ದೊಡ್ಡಬಳ್ಳಾಪುರ ತಾಪಂಗೆ ನೂತನ ಸಾರಥಿಗಳು
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ನ.23
ತೀವ್ರ ಕುತೂಹಲ ಕೆರಳಿಸಿದ್ದ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕೊನೆಗೂ ಕಾಂಗ್ರೆಸ್ ಕೈ ಮೇಲಾಗಿದೆ. ಬಹುಮತ ಹೊಂದಿದ್ದ ಬಿಜೆಪಿಯ 5 ಮಂದಿ ಸದಸ್ಯರ ಬೆಂಬಲದೊಂದಿಗೆ ಕೇವಲ 3 ಮಂದಿ ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಪರಿಣಾಮವಾಗಿ ದೊಡ್ಡಬೆಳವಂಗಲ ತಾಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯೆ ಕಾಂಗ್ರೆಸ್ ಪಕ್ಷದ ನರಸಮ್ಮ ಹಾದ್ರಿಪುರ ತಾ.ಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಕೆ ಆರಂಭವಾಯಿತು. ಬಿಸಿಎಂ(ಎ)ಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ನರಸಮ್ಮ ಮತ್ತು ಬಿಜೆಪಿಯಿಂದ ಜಯಲಕ್ಷ್ಮಮ್ಮ ಎಂಬುವವರು ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆ 3 ಗಂಟೆವರೆಗೂ ನಡೆಯಿತು. ನಂತರ ಧ್ವನಿಮತದ ಮೂಲಕ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು.
ನರಸಮ್ಮಗೆ 10 ಮತ: 20 ಸದಸ್ಯ ಬಲದ ತಾಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 17 ಮಂದಿ ಸದಸ್ಯರು ಭಾಗವಹಿಸಿದ್ದರು. 3 ಮಂದಿ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಈ ಪೈಕಿ ಕಾಂಗ್ರೆಸ್ನ ನರಸಮ್ಮ ಒಟ್ಟು 10 ಸದಸ್ಯರ ಬಲದೊಂದಿಗೆ ಆಯ್ಕೆಯಾದರೆ ಪ್ರತಿಸ್ಪರ್ಧಿ ಜಯಲಕ್ಷ್ಮಮ್ಮ 7 ಮತಗಳನ್ನು ಮಾತ್ರ ಪಡೆದು ಸೋಲನ್ನೊಪ್ಪಿ ಕೊಳ್ಳಬೇಕಾಯಿತು. ತಾಲೂಕು ಪಂಚಾಯಿತಿಯಲ್ಲಿನ ಪಕ್ಷಗಳ ಬಲಾಬಲದ ಪ್ರಕಾರ ಬಿಜೆಪಿ ನಿರಾಯಾಸವಾಗಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಹುದಿತ್ತು. ಹಾಲಿ ತಾ.ಪಂ ಬಿಜೆಪಿಯಿಂದ 12, ಜೆಡಿಎಸ್ನಿಂದ 5 ಮತ್ತು ಕಾಂಗ್ರೆಸ್ನಿಂದ 3 ಸದಸ್ಯ ಬಲ ಹೊಂದಿದೆ. ಆದರೆ ಬಿಜೆಪಿಯ 5 ಮಂದಿ ಕಾಂಗ್ರೆಸ್ನ ಅಭ್ಯರ್ಥಿಯನ್ನು ಬೆಂಬಲಿಸಿದ್ದು ನಿರೀಕ್ಷಿತ ಎನ್ನಲಾಗುತ್ತಿದೆ.
ಉಪಾಧ್ಯಕ್ಷರಾಗಿ ಕೆ.ಮುನಿಯಪ್ಪಣ ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಾಶೆಟ್ಟಿಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿಯ ಓಬದೇನಹಳ್ಳಿ ಕೆ.ಮುನಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಮೇಲೆ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಗದ್ದುಗೆಗೆ ಕೆ.ಮುನಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪರಿಣಾಮವಾಗಿ ಅವರು ಪ್ರತಿಸ್ಪರ್ಧಿ ಇಲ್ಲದೆ ಅವಿರೋಧವಾಗಿ ಆಯ್ಕೆಯಾದರು. ಕಳೆದ ತಿಂಗಳು ಆಗಿನ ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ನಾಗರಾಜ್ ವಿರುದ್ಧ ಸ್ವಪಕ್ಷದ ಕೆಲವರು ಮತ್ತು ಇತರ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧಿಕಾರದಿಂದ ಕೆಳಗಿಳಿಸಿದ್ದರು. ನಂತರ ಹಾಡೋನಹಳ್ಳಿ ತಾ.ಪಂ ಕ್ಷೇತ್ರದ ರಮಾದೇವಿ ನಾರಾಯಣಪ್ಪ ತಾ.ಪಂಚಾಯಿತಿಯ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪರಿಣಾಮವಾಗಿ ಶನಿವಾರ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಿತು.
ತಾಪಂ ನೂತನ ಅಧ್ಯಕ್ಷ- ಉಪಾಧ್ಯಕ್ಷರಿಗೆ ಅಭಿನಂದನೆ
ದೊಡ್ಡಬಳ್ಳಾಪುರ: ತಾಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನರಸಮ್ಮ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ಮುನಿಯಪ್ಪ ಅವರಿಗೆ ಶಾಸಕ ಟಿ.ವೆಂಕಟರಮಣಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಶನಿವಾರ ಸಂಜೆ ತಾಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿದ ಶಾಸಕರು ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭ ಕೋರಿದರು. ಉಳಿದಿರುವ ಅಲ್ಪಾವಧಿಯಲ್ಲಿ ಉನ್ನತ ಆದರ್ಶಗಳೊಂದಿಗೆ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವಂತೆ ಅವರು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಮುಖಂಡರಾದ ಎಚ್.ಅಪ್ಪಯ್ಯಣ್ಣ, ಆರ್.ಗೋವಿಂದರಾಜು ಸಹ ಹಾಜರಿದ್ದು ಅಭಿನಂದಿಸಿದ್ದು ಕಾಂಗ್ರೆಸ್-ಜೆಡಿಎಸ್ ದೋಸ್ತಿಯ ವಿಜಯಕ್ಕೆ ಸಾಕ್ಷಿಯಾಯಿತು. ಅದೇ ರೀತಿ ತಾಲೂಕು ಪಂಚಾಯಿತಿಯ ನೂತನ ಸಾರಥಿಗಳನ್ನು ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಕಾಂಗ್ರೆಸ್ ತಾಲೂಕು ಕಾರ್ಯದರ್ಶಿ ಜಿ.ಲಕ್ಷ್ಮೀಪತಿ, ಮುಖಂಡರಾದ ತಿ.ರಂಗರಾಜು, ಡಿ.ವಿ.ಅಶ್ವತ್ಥಪ್ಪ, ಸಿ.ಜಿ.ನಾಗೇಶ್ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.
ಐವರು ಬಿಜೆಪಿ ಸದಸ್ಯರ ಉಚ್ಚಾಟನೆ
ದೊಡ್ಡಬಳ್ಳಾಪುರ: ಶನಿವಾರ ನಡೆದ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ ಮತ್ತು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಗೆಲ್ಲಿಸಿದ ಆರೋಪದಿಂದ ಪಕ್ಷದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ 5 ಮಂದಿ ಸದಸ್ಯರನ್ನು ಉಚ್ಚಾಟಿಸಲಾಗಿದೆ. ಆ ಪೈಕಿ 3 ಮಂದಿ ಚುನಾವಣೆ ಪ್ರಕ್ರಿಯೆಗೆ ಗೈರು ಹಾಜರಾಗಿದ್ದರು. ಉಳಿದ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು ಎನ್ನಲಾಗಿದೆ.
ಇಲ್ಲಿನ ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಈ ಕುರಿತು ಸುದ್ದಿಗಾರರಿಗೆ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಮಾಹಿತಿ ನೀಡಿದರು. ಪಕ್ಷದ ಅಭ್ಯರ್ಥಿ ವಿರುದ್ಧ ವ್ಯವಸ್ಥಿತವಾಗಿ ಕೆಲಸ ಮಾಡಿ ಗೈರು ಹಾಜರಾಗಿದ್ದ ತಾಲೂಕು ಪಂಚಾಯಿತಿ ಸದಸ್ಯರಾದ ಅಶ್ವತ್ಥನಾರಾಯಣಕುಮಾರ್, ಕೆ.ಯಲ್ಲಪ್ಪ, ಅನ್ನಪೂರ್ಣ ಚಂದ್ರಶೇಖರ್, ಅಡ್ಡಮತದಾನ ಮಾಡಿ ಪಕ್ಷ ವಿರೋಧಿತನ ಪ್ರದರ್ಶಿಸಿದ ಓಬದೇನಹಳ್ಳಿ ಕೆ.ಮುನಿಯಪ್ಪ, ರಾಜಣ್ಣ ಅವರುಗಳನ್ನು ಪಕ್ಷದ ಶಿಸ್ತು ಸಮಿತಿ ಉಚ್ಚಾಟಿಸಿದೆ ಎಂದು ಅವರು ವಿವರಿಸಿದರು.