ಕೃಷಿ ವಿರೋಧಿ ನೀತಿ ಜಾರಿಗೆ ಹುನ್ನಾರ: ಆರೋಪ
ರಾಮನಗರ: ರಾಜ್ಯ ಸರ್ಕಾರವು ರೈತ ಮತ್ತು ಕೃಷಿ ವಿರೋಧಿ ಮಾರುಕಟ್ಟೆ ನೀತಿ ಜಾರಿಗೆ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟಿಸಿದರು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಮಾರುಕಟ್ಟೆ ನೀತಿ 2013 ಜಾರಿ ತಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಹಳಸಲು ನೀತಿಗಳನ್ನೇ ಮಾರ್ಪಡಿಸಿ ಮಾರುಕಟ್ಟೆ ನೀತಿ 2013 ಜಾರಿಗೊಳಿಸಲು ಹೊರಟಿರುವ ಸರ್ಕಾರವು ರೈತರು, ಕೂಲಿಕಾರರನ್ನು ದಮನ ಮಾಡಲು ಸಂಚು ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಅವಲಂಬಿತ ಸಮುದಾಯವು ಮಾರುಕಟ್ಟೆ ನೀತಿಯನ್ನು ವಿರೋಧಿಸುತ್ತಲೇ ಬಂದಿದೆ. ಇಷ್ಟಾಗಿಯೂ ಬಂಡವಾಳ ಶಾಹಿಗಳ ಅನುಕೂಲಕ್ಕಾಗಿ ಮಾರುಕಟ್ಟೆ ನೀತಿ ಜಾರಿಗೆ ಸರ್ಕಾರ ಹೊರಟಿದೆ ಎಂದು ಹೇಳಿದರು.
ಬಡವರು, ರೈತರು, ವರ್ತಕರ ಬದುಕಿಗೆ ಎರವಾಗಿರುವ ಮಾರುಕಟ್ಟೆ ನೀತಿ ಜಾರಿಗೆ ಹೊರಟಿರುವುದು ಸರ್ಕಾರದ ಗೋಮುಖ ವ್ಯಾಘ್ರತನವನ್ನು ಬಯಲು ಮಾಡಿದೆ.
ಈ ನೀತಿ ಮೂಲಕ ಮತ್ತೆ ಬಹುರಾಷ್ಟ್ರೀಯ ಕಂಪೆನಿಗಳಿಗೆ ರೆಡ್ ಕಾರ್ಪೆಟ್ ಹಾಸಲಾಗುತ್ತಿದೆ ಎಂದು ಕಿಡಿ ಕಾರಿದರು.
ಕೇಂದ್ರ, ರಾಜ್ಯ ಸರ್ಕಾರದ ಆಮದು ನೀತಿ, ಆಗ್ನೇಯ ಏಷ್ಯಾ ಹಾಗೂ ಯೂರೋಪ್ ರಾಷ್ಟ್ರಗಳ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದ ದೇಶೀಯ ಕೃಷಿ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬಿದ್ದಿದೆ ಎಂದರು. ರಾಜ್ಯದಲ್ಲಿ ಕೃಷಿಕರು ಮಾತ್ರವಲ್ಲದೆ ಕೃಷಿ ಕೂಲಿಕಾರರು, ಸಣ್ಣ ವ್ಯಾಪಾರಿಗಳ ಸರಣಿ ಆತ್ಮಹತ್ಯೆಗೆ ಮಾರುಕಟ್ಟೆ ನೀತಿ ಮೂಲಕ ಸರ್ಕಾರವೇ ಕಾರಣವಾಗಲಿದೆ. ಈ ಸಮುದಾಯವನ್ನು ಉಳಿಸಲು ನೀತಿ ಜಾರಿ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದರು. ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಮಹದೇವಯ್ಯ, ಸಂಜೀವಯ್ಯ, ಅಂಕಪ್ಪ ಇತರರಿದ್ದರು.