ದೇವನಹಳ್ಳಿ: ಭಾರಿ ಮಳೆ
ದೇವನಹಳ್ಳಿ: ದೇವನಹಳ್ಳಿ ಸುತ್ತ ಮುತ್ತ ಶನಿವಾರ ಮಧ್ಯಾಹ್ನ ಮೂರು ಗಂಟೆಯಿಂದ ಗುಡುಗು ಮಿಂಚಿನೊಂದಿಗೆ ಧಾರಾಕಾರವಾಗಿ ಮಳೆ ಸುರಿದಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಶನಿವಾರ ಸಂಜೆ 60 ಮಿಲಿ ಮೀಟರ್ ಮಳೆಯಾಗಿರುವುದು ದಾಖಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಅನ್ಸರ್ ತಿಳಿಸಿದರು. ಹೊಲಗಳಲ್ಲಿ ಕೊಯ್ಲಾಗಿ ಕುಪ್ಪೆ ಮಾಡದೆ ಭೂಮಿಯಲ್ಲೇ ಬಿಟ್ಟಿರುವ ತೆನೆಯ ಸಮೇತವಿರುವ ರಾಗಿ ಬೆಳೆ ಕೈಗೆ ಬಂದದ್ದು ಬಾಯಿಗೆ ಬರದಂತಾಗಿದೆ. ದೇವನಹಳ್ಳಿ ತಾಲೂಕಿನಲ್ಲಿ ಈ ವರ್ಷದಲ್ಲಿ ರಾಗಿ ಉತ್ತಮ ಬೆಳೆಯಾಗಿದ್ದು ಶನಿವಾರ ಸುರಿದ ಭಾರಿ ಮಳೆಯಿಂದಾಗಿ ರಾಗಿ ಬೆಳೆ ನೆಲಕ್ಕೆ ಮಲಗಿದೆ, ಇನ್ನೆರಡು ದಿನದಲ್ಲಿ ಬಿಸಿಲು ಬಂದರೆ ಮಾತ್ರ ರೈತರಿಗೆ ರಾಗಿ ಬೆಳೆ ಸಿಗುತ್ತದೆ ಇಲ್ಲವಾದರೆ ರಾಗಿ ಮೊಳಕೆ ಒಡೆದು ನಷ್ಟ ಸಂಭವ ಹೆಚ್ಚಾಗಿರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸುರಿದ ಮಳೆಯಿಂದಾಗಿ ಬೆಟ್ಟಕೋಟೆ ಕೆರೆಗೆ ನೀರು ಹರಿಯಲಾರಂಭಿಸಿದೆ.
ಆಸ್ಪತ್ರೆಗೆ ದಾಖಲಿಸಿದ್ದ ಅಪರಿಚಿತ ವ್ಯಕ್ತಿ ಸಾವು
ರಾಮನಗರ: ರಾಮನಗರದ ಐಜೂರಿನಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ಸುಮಾರು 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬೆಂಗಳೂರಿನ ವಿ.ಎಚ್. ಆಸ್ಪತ್ರೆಗೆ ಐಜೂರು ಪೊಲೀಸರು ದಾಖಲಿಸಿದ್ದು, ನ.19 ರಂದು ಮೃತಪಟ್ಟಿದ್ದಾರೆ. 5.6 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಒಣಕಲು ಶರೀರ, ತಲೆಯಲ್ಲಿ ಅರ್ಧ ಇಂಚು ಕಪ್ಪು ಕೂದಲು, ಮೀಸೆ ಬಿಟ್ಟಿದ್ದು ಎದೆಯ ಮೇಲೆ ಚಂದ್ರ, ಸಾಕಿ ಶಿವಣ್ಣ ಹಾಗೂ ಬಲಗೈ ತೋಳಿನ ಮೇಲೆ ಮಂಜ, ರಮ, ಬಾಬು ಬೈ ಅಂತಹ ಹಸಿರು ಹಚ್ಚೆ ಗುರುತು ಇರುತ್ತದೆ. ಈ ಚಹರೆಯುಳ್ಳ ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಐಜೂರು ಪೊಲೀಸ್ ಠಾಣೆ ದೂ.080-27271786 ಅಥವಾ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಲು ಐಜೂರು ಪೊಲೀಸರು ಕೋರಿದ್ದಾರೆ.
26ರಂದು ದತ್ತಿ ಕಾರ್ಯಕ್ರಮ
ರಾಮನಗರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 2013-14ನೇ ಸಾಲಿನ ದತ್ತಿ ಕಾರ್ಯಕ್ರಮವು ನ.26ರ ಮಧ್ಯಾಹ್ನ 2ಕ್ಕೆ ತಾಲೂಕಿನ ಪಾದರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಎಲ್.ಎಸ್.ರಾಮಲಿಂಗಯ್ಯ, ಬಿ.ವಿ.ರಾಮಚಂದ್ರ, ಎಂ.ಬಿ.ನಾಗರಾಜಜ್ದತ್ತಿಯನ್ನು ಡಾ.ಎಸ್.ಎಲ್.ತಿಮ್ಮಯ್ಯ ಪ್ರಾಯೋಜಿಸಿದ್ದಾರೆ. ಕಾರ್ಯಕ್ರಮವನ್ನು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಲ್.ಚಂದ್ರ ಉದ್ಘಾಟಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಶಾಲೆಯ ಮುಖ್ಯೋಪಾಧ್ಯಾಯ ಆರ್.ಕೆ.ಭೈರಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಜಿ.ಶಿವಣ್ಣ ಉಪನ್ಯಾಸ ನೀಡುವರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೀರೇಗೌಡ, ಗ್ರಾ.ಪಂ. ಸದಸ್ಯ ಆರ್.ಕೆ.ರಾಮು ಪ್ರತಿಭಾ ಪುರಸ್ಕಾರ ವಿತರಿಸುವರು.