ನವಜಾತ ಶಿಶು ಮಾರಾಟ ಶಂಕೆ: ಕಚೇರಿಗೆ ಹಾಜರಾಗಲು ನೊಟೀಸ್
ರಾಮನಗರ: ನವಜಾತ ಶಿಶುವಿನ ಮಾರಾಟ ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನಗರದ ಬಡಾವಣೆಯೊಂದರ ಮನೆಗೆ ತೆರಳಿ ಪರಿಶೀಲಿಸಿದ್ದು, ಸೋಮವಾರದೊಳಗೆ ಶಿಶು ಸಮೇತ ಕಚೇರಿಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದ್ದಾರೆ.
ಇಲ್ಲಿನ ಗೀತಾಮಂದಿರ ಬಡಾವಣೆಯ ದಂಪತಿಗೆ ಈಗಾಗಲೇ 4 ಹೆಣ್ಣು ಮಕ್ಕಳಿದ್ದಾರೆ. 20 ದಿನಗಳ ಹಿಂದಷ್ಟೇ ಜನಿಸಿದ 5ನೆಯದೂ ಹೆಣ್ಣು ಮಗುವಾಗಿದೆ. ಇದೀಗ ಆ ಮಗು ಮನೆಯಲ್ಲಿ ಇಲ್ಲ. ಮಾರಾಟ ಆಗಿರಬಹುದೆಂದು ನೆರೆಹೊರೆಯವರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.
ಅಧಿಕಾರಿ ತಾಜ್ ಉದ್ದೀನ್ ನೇತೃತ್ವದ ತಂಡವು ಸದರಿ ಮನೆಗೆ ತೆರಳಿ ಪರಿಶೀಲಿಸಿದಾಗ ಮನೆಯಲ್ಲಿ ಮಗು ಇರಲಿಲ್ಲ. ಆಗ ದಂಪತಿಯು ಕೂಲಿ ಕೆಲಸ ಮಾಡುತ್ತಿದ್ದು, ಮಗು ಸಾಕಲಾಗುತ್ತಿಲ್ಲ. ಹೀಗಾಗಿ ಅದನ್ನು ನನ್ನ ತವರು ಮನೆಯಲ್ಲಿ ಬಿಟ್ಟಿರುವುದಾಗಿ ಮಗುವಿನ ತಾಯಿ ಸಮಜಾಯಿಷಿ ನೀಡಿದ್ದಾರೆ.
ಬಡಾವಣೆ ನಿವಾಸಿಗಳು ನೀಡಿರುವ ಮಾಹಿತಿಯಂತೆ ಮಗು ಮಾರಾಟ ಆಗಿರಬಹುದು ಎನ್ನುವ ಅನುಮಾನ ದಟ್ಟವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಂಪತಿಗೆ ನೊಟೀಸ್ ಜಾರಿಗೊಳಿಸಿದ್ದು, ನ.25ರಂದು ಮಗು ಸಮೇತ ಕಚೇರಿಗೆ ಹಾಜರಾಗುವುದಾಗಿ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.