ಶ್ರೀಕಂಠು ಜನ್ಮದಿನಾಚರಣೆಗೆ ನಿರ್ಧಾರ
ಕನಕಪುರ: ರಾಜ್ಯಕೃಷಿ ಪ್ರಶಸ್ತಿ ವಿಜೇತ, ಸಮಾಜಸೇವಕ ಹೊನ್ನಿಗನಹಳ್ಳಿ ಶ್ರೀಕಂಠು 54ನೇ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಶ್ರೀಕಂಠು ಅಭಿಮಾನಿ ಬಳಗದವರು ಕಾರ್ಯಕ್ರಮ ರೂಪಿಸಿರುವುದಾಗಿ ಸಂಚಾಲಕ ಪುಟ್ಟರಾಜು ಹೇಳಿದ್ದಾರೆ. ನ.24ರಂದು ಜನ್ಮದಿನಾಚರಣೆ ಪ್ರಯುಕ್ತ ಶಕ್ತಿದೇವತೆ ಕಬ್ಬಾಳಿನ ಶ್ರೀ ಕಬ್ಬಾಳಮ್ಮನವರಿಗೆ ವಿಶೇಷಪೂಜೆ, ಸಾತನೂರಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್‌ವಿತರಣೆ, ಹಲವಾರು ಶಾಲೆಗಳ ಮಕ್ಕಳಿಗೆ ಬಟ್ಟೆಗಳು, ನೋಟ್ ಪುಸ್ತಕ, ಲೇಖನ ಸಾಮಗ್ರಿಗಳ ವಿತರಣೆ, ಬಡವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ,ಪ್ರತಿಭಾಪುರಸ್ಕಾರ ಮೊದಲಾದವುಗಳನ್ನು ಆಯೋಜಿಸಿರುವುದಾಗಿ ತಿಳಿಸಿದ್ದಾರೆ. ರಾಜಕೀಯದ ಸೋಂಕಿಲ್ಲದೆ ಎಲ್ಲಾ ಸಮುದಾಯದವರಿಗೂ ಸಹಾಯಹಸ್ತ ಚಾಚುವ ಮನೋಭಾವ ಹೊಂದಿರುವವರು ಎಂದು ಶಾಸ್ತ್ರಿ ತಿಳಿಸಿದರು.
ತರಬೇತಿ ಕೇಂದ್ರ ಉದ್ಘಾಟನೆ ನಾಳೆ
ನೆಲಮಂಗಲ: ಪಟ್ಟಣದ ದಿವ್ಯಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನ. 25ರ ಸೋಮವಾರದಂದು ಬೆಳಿಗ್ಗೆ 11-00 ಗಂಟೆಗೆ ದಿವ್ಯಜ್ಯೋತಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದ ಉದ್ಘಾಟನ ಸಮಾರಂಭವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಉಪ ಲೋಕಾಗೆ ಮನವಿ ಸಲ್ಲಿಸಿ
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹಾಗೂ ಹೊಸಕೋಟೆ ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಡಿಸೆಂಬರ್ 3 ರಂದು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಉಪಲೋಕಾಯುಕ್ತ ನ್ಯಾ. ಸುಭಾಷ್.ಬಿ ಆದಿ ಅವರ ಬಳಿ ಹೇಳಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಹಸೀಲ್ದಾರ್ ಡಾ.ಗೀತಾ ಹೇಳಿದ್ದಾರೆ.
ವಸ್ತು ಪ್ರದರ್ಶನ
ಚನ್ನಪಟ್ಟಣ: ಪಟ್ಟಣದ ಅಪ್ಪಗೆರೆಯ ಸೇಂಟ್ ಆನ್ಸ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸೇಂಟ್ ಆನ್ಸ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಬ್ರಿಡ್ಜಿಟ್ ಜಾನ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಪ್ರಾಂಶುಪಾಲೆ ಸಿಸ್ಟರ್ ಅರುಳ್ ಶೀಲಿ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸಹಾಯ ಮೇರಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ಸುಜನಾ ಮುಂತಾದವರು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಪಟ್ಟಣದ ಸೇಂಟ್ ಮೈಕಲ್ ಶಾಲೆ, ಬಾಲು ಪಬ್ಲಿಕ್ ಶಾಲೆ, ಡಾನ್ ಬಾಸ್ಕೋ ಶಾಲೆ, ಸೇಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಶಿಕ್ಷಕರು ವಸ್ತು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.