ರೋಟರಿಯಿಂದ ಪೋಲಿಯೋ ಜಾಗೃತಿ ಸೈಕಲ್ ಜಾಥಾ
ಕ.ಪ್ರ.ವಾರ್ತೆ ರಾಮನಗರ ನ. 21
ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸುವ ಸಂಕಲ್ಪದೊಂದಿಗೆ ರೋಟರಿ ಸಂಸ್ಥೆ ಜನ ಜಾಗೃತಿ ಕಾರ್ಯಕ್ರಮ ಮುಂದುವರೆಸುತ್ತಿದೆ ಎಂದು ಸಂಸ್ಥೆಯ ರಾಮನಗರ ಘಟಕದ ಅಧ್ಯಕ್ಷ ಆರ್.ಜಿ. ಚಂದ್ರಶೇಖರ್ ತಿಳಿಸಿದರು.
ಬೆಂಗಳೂರಿನ ವಾಯುವ್ಯ ರೋಟರಿ ಸಂಸ್ಥೆಯ 16 ಸದಸ್ಯರು ಬೆಂಗಳೂರಿನಿಂದ ಮಡಿಕೇರಿಯವರೆಗೆ ಕೈಗೊಂಡಿರುವ ಪೋಲಿಯೋ ಜಾಗೃತಿ ಸೈಕಲ್ ಜಾಥಾವನ್ನು ನಗರದಲ್ಲಿ ಸ್ವಾಗತಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದೆರಡು ವರ್ಷಗಳಿಂದ ಪೋಲಿಯೋ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ನಾಲ್ಕು ತಿಂಗಳಲ್ಲಿ ಯಾವುದೇ ಪ್ರಕರಣ ಕಂಡುಬರದಿದ್ದರೆ ವಿಶ್ವಸಂಸ್ಥೆಯು ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಘೋಷಣೆ ಮಾಡಲಿದೆ ಎಂದು ಅವರು ಹೇಳಿದರು.
2009ರಲ್ಲಿ ಭಾರತದಲ್ಲಿ 2 ಲಕ್ಷ ಪೋಲಿಯೋ ಪ್ರಕರಣಗಳು ಪತ್ತೆಯಾಗಿದ್ದವು. 2011ರಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು. ಪೋಲಿಯೋ ಪೀಡಿತರ ಸಂಖ್ಯೆ 2012ರಲ್ಲಿ ಶೂನ್ಯಕ್ಕೆ ಇಳಿದಿದೆ ಎಂದು ಅವರು ವಿವರಿಸಿದರು.
ಈ ಸ್ಥಿತಿಯನ್ನು ಮತ್ತೊಂದು ವರ್ಷ ಅಂದರೆ 2014ರ ಫೆಬ್ರವರಿವರೆಗೆ ಕಾಪಾಡಿಕೊಳ್ಳಬೇಕು. ಪೋಲಿಯೋ ಮುಕ್ತ ಭಾರತಕ್ಕಾಗಿ ರೋಟರಿ ಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಚಂದ್ರಶೇಖರರ್ತಿಳಿಸಿದರು. ಪೋಲಿಯೋ ಸೋಂಕನ್ನು ಭಾರತದಿಂದ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ರೋಟರಿ ಸಂಸ್ಥೆಯು ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಾ ಬಂದಿದೆ ಎಂದು ಸೈಕಲ್ ಜಾಥಾದ ನೇತೃತ್ವ ವಹಿಸಿರುವ ಬೆಂಗಳೂರು ಪಶ್ಚಿಮ ರೋಟರಿಯ ನಿರ್ದೇಶಕ ಚಂದ್ರಶೇಖರ್ ಹೇಳಿದರು.
ತಮ್ಮ ಶಾಖೆಯ 16 ಮಂದಿ ಸದಸ್ಯರು ಗುರುವಾರ ಬೆಳಗಿನ ಜಾವ ಬೆಂಗಳೂರಿನಿಂದ ಸೈಕಲ್ಗಳಲ್ಲಿ ಹೊರಟಿದ್ದು, ಮಾರ್ಗದುದ್ದಕ್ಕೂ ಜನರಲ್ಲಿ ಜಾಗೃತಿ ಮೂಡಿಸುತ್ತ ನ.24ರಂದು ಮಡಿಕೇರಿ ತಲುಪುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ರೋಟರಿ ಪ್ರಮುಖರಾದ ಸಿದ್ದೋಜಿ, ಕೆ.ಎಸ್. ಕೃಷ್ಣ, ಅಲ್ತಾಫ್ ಅಹಮದ್, ಮರಿಸ್ವಾಮಿ, ಸುರೇಶ್, ರಾಜಶೇಖರ್, ಸಿ. ರಾಜು, ಪುಟ್ಟಸ್ವಾಮಿ, ಪಿ. ಉಮೇಶ್, ಚನ್ನಪಟ್ಟಣ ರೋಟರಿ ಪ್ರಮುಖರಾದ ರಾಮ್ಪ್ರಸಾದ್, ಡಾ. ಮಲವೇಗೌಡ, ಡಾ. ಶಂಕರ್ ಮತ್ತಿತರರು ಹಾಜರಿದ್ದರು.