ಬರ ಚೆಕ್ ನಗದೀಕರಣದ ಗೊಂದಲ ಗಡುವು
-ಮತ್ತೀಕೆರೆ ಜಯರಾಮ್
ರಾಮನಗರ: ಬರ ಪರಿಹಾರದಡಿ ಪ್ರೋತ್ಸಾಹ ಧನದ ಚೆಕ್ ವಿತರಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಆದರೆ, ಚೆಕ್ ನಗದೀಕರಣಕ್ಕೆ ನ.30ರ ಗಡುವು ವಿಧಿಸಿ ಆದೇಶ ಹೊರಡಿಸುವ ಮೂಲಕ ಜಿಲ್ಲಾಡಳಿತ ರೈತರಲ್ಲಿ ಗೊಂದಲ ಮೂಡಿಸಿದೆ.
ಸತತ ಎರಡು ವರ್ಷ ಕಾಡಿದ ಭೀಕರ ಬರದ ಹಿನ್ನೆಲೆಯಲ್ಲಿ 2011-12 ಮತ್ತು 2012-13ನೇ ಸಾಲಿಗೆ ಕವಡೆ ಕಾಸಿನ ಪ್ರೋತ್ಸಾಹ ಧನವನ್ನು ಸರ್ಕಾರ ರೈತರಿಗೆ ಬಿಡುಗಡೆ ಮಾಡಿದೆ. ಇದರ ಹಂಚಿಕೆಯಲ್ಲಿ ಸಾಕಷ್ಟು ಯಡವಟ್ಟು, ಅದ್ವಾನಗಳು ತಲೆದೋರಿವೆ.
2011-12ನೇ ಸಾಲಿನಲ್ಲಿ ರೈತರಿಗೆ 250 ಪ್ರೋತ್ಸಾಹ ಧನ ನೀಡಲಾಗಿತ್ತು. ಆಗ ಶೂನ್ಯ ಠೇವಣಿಯ ಖಾತೆಗೆ ಬ್ಯಾಂಕುಗಳು ಅವಕಾಶ ಮಾಡಿಕೊಡದ ಪರಿಣಾಮ ಅದೆಷ್ಟೋ ರೈತರು ಚೆಕ್ ನಗದೀಕರಿಸಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.
ಮುಗಿಯದ ಚೆಕ್ ವಿತರಣೆ: 2012-13ನೇ ಸಾಲಿನಲ್ಲಿ ಕೃಷಿಗೆ ಕನಿಷ್ಠ 500ರಿಂದ ಗರಿಷ್ಠ 2 ಸಾವಿರ, ತೋಟಗಾರಿಕೆಗೆ ಕನಿಷ್ಠ 1 ಸಾವಿರದಿಂದ ಗರಿಷ್ಠ 4 ಸಾವಿರದವರೆಗೆ ಪ್ರೋತ್ಸಾಹ ಧನ ಘೋಷಿಸಲಾಗಿತ್ತು. ಆದರೆ, ಕಂದಾಯ ಅಧಿಕಾರಿಗಳು ಮನಸ್ಸೋ ಇಚ್ಛೆ ಚೆಕ್ ಬರೆದಿದ್ದಾರೆ.
ರೈತರು ಹೊಂದಿರುವ ಜಮೀನಿನ ವಿಸ್ತೀರ್ಣ ಮತ್ತು ಅದರಲ್ಲಿರುವ ಬೆಳೆ ಆಧರಿಸಿ ಚೆಕ್‌ನಲ್ಲಿ ನಗದು ನಮೂದಿಸುವ ಕೆಲಸವಾಗಿಲ್ಲ. ಗ್ರಾಮ ಲೆಕ್ಕಿಗರು ಬೇಕಾಬಿಟ್ಟಿಯಾಗಿ ಬರೆದಿಟ್ಟಿರುವ ಚೆಕ್‌ಗಳಿಗೆ ತಹಸೀಲ್ದಾರ್ ಸಹಿತ ಮಾಡಿದ್ದಾರೆ. ಈ ಬಗ್ಗೆ ದೂರು ಬಂದಿದ್ದಾಗ್ಯೂ ಪರಿಶೀಲಿಸುತ್ತಿಲ್ಲ.
ರಾಮನಗರ ಜಿಲ್ಲೆಯಲ್ಲಿ ಚೆಕ್ ವಿತರಣೆ ಮುಗಿದಿರುವುದು ಶೇ.60ರಿಂದ 65ರಷ್ಟು ಮಾತ್ರವೇ. ಉಳಿದ ರೈತರಿಗಿನ್ನೂ ಚೆಕ್ ತಲುಪಿಯೇ ಇಲ್ಲ. ಚೆಕ್ ಹಂಚಿಕೆಯಲ್ಲಿ ಚನ್ನಪಟ್ಟಣ ತಾಲೂಕಿನಲ್ಲೇ ಅತಿ ಹೆಚ್ಚು ಅವ್ಯವಸ್ಥೆಯಾಗಿದ್ದು, ಅರ್ಹ ಫಲಾನುಭವಿಗಳನೇಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಬೇಚಾರಕ್ ಗ್ರಾಮಕ್ಕೆ ತಲುಪಿಲ್ಲ: ರಾಮನಗರ ಜಿಲ್ಲೆಯ 823 ಗ್ರಾಮಗಳ ಪೈಕಿ 53 ಜನ ವಸತಿ ಇಲ್ಲದ(ಬೇಚಾರಕ್) ಗ್ರಾಮಗಳಿವೆ. ಈ ಬೇಚಾರಕ್ ಗ್ರಾಮದ ಸರ್ವೆ ನಂಬರ್‌ಗಳಲ್ಲೇ ಸರಿ ಸುಮಾರು 5 ಸಾವಿರ ಎಕರೆಯಷ್ಟು ಜಮೀನಿದ್ದು, ಇದ್ಯಾವುದನ್ನೂ ಮೊದಲ ಹಂತದ ಪ್ರೋತ್ಸಾಹ ಧನ ವಿತರಣೆಯಲ್ಲಿ ಪರಿಗಣಿಸಿರಲಿಲ್ಲ.
ಈ ಲೋಪವನ್ನು ಮನಗಂಡ ಹಿಂದಿನ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಅವರು ಬೇಚಾರಕ್ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಜಮೀನು ಹೊಂದಿದವರಿಗೂ ಪ್ರೋತ್ಸಾಹ ಧನ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ 4 ತಾಲೂಕುಗಳ ತಹಸೀಲ್ದಾರ್‌ಗಳಿಗೂ ಆದೇಶ ನೀಡಿದ್ದರು.
ಈ ಆದೇಶ ಪ್ರತಿ ತಾಲೂಕು ಕಚೇರಿಗಳಿಗೆ ತಲುಪುವಷ್ಟರಲ್ಲಿ ಶ್ರೀರಾಮರೆಡ್ಡಿ ಎತ್ತಂಗಡಿ ಆಯಿತು. ಅವರು ಹೋಗಿದ್ದೇ ತಡ ಬೇಚಾರಕ್ ಗ್ರಾಮಗಳಲ್ಲಿ ಜಮೀನು ಹೊಂದಿದ ರೈತರಿಗೆ ಪ್ರೋತ್ಸಾಹ ಧನ ವಿತರಿಸುವ ಸೂಚನೆಗೆ ತಹಸೀಲ್ದಾರ್‌ಗಳು ಎಳ್ಳುನೀರು ಬಿಟ್ಟಿದ್ದಾರೆ.
ಈ ವಿಷಯವಾಗಿ ವಿಚಾರಿಸಿದರೆ, ಇನ್ನೂ ಮೊದಲ ಹಂತದ ಚೆಕ್ ವಿತರಣೆಯೇ ಮುಗಿದಿಲ್ಲ. ಬೇಚಾರಕ್ ಗ್ರಾಮಗಳ ಜಮೀನಿಗೆ ಚೆಕ್‌ಗಳನ್ನು ಡಿಸೆಂಬರ್ ತಿಂಗಳಲ್ಲಿ ನೀಡುತ್ತೇವೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ಸಬೂಬು ಹೇಳಿ ಸಾಗ ಹಾಕುತ್ತಿದ್ದಾರೆ.
30ರ ನಂತರ ಚೆಕ್ ರದ್ದು!
ಬರ ಪರಿಹಾರ ಕಾರ್ಯಕ್ರಮದಡಿ ಕೃಷಿ ಮತ್ತು ತೋಟಗಾರಿಕಾ ಪ್ಲಾಂಟೇಷನ್ ಬಳೆ ಇಳುವರಿ ನಷ್ಟ ಹೊಂದಿದ ರಾಮನಗರ ಜಿಲ್ಲೆಯ ರೈತರಿಗೆ ಆಕ್ಸಿಸ್ ಬ್ಯಾಂಕ್ ಚೆಕ್ ವಿತರಣೆಯಾಗಿದೆ. ಅದನ್ನು ನ.30ರೊಳಗೆ ರೈತರು ತಮ್ಮ ಬ್ಯಾಂಕ್ ಖಾತೆಗೆ ಜಮೆ ಇಲ್ಲವೇ ನಗದೀಕರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆ ಚೆಕ್ ರದ್ದಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ.ಎಸ್. ವಿಶ್ವನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೈತರು ಚೆಕ್ ನಗದೀಕರಿಸಿಕೊಳ್ಳಲು ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆ ತೆರೆಯಬಹುದು. ಒಂದೊಮ್ಮೆ ಬ್ಯಾಂಕಿನವರು ಅದಕ್ಕೆ ಅವಕಾಶ ಕಲ್ಪಿಸದಿದ್ದಲ್ಲಿ ಅಂತಹ ಬ್ಯಾಂಕ್, ವ್ಯವಸ್ಥಾಪಕರ ವಿವರವನ್ನು ತಹಸೀಲ್ದಾರ್, ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ತೋಟಗಾರಿಕೆ ನಿರ್ದೇಶಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ದೂರಬಹುದು ಎಂದು ಹೇಳಿದ್ದಾರೆ.
ಸಂಪರ್ಕಕ್ಕೆ ಸಿಗದ ಡಿಸಿ
ಚೆಕ್ ನಗದೀಕರಣಕ್ಕೆ ಗಡುವಿನ ಗೊಂದಲಕಾರಿ ಹೇಳಿಕೆ ವಿಷಯವಾಗಿ ಪ್ರತಿಕ್ರಿಯೆಗಾಗಿ ಜಿಲ್ಲಾಧಿಕಾರಿ ಡಾ. ವಿಶ್ವನಾಥ್ ಅವರ ಸಂಪರ್ಕ ಸಾಧ್ಯವಾಗಿಲ್ಲ. ರಾಮನಗರಕ್ಕೆ ಬಂದು 5 ದಿನವಾದರೂ ಅವರಿಗಿನ್ನೂ ಮೊಬೈಲ್ ಸಂಖ್ಯೆ ಸಿಕ್ಕಿಲ್ಲವೆನ್ನುವ ಉತ್ತರವನ್ನು ಅವರ ಕಚೇರಿ ಸಿಬ್ಬಂದಿ ನೀಡಿದ್ದಾರೆ. ಈ ಹಿಂದಿನ ಕೆಲ ಜಿಲ್ಲಾಧಿಕಾರಿಗಳೂ ಮೊಬೈಲ್ ಸಂಪರ್ಕ ಸಂಖ್ಯೆ ನೀಡುವುದಕ್ಕೆ ಹೀಗೇ ವಿಳಂಬ ಮಾಡಿದ್ದರು. ಮೊಬೈಲ್ ಕಂಪೆನಿಗಳು ಕ್ಷಣಾರ್ಧದಲ್ಲಿ ಸಿಮ್ ವಿತರಿಸುತ್ತಿರುವಾಗ ಇಲ್ಲಿಗೆ ಬರುವ ಜಿಲ್ಲಾಧಿಕಾರಿ ಮಾತ್ರ ತಮ್ಮ ಸಂಪರ್ಕ ಸಂಖ್ಯೆ ನೀಡಲು ಮೀನಮೇಷ ಎಣಿಸುವುದು ವಿಪರ್ಯಾಸದ ಸಂಗತಿ.
ಬೇಚಾರಕ್ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿರುವ ಜಮೀನುಗಳಿಗೂ ತ್ವರಿತವಾಗಿ ಪರಿಹಾರ ನೀಡಬೇಕೆಂದು ಹಿಂದಿನ ಜಿಲ್ಲಾಧಿಕಾರಿ ವಿ. ಶ್ರೀರಾಮರೆಡ್ಡಿ ಆದೇಶಿಸಿರುವ ವಿಚಾರ ನನಗೆ ಗೊತ್ತಿಲ್ಲ. ಮುಂದಿನ ವರ್ಷದ ಪ್ರೋತ್ಸಾಹ ಧನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಹಿಂದಿನ ಸಾಲುಗಳ ಚೆಕ್ ನಗದೀಕರಣಕ್ಕೆ ಗಡುವು ನೀಡಲಾಗಿದೆಯಷ್ಟೇ.
-ಬಸವರಾಜು, ಅಪರ ಜಿಲ್ಲಾಧಿಕಾರಿ
ಚೆಕ್ ವಿತರಣೆಯೇ ಮುಗಿಯದಿದ್ದಾಗ ನಗದೀಕರಣಕ್ಕೆ ಗಡುವು ನಿಜಕ್ಕೂ ಹಾಸ್ಯಾಸ್ಪದ. ನೂತನ ಜಿಲ್ಲಾಧಿಕಾರಿ ಅವರು ಮೊದಲು ಈ ಪ್ರಕ್ರಿಯೆ ಯಾವ ಹಂತದಲ್ಲಿದೆ, ಅಧೀನ ಅಧಿಕಾರಿಗಳು ಎಷ್ಟು ಚೆಕ್ ವಿತರಿಸಿದ್ದಾರೆ ಎನ್ನುವ ಕುರಿತು ಸಭೆ ನಡೆಸಿ ಮಾಹಿತಿ ಪಡೆಯಲಿ. ನಂತರ ಇಂತಹ ಗಡುವು ನಿಗದಿಪಡಿಸಲು ಮುಂದಾಗಲಿ.
-ಎಂ.ಕೆ. ಧನಂಜಯ, ಜಿ.ಪಂ. ಸದಸ್ಯ