ಎತ್ತಿನಹೊಳೆ ಕಾಮಗಾರಿ ಜನವರಿಯಲ್ಲಿ ಆರಂಭ
ಬೆಂಗಳೂರು: ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಎದುರಾಗಿದ್ದ ಎಲ್ಲಾ ತೊಡಕುಗಳು ನಿವಾರಣೆಯಾಗಿದ್ದು, ಜನವರಿಯಿಂದಲೇ ಕಾಮಗಾರಿ ಆರಂಭವಾಗುವ ಲಕ್ಷಣಗಳಿವೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಪೂರೈಸುವ ಯೋಜನೆಯಾಗಿರುವ ಎತ್ತಿನಹೊಳೆ ಯೋಜನೆಗೆ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ನಂತರ, ತಕ್ಷಣ ಯೋಜನೆಗೆ ಚಾಲನೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಉದ್ದೇಶಿತ ಯೋಜನೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಿದ್ದು, ತ್ವರಿತ ಕಾರ್ಯಾರಂಭಕ್ಕೆ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ತಮ್ಮ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎತ್ತಿನ ಹೊಳೆ ಯೋಜನೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ತಡ ಮಾಡಬಾರದು. ಇದಕ್ಕೆ ಯಾವುದೇ ಅಡ್ಡಿ ಬಂದರು ಇದನ್ನು ನಿಲ್ಲಿಸಬೇಕಿಲ್ಲ ಎಂದು ಹೇಳಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಗೌರಬಿದನೂರು ಶಾಸಕ ಶಿವಶಂಕರ ರೆಡ್ಡಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಭೆಯಲ್ಲಿ ಯೋಜನೆ ಸಾಧಕ-ಬಾಧಕವನ್ನು ಚರ್ಚಿಸಲಾಯಿತು. ಉದ್ದೇಶಿತ ಯೋಜನೆ ಬಗ್ಗೆ ಈಗಾಗಲೇ ಎರಡು ವರದಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 24ಟಿಎಂಸಿ ನೀರು ಸಿಗುವ ಸಾಧ್ಯತೆ ಕಂಡುಬಂದಿದೆ. ಇದರಲ್ಲಿ ಯಾವುದೇ ನೀರಾವರಿ ಪ್ರಸ್ತಾಪವಿಲ್ಲದೆ ಬರೀ ಕುಡಿಯುವ ನೀರಿನ ಬಳಕೆ ವಿಚಾರವಾಗಿರುವುದರಿಂದ ಇದಕ್ಕೆ ವಿರೋಧವೂ ಬರುವುದಿಲ್ಲ. ಆದ್ದರಿಂದ ಕೂಡಲೇ ಯೋಜನೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗುವಂತೆ ಮಾಡಬೇಕೆಂದು ಸಭೆಯಲ್ಲಿದ್ದ ಸಚಿವರು, ಶಾಸಕರು ಅಭಿಪ್ರಾಯಪಟ್ಟರು. ಇದೇವೇಳೆ ಪರಮಶಿವಯ್ಯ ವರದಿ ಬಗ್ಗೆಯೂ ಚರ್ಚೆ ನಡೆದು ಕುಡಿಯುವ ನೀರಿನ ಬಗ್ಗೆ ವರದಿಯಲ್ಲಿರುವ ಇತರ ಸಾಧ್ಯತೆ ಗಳನ್ನು ಪರಿಶೀಲಿಸಬೇಕೆಂದೂ ಅನೇಕ ಶಾಸಕರು ಸಲಹೆ ನೀಡಿದರು.
ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ, ಎಂ.ವೀರಪ್ಪ ಮೋಯ್ಲಿ, ರಾಜ್ಯ ಸಚಿವರಾದ ಎಂ.ಬಿ.ಪಾಟೀಲ್, ಕೃಷ್ಣಭೈರೇಗೌಡ, ದಿನೇಶ್ಗುಂಡೂರಾವ್, ಟಿ.ಬಿ.ಜಯಚಂದ್ರ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜಿಲ್ಲೆಗಳ ಸಂಸದರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು.