ಸರ್ಕಾರದಿಂದ ದ್ವೇಷದ ರಾಜಕಾರಣ; ಪ್ರತಿಭಟನೆ
ಕ.ಪ್ರ. ವಾರ್ತೆ ಚನ್ನಪಟ್ಟಣ ನ.22
ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈಬಿಡುವ ಮೂಲಕ ದ್ವೇಷದ ರಾಜಕಾರಣ ನಡೆಸುತ್ತಿರುವ ರಾಜ್ಯ ಸರ್ಕಾರ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕೆಂದು ಆಗ್ರಹಿಸಿ ಪ್ರಜಾ ವಿಮೋಚನಾ ಚಳವಳಿ(ಮಾನವತಾವಾದ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶುಕ್ರವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ವೇದಿಕೆಯ ಕಾರ್ಯಕರ್ತರು ಬರದ ತೀವ್ರತೆಯಿಂದ ಈ ತಾಲೂಕು ಬಳಲುತ್ತಿದೆಯಾದರೂ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡುವ ಮೂಲಕ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಾಲೂಕಿಗೆ ಸಮರ್ಪಕವಾಗಿ ಮಳೆ ಬಿದ್ದು ಹತ್ತಾರು ವರ್ಷಗಳೇ ಕಳೆದಿವೆ. ಇತ್ತೀಚಿನ ದಿನಗಳಲ್ಲಿ ಏತ ನೀರಾವರಿಯ ಮೂಲಕ ಕೆಲವೇ ಕೆಲವು ಗ್ರಾಮಗಳ ಕೆರೆ ತುಂಬಿದ್ದನ್ನು ಹೊರತುಪಡಿಸಿದರೆ ಇನ್ಯಾವುದೇ ಭಾಗದಲ್ಲೂ ಕೆರೆ-ಕಟ್ಟೆ ತುಂಬಿ ಬೆಳೆ ಬಂದಿಲ್ಲ ಅಂತಹದರಲ್ಲಿ ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈಬಿಟ್ಟಿರುವುದು ಸಮಂಜಸವಲ್ಲ ಎಂದು ಕಿಡಿಕಾರಿದರು.
ಅಂತರ್ಜಲದ ಮಟ್ಟ ಸಾವಿರ ಅಡಿಗಳ ಆಳಕ್ಕಿಳಿದು ಜನತೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಅಧಿಕಾರಿಗಳು ಸರ್ಕಾರಕ್ಕೆ ವಸ್ತುಸ್ಥಿತಿ ವರದಿಯನ್ನು ನೀಡದಿರುವುದು ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರ ಕ್ಷುಲ್ಲಕ ರಾಜಕಾರಣಕ್ಕೆ ಮುಂದಾಗಿ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟಿದೆ ಎಂದು ಕಿಡಿಕಾರಿದರು.
ಈ ಕೂಡಲೇ ಸರ್ಕಾರ ಚನ್ನಪಟ್ಟಣವನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಿ ಪರಿಷ್ಕೃತ ಆದೇಶ ಹೊರಡಿಸದಿದ್ದಲ್ಲಿ ತಾಲೂಕಿನಿಂದ ಮುಖ್ಯಮಂತ್ರಿಗಳ ಮನೆಯವರೆಗೆ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಕೆಲಸಕ್ಕೆ ಮುಂದಾಗಬೇಕಾದೀತೆಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ತೋಬನಕೆರೆ ಸೋಮಸುಂದರ್, ರಾಜ್ಯ ಪದಾಧಿಕಾರಿಗಳಾದ ರುದ್ರೇಶ್, ರಮೇಶ್, ತಾಲೂಕು ಅಧ್ಯಕ್ಷ ಎಸ್.ಎಂ. ಹಳ್ಳಿ ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.
ಮಲತಾಯಿ ಧೋರಣೆ: ಪುಟ್ಟಪ್ಪ
ಚನ್ನಪಟ್ಟಣ: ಬರಪೀಡಿತ ಪ್ರದೇಶದ ಪಟ್ಟಿಯಿಂದ ತಾಲೂಕನ್ನು ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕದ ವತಿಯಿಂದ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿ ಕೊಂಡಿರುವುದಾಗಿ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಲ್.ಪುಟ್ಟಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ತಾಲೂಕನ್ನು ಬರಪೀಡಿತ ಪ್ರದೇಶದಿಂದ ಕೈಬಿಡುವ ಮೂಲಕ ಸರ್ಕಾರ ತನ್ನ ಮಲತಾಯಿ ಧೋರಣೆಯನ್ನು ಸಾಬೀತು ಪಡಿಸಿದೆ. ಶಾಸಕರು ಮತ್ತು ಅಧಿಕಾರಿಗಳು ನೀಡಿರುವ ಅವೈಜ್ಞಾನಿಕ ವರದಿಯನ್ನು ನಂಬಿ ಅನ್ಯಾಯವೆಸಗಿದ್ದು ಸರ್ಕಾರದ ಕಣ್ತೆರೆಸಲು ಬಿಜೆಪಿ ಮುಖಂಡ ರವಿಕುಮಾರ್ಗೌಡ ನೇತೃತ್ವದಲ್ಲಿ ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.