ಅಕ್ರಮ ಖಾತೆಗಳ ಗೂಡು ನಗರಸಭೆ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆ ಅಕ್ರಮಗಳ ಸ್ವರ್ಗವಾಗಿದೆ. ನಿರಂತರವಾಗಿ ನಡೆಯುತ್ತಿರುವ ಅಕ್ರಮ ಖಾತೆಗಳು ಒಟ್ಟಾರೆ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹಂತಕ್ಕೆ ತಲುಪಿದ್ದು, ಅಕ್ರಮ ಖಾತೆಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅಂತಹ ಖಾತೆಗಳನ್ನು ವಜಾ ಮಾಡುವ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೊಡ್ಡಬಳ್ಳಾಪುರ ಮಿತ್ರ ಬಳಗದ ಸಂಚಾಲಕ ಎಂ.ಜೆ.ರಾಜಶೇಖರ ಶೆಟ್ಟಿ ಆಗ್ರಹಿಸಿದ್ದಾರೆ.
ಈ ಕುರಿತು ಸಮಗ್ರ ಮಾಹಿತಿಯೊಂದಿಗೆ ಅವರು, ನಗರಸಭೆ ವ್ಯಾಪ್ತಿಯಲ್ಲಿ ಕೆರೆ, ಕುಂಟೆ, ಗೋಮಾಳ, ಕರಾಬು, ಗುಂಡುತೋಪು, ರಾಜಕಾಲುವೆ, ಕೆರೆಯಂಗಳ, ಧರ್ಮದ ತೋಪು, ಸ್ಮಶಾನ ಭೂಮಿಗಳನ್ನು ಅಕ್ರಮ ಖಾತೆ ಮಾಡಲಾಗಿದೆ. ಅಲ್ಲದೆ ನಗರಸಭೆ ಹೊರವಲಯದ ಅರಳುಮಲ್ಲಿಗೆ, ಕೊಡಿಗೇಹಳ್ಳಿ, ಮಜರಾಹೊಸಹಳ್ಳಿ, ದರ್ಗಾಜೋಗಿಹಳ್ಳಿ, ರಾಜಘಟ್ಟ, ಕಂಟನಕುಂಟೆ ಮತ್ತು ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಭೂಮಿಯನ್ನು ಬಡಾವಣೆಗಳನ್ನು ಹಾಗೂ ನೂರಾರು ನಿವೇಶನಗಳನ್ನು ನಗರಸಭೆಯಲ್ಲಿ ಖಾತೆ ಮಾಡಲಾಗಿದೆ. ಹಲವೆಡೆ ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿವೆ. ಈ ಬಗ್ಗೆ ಹಲವು ಬಾರಿ ಗಮನ ಸೆಳೆದಿದ್ದರೂ ಸಂಬಂಧಪಟ್ಟವರು ಗಮನ ಹರಿಸಿಲ್ಲ ಎಂದು ಆರೋಪಿಸಿದ್ದಾರೆ.
ಬಯಾಪ ಅನುಮತಿಯೂ ಇಲ್ಲ: ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಯಾವುದೇ ಖಾತೆ ಒಬ್ಬರ ಹೆಸರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗಬೇಕಿದ್ದರೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಅನುಮತಿ ಮತ್ತು ನಿಯಮಾವಳಿ ಪಾಲನೆ ಅಗತ್ಯವಿದೆ. ಆದರೆ ಯಾವುದೇ ಪೂರ್ವಾನುಮತಿಯೂ ಇಲ್ಲದೆ ಮೀಸಲು ನಿವೇಶನಗಳನ್ನೂ ಕೂಡ ಖಾತೆ ಮಾಡಿ ಅಕ್ರಮವಾಗಿ ಮಾರಾಟ ನಡೆಯುತ್ತಿದೆ. ರೆವಿನ್ಯೂ ನಿವೇಶನಗಳ, ಬಯಾಪ ಅನುಮತಿ ಇಲ್ಲದ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಪರಿವರ್ತನೆಯಾಗದ, ಸರ್ಕಾರಿ ವ್ಯಾಪ್ತಿಯ ಮತ್ತು ನಗರಸಭೆ ಸುತ್ತಮುತ್ತಲ ಕೆಲ ಪಂಚಾಯಿತಿಗಳ ವ್ಯಾಪ್ತಿಯ ಸ್ಥಳಗಳಲ್ಲಿ ಬಡಾವಣೆಗಳನ್ನು ನಿರ್ಮಿಸಿರುವ ಬಗ್ಗೆ ಹಲವು ಅಕ್ರಮಗಳಿಗೆ ಸಂಬಂಧಪಟ್ಟಂತೆ ಪೌರಾಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕ್ರಮ ಕೈಗೊಳ್ಳಿ: ಅಕ್ರಮ ಖಾತೆಗಳಲ್ಲಿ ಪಾಲುದಾರರಾಗಿರುವ ಅಧಿಕಾರಿಗಳು, ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಜನಪ್ರತಿನಿಧಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರಸಭೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಖಾತೆಗಳ ಬಗ್ಗೆ ವ್ಯಾಪಕ ತನಿಖೆ ನಡೆಸಿ ಅಕ್ರಮ ಖಾತೆಗಳನ್ನು ಬೇಷರತ್ ವಜಾ ಮಾಡಬೇಕು. ಈ ಕುರಿತಾಗಿ ಸರ್ಕಾರದ ಹಲವು ಇಲಾಖೆಗಳಿಗೆ ಈಗಾಗಲೇ ಮನವಿ ಪತ್ರಗಳನ್ನು ಕಳುಹಿಸಲಾಗಿದೆ. ರಾಜ್ಯದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವರಿಗೂ ದೂರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.