ್ತು. ಇದಕ್ಕೆಲ್ಲ ಪಶು ಸಂಗೋಪನಾ ಇಲಾಖೆ ವೈಫಲ್ಯವೇ ಕಾರಣವೆನ್ನುವ ಆರೋಪ ಕೇಳಿ ಬಂದಿದೆ.

ಮೃತ ರಾಸುಗಳ ನಿಖರ ಮಾಹಿತಿಯು ಇದುವರೆಗೆ ಯಾವೊಂದು ತಾಲೂಕಿನಿಂದಲೂ ಸಲ್ಲಿಕೆಯಾಗಿಲ್ಲ. ಈ ವಿಷಯದಲ್ಲಿ ವಿಳಂಬ ಧೋರಣೆ ಸಲ್ಲದು. ಅಧಿಕಾರಿಗಳು ತಕ್ಷಣವೇ ಮಾಹಿತಿ ನೀಡಿ, ರೈತರಿಗೆ ತ್ವರಿತ ಪರಿಹಾರ ವಿತರಣೆಗೆ ನೆರವಾಗಬೇಕು.
-ಎಚ್.ಸಿ. ರಾಜು, ಅಧ್ಯಕ್ಷರು, ಜಿ.ಪಂ., ರಾಮನಗರ

ಮೃತ ರಾಸುಗಳ ನಿಖರ ಮಾಹಿತಿ ಸಲ್ಲಿಸಲು ತಾಲೂಕು ಮಟ್ಟದ ಸಮಿತಿಗಳಿಗೆ ಇನ್ನೊಂದೇ ದಿನ ಗಡುವು. ಸಲ್ಲಿಸದಿದ್ದರೆ ತಹಸೀಲ್ದಾರ್ ಸಹಿತ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
ಡಾ. ಎಂ.ವಿ. ವೆಂಕಟೇಶ್, ಸಿಇಒ, ಜಿ.ಪಂ., ರಾಮನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement