ಬೆಲೆ ಕುಸಿತ: ಕೊಳೆಯುತ್ತಿದೆ ಬ್ಲೂ ದ್ರಾಕ್ಷಿ
-ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ನಾನಾ ಸಮಸ್ಯೆಗಳ ಮಧ್ಯೆ ಬೆಳೆಗಾರರು ಬೆಂಗಳೂರು ಬ್ಲೂ ದ್ರಾಕ್ಷಿ ಸಮೃದ್ಧವಾಗಿ ಬೆಳೆದಿದ್ದಾರೆ. ಆದರೆ, ದ್ರಾಕ್ಷಿಗೆ ಬೆಲೆ ಸಿಗದೆ ಬೆಳೆಗಾರರು ಫಸಲನ್ನು ತೋಟದಲ್ಲಿ ಬಿಡುತ್ತಿದ್ದು, ಅದೀಗ ಕೊಳೆಯುತ್ತಿದೆ.
ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರು ಬ್ಲೂ ದ್ರಾಕ್ಷಿ ಕೆಜಿಗೆ 15ವೆರಗೂ ಮಾರಾಟವಾಗುತ್ತಿತ್ತು. ಈ ಬೆಲೆ ತೀರಾ ಲಾಭದಾಯಕವಲ್ಲದಿದ್ದರೂ, ಬೆಳೆಗಾರರಿಗೆ ಸ್ವಲ್ಪವಾದರೂ ಕೈಗೆ ದುಡ್ಡು ಬರುತ್ತಿತ್ತು. ಆದರೆ ಈಗ, ಬೆಲೆ ಏಕದ್ದಮ್ ಕುಸಿದಿದ್ದು, ಕೆಜಿಗೆ 6 ಇದೆ. ಇದಕ್ಕಿಂತೆ ಹೆಚ್ಚಿನ ಬೆಲೆ ಕೊಳ್ಳಲು ವ್ಯಾಪಾರಿಗಳ ಮುಂದಾಗುತ್ತಿಲ್ಲ. ಹಾಗಾಗಿ, ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತರಕಾರಿ, ಹೂ ಹಣ್ಣು, ರೇಷ್ಮೆ ಜತೆಗೆ ಹೆಚ್ಚಿಗೆ ದ್ರಾಕ್ಷಿ ಬೆಳೆಯಲಾಗುತ್ತದೆ. ಇದರಲ್ಲಿ 'ಬೆಂಗಳೂರು ಬ್ಲ್ಯೂ' ದ್ರಾಕ್ಷಿಯೂ ಸಿಂಹಪಾಲನ್ನು ಹೊಂದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ 650 ಹೆಕ್ಟೇರ್ ಪ್ರದೇಶದಲ್ಲಿ ಈ ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ವೈನ್ ತಯಾರಿಕೆಗೆ ಬಳಕೆಯಾಗುವುದರಿಂದ ಬೇಡಿಕೆ ಹೆಚ್ಚು. ಆದರೆ, ಬೇಡಿಕೆ ಕುಸಿದು ಬೆಳೆಗಾರರ ಲೆಕ್ಕಾಚಾರ ತಲೆ ಕೆಳಗಾಗಿದೆ.
ಪಕ್ಷಿ, ನಾಯಿಗಳಿಗೆ ಆಹಾರ!
ಕಳೆದ ಕೆಲವು ತಿಂಗಳ ಹಿಂದೆ ಬೆಲೆ ಕುಸಿತದ ಹಿನ್ನೆಲೆಯಲ್ಲಿ ದ್ರಾಕ್ಷಿ ಬೆಳೆಗಾರರು ದ್ರಾಕ್ಷಿ ಮಾರಾಟ ಮಾಡಲು ಮುಂದಾಗಿರಲಿಲ್ಲ. ಆದರೆ, ಕಳೆದ 20 ದಿನಗಳಿಂದ ದ್ರಾಕ್ಷಿ ಕಟಾವು ಮಾಡದೇ ಬೇರೆ ದಾರಿಯಿಲ್ಲದಂತಾಗಿದೆ. ವ್ಯಾಪಾರಸ್ಥರು ದ್ರಾಕ್ಷಿ ಕೊಳ್ಳಲು ಬರುತ್ತಿಲ್ಲ. ಇಲ್ಲಿಂದ ಸಾಗಾಣಿಕೆ ಮಾಡಿ ಮಾರಾಟ ಮಾಡಲು ಹೋದರೆ ಅಸಲು ಹೋಗಿ, ಲಾಭವೂ ಹೋಗಿ ಇನ್ನೂ ಕೈಯಿಂದ ಹಣ ಸುರಿಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅನೇಕ ದ್ರಾಕ್ಷಿ ಬೆಳೆಗಾರರು ತಾವು ಬೆಳೆದಿರುವ ದ್ರಾಕ್ಷಿಯನ್ನೇ ಮರೆತು ಜನರಿಗೆ ಪುಗಸಟ್ಟೆ ಕಿತ್ತುಕೊಂಡು ಹೋಗಲು ತಿಳಿಸುತ್ತಿದ್ದಾರೆ. ಹಲವೆಡೆ ಮಾಗಿದ ಹಣ್ಣುಗಳು ಉದುರಿ ಹೋಗುತ್ತಿವೆ. ಇದರಿಂದ ಪಕ್ಷಿಗಳು, ಕೀಟಗಳು, ನಾಯಿಗಳಿಗೆ ದ್ರಾಕ್ಷಿ ಆಹಾರವಾಗಿದ್ದು, ಹೆಚ್ಚಿನ ತೋಟಗಳಲ್ಲಿ ದ್ರಾಕ್ಷಿ ಕೊಳೆತು ಹೋಗುತ್ತಿರುವುದರಿಂದ ಗಬ್ಬು ವಾಸನೆಯೂ ಹರಡುತ್ತಿದೆ.
ಕೇಳಿಸದೇ ನಿಮಗೆ?
ಬೆಲೆ ಕುಸಿತದಿಂದ ಕಂಗಾಲಾಗುತ್ತಿದ್ದರೂ ದ್ರಾಕ್ಷಿ ಬೆಳೆಗಾರರ ಸಂಕಷ್ಟ ಕೇಳುವವರೇ ಇಲ್ಲ. ಅಸಲಿಗೆ ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಸರ್ಕಾರವೇ ಮುಂದಾಗದಿರುವುದು ದುರದೃಕಷ್ಟಕರ. ಇದರಿಂದ ದ್ರಾಕ್ಷಿ ಬೆಲೆ ಯಾವಾಗ ಏರಿಕೆ ಕಾಣುತ್ತದೆಯೋ? ಯಾವಾಗ ಕುಸಿಯುತ್ತದೆಯೋ? ಎನ್ನುವುದೇ ತಿಳಿಯುವುದಿಲ್ಲ. ಆದರೆ, ಇದರ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಕಾರಣದಿಂದ ಬೆಲೆ ಕುಸಿತದಿಂದ ತತ್ತರಿಸಿದ ಸಂದರ್ಭದಲ್ಲಿ ರೈತನಿಗೆ ಆರ್ಥಿಕ ನೆರವು ಕೊಡಿಸಲು ಸರ್ಕಾರದ ಗಮನ ಸೆಳೆಯುವ ಪ್ರಯತ್ನವೇ ನಡೆಯುವುದಿಲ್ಲ. ಈವರೆಗೂ ದ್ರಾಕ್ಷಿ ಬೆಲೆ ಕುಸಿತಕ್ಕೆ ಸಂಬಂಧಪಟ್ಟಂತೆ ವರದಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ ನಿದರ್ಶನಗಳಿಲ್ಲ. ಬೆಲೆ ಕುಸಿದಾಗ ಮಾತ್ರ ಮಾಹಿತಿ ಪಡೆದುಕೊಳ್ಳಲಾಗುವುದು ಎಂಬ ಮಾತು ಅಧಿಕಾರಿಗಳಿಂದ ಕೇಳಿ ಬರುವುದೇ ದೊಡ್ಡ ಪ್ರಗತಿ ಎಂದು ರೈತರು ಆರೋಪಿಸಿದ್ದಾರೆ.
ಉಳಿದ ವೈನ್ಯಾರ್ಡ್
ಈ ಭಾಗದಲ್ಲಿ ಹೆಚ್ಚಿಗೆ ಬ್ಲೂ ದ್ರಾಕ್ಷಿ ಬೆಳೆಯುವುದರಿಂದ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ನಂದಿ ಗಿರಿಧಾಮದಲ್ಲಿ ವೈನ್ ಯಾರ್ಡ್ ಸ್ಥಾಪನೆ ಮಾಡಲಾಗುತ್ತದೆ ಎಂದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದ ಉಮೇಶ್ ಕತ್ತಿ ಘೋಷಣೆ ಮಾಡಿದ್ದರು. ಇದು ಆಗ ದ್ರಾಕ್ಷಿ ಬೆಳೆಗಾರರಲ್ಲಿ ಹೊಸ ಆಶಾ ಕಿರಣ ಮೂಡಿಸಿತ್ತು. ಆದರೆ, ಭರವಸೆ ಇಂದಿಗೂ ಘೋಷಣೆಯಾಗಿಯೇ ಉಳಿದಿದೆ. ದ್ರಾಕ್ಷಿ ಬೆಳೆ ಬೆಳೆಯುವುದರಲ್ಲಿ ಜಿಲ್ಲೆ ಮಾಡಿರುವ ಹೆಸರು ಉಳಿಯುವಂತಾಗಲು ಜಿಲ್ಲಾಡಳಿತ ಈಗಲಾದರೂ ಸರ್ಕಾರದ ಗಮನ ಸೆಳೆಯಬೇಕಾಗಿದೆ.
ಬೆಲೆ ಕುಸಿತದಿಂದ ಕೈ ಸುಟ್ಟುಕೊಂಡಿರುವ ದ್ರಾಕ್ಷಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ಬೆಂಬಲ ಬೆಲೆ ಘೋಷಿಸಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಿ ದ್ರಾಕ್ಷಿ ಬೆಳೆಯಲು ಪ್ರೋತ್ಸಾಹ ನೀಡಬೇಕು.
-ಪುರದಗಡ್ಡೆ ಕೃಷ್ಣಪ್ಪ, ದ್ರಾಕ್ಷಿ ಬೆಳೆಗಾರರು, ಚಿಕ್ಕಬಳ್ಳಾಪುರ