ಅಕ್ರಮ ಮರಳು ದಂಧೆ: ತಂಡ ರಚನೆ
ಕ.ಪ್ರ.ವಾರ್ತೆ ರಾಮನಗರ ನ.23
ಜಿಲ್ಲಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆ ನಿಟ್ಟಿನಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಮಿತಿ ರಚಿಸಿರುವ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್, ವಾರದಲ್ಲಿ ಕನಿಷ್ಠ 2 ದಿನ ರಾತ್ರಿ ಗಸ್ತು ನಡೆಸುವಂತೆ ತಹಸೀಲ್ದಾರ್ಗಳಿಗೆ ಸೂಚಿಸಿದ್ದಾರೆ.
ಕಂದಾಯ ಭವನದ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಪರಸ್ಪರರ ಮೇಲೆ ಹೊಣೆ ಹೊರಿಸಿ ಜವಬ್ದಾರಿಯಿಂದ ನುಣುಚಿಕೊಳ್ಳುವುದು ಮತ್ತು ಸಬೂಬು ಹೇಳುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ರಾಮನಗರ ಜಿಲ್ಲಾದ್ಯಂತ ಮರಳುಗಾರಿಕೆಗೆ ನಿಷೇಧವಿದ್ದಾಗ್ಯೂ ಅಕ್ರಮ ಮತ್ತು ಫಿಲ್ಟರ್ ಮರಳುಗಾರಿಕೆ ಮುಂದುವರೆದಿದೆ. ಅಧಿಕಾರಿಗಳ ಸಮಿತಿಯು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಚಾಟಿ ಬೀಸಿದರು.
ಅಧಿಕಾರಿಗಳ ಸಮಿತಿ ರಚನೆ: ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನೇತೃತ್ವದ ಜಿಲ್ಲಾ ಮರಳು ನಿಯಂತ್ರಣ ಸಮಿತಿಗೆ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಪ್ರಾದೇಶಿಕ ಸಾರಿಗೆ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಬೆಸ್ಕಾಂನ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ವಿಶ್ವನಾಥ್ ಪ್ರಕಟಿಸಿದರು.
ತಹಸೀಲ್ದಾರ್ ನೇತೃತ್ವದ ತಾಲೂಕು ಮಟ್ಟದ ಸಮಿತಿಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಪೊಲೀಸ್ ಇನ್ಸ್ಪೆಕ್ಟರ್, ಅರಣ್ಯ ಇಲಾಖೆ ಎಸಿಎಫ್, ಲೋಕೋಪಯೋಗಿ, ಸಣ್ಣ ನೀರಾವರಿ, ಬೆಸ್ಕಾಂ ಅಧಿಕಾರಿಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಸಮಿತಿಯು ಮರಳುಗಾರಿಕೆ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಬೇಕು ಎಂದು ಅವರು ಆದೇಶಿಸಿದರು.
ವೀಡಿಯೋ ಚಿತ್ರೀಕರಿಸಿ: ಅಕ್ರಮವಾಗಿ ಮರಳು ಸಾಗಣೆ ಮಾಡಿ ಮೊದಲ ಬಾರಿ ಸಿಕ್ಕಿಬಿದ್ದ ವಾಹನಗಳಿಗೆ ರು.25 ಸಾವಿರ ದಂಡ ವಿಧಿಸಲಾಗುತ್ತಿದೆ. ಎರಡನೇ ಬಾರಿಗೆ ಪ್ರಕರಣ ದಾಖಲಿಸಲಾಗುತ್ತಿದೆ. ಇನ್ನು ಮುಂದೆ ಪ್ರಕರಣ ದಾಖಲಿಸುವಾಗ ವೀಡಿಯೋ ಚಿತ್ರೀಕರಿಸಿ, ಫೋಟೋ ತೆಗೆದುಕೊಳ್ಳಬೇಕು ಎಂದು ವಿಶ್ವನಾಥ್ಸಲಹೆ ನೀಡಿದರು.
ಅಕ್ರಮ ಮರಳುಗಾರಿಕೆಯ ಸಾಕಷ್ಟು ಪ್ರಕರಣಗಳಲ್ಲಿ ಸಾಕ್ಷ್ಯಗಳನ್ನು ನಾಶಪಡಿಸುವುದು, ಸಾಕ್ಷಿದಾರರಿಂದ ಪ್ರತಿಕೂಲ ಸಾಕ್ಷ್ಯ ಹೇಳಿಸಿ ಪ್ರಕರಣಗಳು ವಜಾ ಆಗುವಂತೆ ಮಾಡುವ ವ್ಯವಸ್ಥಿತ ಕೆಲಸವಾಗುತ್ತಿದೆ. ಅದನ್ನು ತಪ್ಪಿಸಲು ವೀಡಿಯೋ ಚಿತ್ರೀಕರಣ, ಫೋಟೋ ಸಾಕ್ಷ್ಯ ಇಟ್ಟುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.
ಚೆಕ್ ಪೋಸ್ಟ್ ಸ್ಥಾಪಿಸಿ: ಮರಳುಗಾರಿಕೆ ವಿಷಯದಲ್ಲಿ ಸರ್ಕಾರದ ನೀತಿ, ನಿಯಮಗಳನ್ನು ಜಾರಿಗೆ ತರಲು ಯಾವುದೇ ಅಡಚಣೆ ಇದ್ದರೂ ನನ್ನ ಗಮನಕ್ಕೆ ತರಬೇಕು. ಚೆಕ್ ಪೋಸ್ಟ್ಗಳಲ್ಲಿ ತಪಾಸಣೆಗಾಗಿ ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್ ಇಲಾಖೆ ಸಿಬ್ಬಂದಿಯನ್ನು ನೇಮಿಸಬೇಕು. ಅಗತ್ಯವಿರುವೆಡೆ ಹೊಸ ಚೆಕ್ ಪೋಸ್ಟ್ ಸ್ಥಾಪನೆಗೂ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಅಸಹಾಕಾರದ ಅಳಲು: ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿದ ಹೊಸತರಲ್ಲಿ ಎಲ್ಲ ಇಲಾಖೆಗಳ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. ದಿನ ಕಳೆದಂತೆ ಪೊಲೀಸ್ ಹೊರತಾದ ಇಲಾಖೆಗಳ ಸಿಬ್ಬಂದಿಯೇ ಇರುವುದಿಲ್ಲ. ಹೀಗಾಗಿ ಅಕ್ರಮ ಮರಳು ಸಾಗಾಣಿಕೆಗೆ ತಡೆಯುವ ಪ್ರಯತ್ನ ವಿಫಲವಾಗುತ್ತಿದೆ ಎಂದು ಅನ್ಯ ಇಲಾಖೆಗಳ ಅಸಹಕಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಸಭೆಯಲ್ಲಿ ಅನಾವರಣ ಗೊಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಶ್ವನಾಥ್, ಅಧಿಕಾರಿಗಳು ದಕ್ಷರಾಗಿದ್ದರೂ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗುತ್ತಿರುವುದೇ ಅಕ್ರಮ ಮರಳು ದಂಧೆಗೆ ಕಡಿವಾಣ ಇಲ್ಲದಂತಾಗಲು ಕಾರಣವಾಗಿದೆ. ಇನ್ನು ಮುಂದೆ ಸಮಿತಿಗಳ ಸಮನ್ವಯತೆ, ಕಾರ್ಯಾಚರಣೆಯನ್ನು ಖುದ್ದು ನಾನೇ ಪರಿಶೀಲಿಸುವೆ. ಹೀಗಾಗಿ ಅಸಹಾಕಾರಕ್ಕೆ ಆಸ್ಪದವಿಲ್ಲ ಎಂದರು.
ಕೆರೆಗಳ ಸಂರಕ್ಷಣೆ ಅಗತ್ಯ: ಜಿ.ಪಂ. ಹಾಗೂ ಸಣ್ಣ ನೀರಾವರಿ ಇಲಾಖೆ ಅಧೀನದ ಸಣ್ಣ ಕೆರೆಗಳ ವ್ಯಾಪ್ತಿಯಲ್ಲೂ ಅಕ್ರಮ ಫಿಲ್ಟರ್ ಮರಳು ದಂಧೆ ಎಗ್ಗಿಲ್ಲದೆ ಸಾಗಿದೆ. ದಂಧೆಕೋರರಿಂದ ಕೆರೆಗಳನ್ನು ಸಂರಕ್ಷಿಸಿ, ಅಂತರ್ಜಲ ಮಟ್ಟವನ್ನು ಉಳಿಸುವ ಕೆಲಸವಾಗಬೇಕು ಎಂದು ಜಿ.ಪಂ. ಸಿಇಒ ಡಾ.ವೆಂಕಟೇಶ್ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿಯು ಫಿಲ್ಟರ್ ಮರಳು ಘಟಕಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಸವರಾಜು, ಉಪ ವಿಭಾಗಾಧಿಕಾರಿ ಡಾ.ಸ್ನೇಹ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ತಿಮ್ಮಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಎಚ್.ಖಾನ್, ಡಿವೈಎಸ್ಪಿ ರಾಮಲಿಂಗಪ್ಪ, ನಾಲ್ಕೂ ತಾಲೂಕುಗಳ ತಹಸೀಲ್ದಾರ್ಗಳು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸದಸ್ಯತ್ವ ರದ್ದಾದೀತು ಜೋಕೆ
ಪಂಚಾಯತ್ ರಾಜ್ ವ್ಯವಸ್ಥೆಯ ಮೂರು ಹಂತದ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳೇನಾದರೂ ಅಕ್ರಮ ಮರಳುಗಾರಿಕೆಯಂತಹ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವ ದೂರು ರುಜುವಾತಾದಲ್ಲಿ ಅಂತಹವರ ಸದಸ್ಯತ್ವವನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಸಾಕಷ್ಟು ಕಡೆ ಗ್ರಾ.ಪಂ. ಸಹಿತ ವಿವಿಧ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಂದ ಮರಳುಗಾರಿಕೆ ನಡೆಯುತ್ತಿರುವ ಅರೋಪವಿದೆ. ಈ ಕುರಿತು ಸಾರ್ವಜನಿಕರು ತಮಗೆ ನೇರವಾಗಿ ದೂರು ನೀಡಬಹುದಾಗಿದೆ. ದೂರುದಾರರ ಹೆಸರು ಮತ್ತು ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅವರು ಸಭೆಯಲ್ಲಿ ಹೇಳಿದರು. ನೈಸರ್ಗಿಕ ಸಂಪತ್ತಾಗಿರುವ ಮರಳಿನ ಬದಲಾಗಿ ಉತ್ಪಾದಿತ ಮರಳನ್ನು (ಎಂ.ಸ್ಯಾಂಡ್) ಕಾಮಗಾರಿಗಳಲ್ಲಿ ಉಪಯೋಗಿಸಲು ಪ್ರೋತ್ಸಾಹಿಸಬೇಕಿದೆ. ಲೋಕೋಪಯೋಗಿ ಸೇರಿದಂತೆ ಸರ್ಕಾರದ ನಿರ್ಮಾಣ ಸಂಸ್ಥೆಗಳು ಕಾಮಗಾರಿಗಳಲ್ಲಿ ಎಂ. ಸ್ಯಾಂಡ್ ಬಳಸಬೇಕು. ಆಗ ಇತರರಿಗೂ ಅರಿವು ಮೂಡಿಸಬಹುದು ಎಂದು ಅವರು ಸಲಹೆ ನೀಡಿದರು.
ಅಧಿಕಾರಿಗಳಿಗೆ ಡಿಸಿ ಹಿತವಚನ
ಅದೆಷ್ಟೋ ಸಂಘ-ಸಂಸ್ಥೆಗಳು, ದಾನಿಗಳು ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರದಿಂದ ಸಂಬಳ ಪಡೆಯುತ್ತಿರುವ ಅಧಿಕಾರಿಗಳು ನೀತಿ, ನಿಯಮಗಳ ಪಾಲನೆಯನ್ನೇ ಸಮಾಜ ಸೇವೆ ಎಂದು ತಿಳಿದು ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿಶ್ವನಾಥ್ ಹಿತವಚನ ನೀಡಿದರು.