ಬರಪೀಡಿತ ಪ್ರದೇಶದ ಪಟ್ಟಿಯಿಂದ ಚನ್ನಪಟ್ಟಣ ಕೈಬಿಟ್ಟಿದ್ದಕ್ಕೆ ಆಕ್ರೋಶ, ಪ್ರತಿಭಟನೆ
ಚನ್ನಪಟ್ಟಣ: ಬರಪೀಡಿತ ಪ್ರದೇಶದ ಪಟ್ಟಿಯಿಂದ ಬೊಂಬೆನಗರಿಯನ್ನು ಕೈ ಬಿಟ್ಟಿರುವ ಸರ್ಕಾರದ ಕ್ರಮದ ವಿರುದ್ಧ ತಾಲೂಕಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು ಶನಿವಾರ ಸರ್ಕಾರದ ನಿಲುವಿನ ವಿರುದ್ಧ ತಾಲೂಕು ಬಿಜೆಪಿ ವತಿಯಿಂದ ತಹಸೀಲ್ದಾರ್ ಕಚೇರಿ ಮುಂಭಾಗ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲಾಯಿತು.
ತಾಲೂಕು ಬಿಜೆಪಿ ಮುಖಂಡ ರವಿಕುಮಾರ್ ಗೌಡ ನೇತೃತ್ವದಲ್ಲಿ ಧರಣಿ ನಡೆಸಿದ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ತಮ್ಮ ಪಕ್ಷದ ಶಾಸಕರು ಇಲ್ಲಿ ಚುನಾಯಿತರಾಗಿಲ್ಲ ಎಂಬ ಕಾರಣಕ್ಕೆ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇಂತಹ ದ್ವೇಷದ ರಾಜಕಾರಣ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ತಾಲೂಕಿನ ಜೀವಾಳ ವೆನಿಸಿದ ಕಣ್ವ ಜಲಾಶಯ ತುಂಬಿ 17 ವರ್ಷಗಳು ಕಳೆದಿವೆ. ತಾಲೂಕಿನ ಯಾವುದೇ ಕೆರೆಗಳು ತುಂಬಿಲ್ಲ, ಕಣ್ವ ಬಯಲಿನ ಅಚ್ಚುಕಟ್ಟುದಾರರು ಬೆಳೆ ಬೆಳೆದು ಹತ್ತಾರು ವರ್ಷಗಳೇ ಕಳೆದಿವೆ. ಇನ್ನು ಮಳೆಯಾಶ್ರಿತ ಜಮೀನುಗಳಲ್ಲಿ ಬೆಳೆ ಬೆಳೆಯುವುದನ್ನೇ ರೈತರು ಮರೆತು ಬಿಟ್ಟಿದ್ದಾರೆ. ತಾಲೂಕು ಇಂತಹ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ ಸರ್ಕಾರ ಅರಿವುಗೇಡಿಯಂತೆ ವರ್ತಿಸಿರುವುದು ಅಕ್ಷ್ಯಮ್ಮ ಎಂದು ಕಿಡಿಕಾರಿದರು. ಇಂದು ನಮ್ಮ ಪಕ್ಷ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ಕೊಂಡು ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.