ಜಡ್ಜ್ ಕೊರತೆ: ನ್ಯಾಯದಾನ ವಿಳಂಬ
ಚನ್ನಪಟ್ಟಣ: ನ್ಯಾಯಾಧೀಶರ ಕೊರತೆಯಿಂದಾಗಿ ಕಕ್ಷಿದಾರರಿತಗೆ ಸೂಕ್ತಕಾಲದಲ್ಲಿ ನ್ಯಾಯದಾನಮಾಡಲು ವಿಳಂಬ ವಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್ ಕಿಣಿ ತಿಳಿಸಿದರು.
ತಾಲೂಕಿನ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ಮೆಗಾ ಲೋಕದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಯಿಸಿ ಮಾತನಾಡಿ, ನಮ್ಮ ದೇಶದಲ್ಲಿ 2.70 ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದ್ದು ಹೈಕೋರ್ಟ್ಗಳಲ್ಲಿ 45 ಲಕ್ಷ ಪ್ರಕರಣ, ಸುಪ್ರೀಂ ಕೋರ್ಟ್ನಲ್ಲಿ 25 ಲಕ್ಷ ಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ ಎಂದರು.
ಪ್ರಕರಣಗಳಿಗೆ ತಕ್ಕಂತೆ ನ್ಯಾಯಾಧೀಶರು ನೇಮಕವಾಗದಿರುವುದರಿಂದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ, ಸೂಕ್ತ ಸಮಯದಲ್ಲಿ ನ್ಯಾಯ ದೊರೆಯದೆ ಕಕ್ಷಿದಾರರು ಸಮಸ್ಯೆ ಎದುರಿಸುತ್ತಿದ್ದು, ಕೆಲ ಸಿವಿಲ್ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ರಾಜ್ಯ ಉಚ್ಚನ್ಯಾಯಾಲಯ ಲೋಕದಾಲತ್ ಅನ್ನು ಜಾರಿಗೆ ತಂದಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಜ್ಯಗಳಿಗೆ ಸಿಲುಕುತ್ತಿದ್ದು ಅವರಿಗೆ ಹಣಕಾಸಿನ ಸಮಸ್ಯೆಯ ಜತೆಗೆ ವಿಳಂಬವಾಗುವುದಿಂದ ಸಾಕಷ್ಟು ಕಾಲಹರಣವಾಗುತ್ತದೆ. ಇದನ್ನು ತಪ್ಪಿಸಲು ಲೋಕದಾಲತ್ ಅನುಕೂಲಕಾರಿಯಾಗಿದೆ. ಕಕ್ಷಿದಾರರು ಮತ್ತು ವಕೀಲರು ಇದಕ್ಕೆ ಸಹಕರಿಸಬೇಕೆಂದು ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಮಾತನಾಡಿ, ಲೋಕ ಅದಾಲತ್ ಮೂಲಕ ತಾಲೂಕಿನಲ್ಲಿ ಸುಮಾರು 883 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು ಇನ್ನೂ ಹೆಚ್ಚು ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದರು.
ಗ್ರಾಮಾಂತರ ವೃತ್ತನಿರೀಕ್ಷಕ ನಾಗರಾಜು, ಅಕ್ಕೂರು ಠಾಣೆ ವ್ಯಾಪ್ತಿಯಲ್ಲಿ 132 ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥ್ಯ ಪಡಿಸಲಾಗಿದೆ. ಹೀಗೆ ಸ್ಥಳದಲ್ಲೇ ಪ್ರಕರಣಗಳನ್ನು ಇತ್ಯರ್ಥ್ಯ ಪಡಿಸುವುದರಿಂದ ನ್ಯಾಯಾಲಯದ ಸಮಯ, ಜನರು ವೃಥಾ ಖರ್ಚುಮಾಡುವ ಹಣ ಉಳಿತಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಹನುಮಂತುಸಿವಿಲ್ ನ್ಯಾಯಾಧೀಶ ನಾಗೇಶ್ ಮೂರ್ತಿ, ಸರ್ಕಾರಿ ಸಹಾಯಕ ಅಭಿಯೋಜಕ ಜಯಪ್ರಕಾಶ್, ತಾರಾನಾಥ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ಪ್ರಭು, ಪುರಠಾಣೆ ಸಿಪಿಐ ಅಂಜನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.