ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ನಿವೃತ್ತ ನರ್ಸ್ ಬಲೆಗೆ
ರಾಮನಗರ: ಆಯುಷ್ ಇಲಾಖೆ ಮತ್ತು ನಕಲಿ ವೈದ್ಯರ ನಿರ್ಮೂಲನೆ ಕಾರ್ಯಪಡೆ ನೇತೃತ್ವದಲ್ಲಿ ಜಿಲ್ಲೆಯ ಕನಕಪುರದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆ ವೇಳೆ ಅಲೋಪಥಿ ಚಿಕಿತ್ಸೆ ನೀಡುತ್ತಿದ್ದ ನಿವೃತ್ತ ನರ್ಸ್ ಒಬ್ಬರು ಸಿಕ್ಕಿಬಿದ್ದಿದ್ದಾರೆ.
ಕನಕಪುರದ ರಾಮನಗರ ರಸ್ತೆಯಲ್ಲಿ ಜಯನ್ ಪಾಲಿ ಕ್ಲಿನಿಕ್ ನಡೆಸುತ್ತಿದ್ದ ಎಚ್.ಕೆ. ನಿಂಗಮ್ಮ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ನಕಲಿ ವೈದ್ಯೆ. ಆಕೆ ಬಳಿ ಹೊಟ್ಟೆನೋವಿದೆ ಎಂದು ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗೆ ಕಳುಹಿಸಿ ಅಧಿಕಾರಿಗಳ ತಂಡ ಬಲೆ ಬೀಸಿದೆ.
ತಮ್ಮ ರೋಗಿಯ ಸೋಗಿನಲ್ಲಿ ಬಂದ ವ್ಯಕ್ತಿಗೆ ನಿಂಗಮ್ಮ ಅವರು ಅಲೋಪಥಿ ಚಿಕಿತ್ಸೆ, ಔಷಧೋಪಚಾರ ನೀಡಿದ್ದರು. ಈ ಬಗ್ಗೆ ಸಂದರ್ಶನ ಚೀಟಿಯಲ್ಲಿ ಬರೆದ ಔಷಧ ವಿವರವನ್ನಾಧರಿಸಿ ಅಧಿಕಾರಿಗಳು ಅವರಿಗೆ ನೋಟಿಸ್ ಜಾರಿಗೊಳಿಸಿದರು. ಇನ್ನು ಮುಂದೆ ವೈದ್ಯ ವೃತ್ತಿ ನಡೆಸುವುದಿಲ್ಲ ಎಂದು ನಿಂಗಮ್ಮ ಮುಚ್ಚಳಿಕೆ ಬರೆದುಕೊಟ್ಟಿದ್ದು, ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವುದನ್ನು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಕೈ ಬಿಟ್ಟಿದೆ.
30ಕ್ಕೂ ಹೆಚ್ಚು ನಕಲಿ ವೈದ್ಯರು: ರಾಮನಗರ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ಮಂದಿ ನಕಲಿ ವೈದ್ಯರಿದ್ದಾರೆ. ಈ ದಿನ ಆಯುಷ್ ಇಲಾಖೆ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಾಚರಣೆ ನಡೆಸಿದೆ ಎಂದು ಇಲಾಖೆಯ ಅಧಿಕಾರಿ ಡಾ. ಶೋಭಾ ರಾಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಾಚರಣೆ ಪ್ರಾರಂಭದ ಸುದ್ದಿ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ನಕಲಿ ವೈದ್ಯರನೇಕರು ಕ್ಲಿನಿಕ್ ಬಂದ್ ಮಾಡಿ ಜಾಗ ಖಾಲಿ ಮಾಡಿದ್ದಾರೆ. ನಕಲಿ ವೈದ್ಯರ ವಿರುದ್ಧದ ಕಾರ್ಯಾಚರಣೆಯನ್ನು ನಿರಂತರವಾಗಿ ಮುಂದುವರೆಸಲು ಇಲಾಖೆ ತೀರ್ಮಾನಿಸಿದೆ.
ನಕಲಿ ವೈದ್ಯರು ತಕ್ಷಣದಿಂದಲೇ ಪ್ರಾಕ್ಟೀಸ್ ನಿಲ್ಲಿಸಬೇಕು. ಹಾಗೊಮ್ಮೆ ಮುಂದುವರೆದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಕಲಿ ವೈದ್ಯರ ನಿರ್ಮೂಲನೆ ಕಾರ್ಯಪಡೆ ಅಧ್ಯಕ್ಷ ಡಾ. ಮಹಮದ್ ಹಕೀಂ ಇತರರಿದ್ದರು.