ಮೂಢನಂಬಿಕೆ ವಿರುದ್ಧ ಕಾನೂನು ಅಗತ್ಯ
ನೆಲಮಂಗಲ: ಸರ್ಕಾರವು ವಿವಿಧ ಧರ್ಮಗಳ ಧರ್ಮಾಧಿಕಾರಿಗಳು ಹಾಗೂ ವಿಚಾರವಂತರೊಂದಿಗೆ ಸುದೀರ್ಘಸಮಾಲೋಚನೆ ನಡೆಸಿ ಮೂಢನಂಬಿಕೆಗಳ ವಿರುದ್ಧ ಕಾನೂನು ಜಾರಿಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜು ಹೇಳಿದರು.
ಅವರು ಶನಿವಾರ ತಾಲೂಕಿನ ಭೈರನಾಯಕನಹಳ್ಳಿ ಸರ್ಕಾರಿ ಪ್ರೌಡಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶಾಲೆಯಿಂದ ಶಾಲೆಗೆ ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆ ತಿಂಗಳ ತಿರುಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯರಿಗೆ ನಂಬಿಕೆ ಬೇಕು. ಅದನ್ನೇ ಬಂಡವಾಳವನ್ನಾಗಿಸಿಕೊಂಡು ಮೂಢನಂಬಿಕೆಗಳನ್ನು ಸೃಷ್ಟಿಸಿ ಮನುಷ್ಯರನ್ನು ಮೋಸಗೊಳಿಸುವ ವಾಮಾಚಾರವನ್ನು ನಾಗರಿಕರು ಖಂಡಿಸಬೇಕು ಎಂದರು.
ಕನ್ನಡ ಭಾಷೆ ನಮ್ಮ ಹೆತ್ತ ತಾಯಿ ಸಮಾನ. ಎಂದೂ ನಾವು ಆಕೆಯನ್ನು ಮರೆಯಬಾರದು. ಅದರಂತೆ ನಮ್ಮ ಭಾಷೆ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ಗೌರವ ನೀಡುವುದು ನಮ್ಮ ಕರ್ತವ್ಯ. ಕನ್ನಡ ಸಾಹಿತ್ಯ ಸಂಸ್ಕೃತಿಗೆ ದುಡಿದಂತಹ ಮಹನೀಯರ ಕನಸು ನನಸು ಮಾಡಬೇಕು ಎಂದು ಉಪನ್ಯಾಸಕ ವೆಂಕಟೇಶ್ ಚೌತಾಯಿ ಅವರು ಉಪನ್ಯಾಸ ನೀಡಿದರು.
ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ತ್ಯಾಮಗೊಂಡ್ಲು ಜಿ.ಪಂ.ಸದಸ್ಯ ವೇಣುಗೋಪಾಲ್ ವಿತರಿಸಿ ಮಾತನಾಡಿದರು.
ತಾಲೂಕಿನ ವಿವಿಧ ಶಾಲೆಗಳಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಭಾಷೆಯ ಕಾಳಜಿ ವಿದ್ಯಾರ್ಥಿಗಳಲ್ಲಿ ಹೆಚ್ಚಿಸಲು ಶ್ರಮಿಸುವುದಾಗಿ ತಾಲೂಕು ಕ.ಸಾ.ಪ ಅಧ್ಯಕ್ಷ ಎನ್.ರಾಜಶೇಖರ್ ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಪವಾಡಗಳ ಹಿಂದಿರುವ ರಹಸ್ಯಗಳನ್ನು ತಿಳಿಸುವಂತಹ ಕಾರ್ಯಕ್ರಮವನ್ನು ಪವಾಡ ಭಂಜಕ ಹುಲಿಕಲ್ ನಟರಾಜು ನೀಡಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಬಿ.ಸದಾನಂದಾರಾಧ್ಯ, ಪದಾಧಿಕಾರಿ ನಾಗೇಶ್, ಸಂರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಕೆಂಪರಾಜು, ಮುಖ್ಯ ಶಿಕ್ಷಕ ಶಶಿಧರ್, ಶಿಕ್ಷಕ ಪಾಲನೇತ್ರ, ರವಿಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ದೇವರಾಜು, ಪೋಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.