ಕನ್ನಡ ಭಾಷೆ ಉಳಿಸಲು ನಿರಂತರ ಕಾರ್ಯಕ್ರಮ
ಕ.ಪ್ರ.ವಾರ್ತೆ ರಾಮನಗರ ನ.24
ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕವು ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾದುದು ಎಂದು ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಜಾಲಮಂಗಲ ನಾಗರಾಜ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಾಲಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಾರು 3 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಸ್ವಾಭಿಮಾನ ಕಡಿಮೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕನ್ನಡ ಭಾಷೆಯನ್ನು ಪರಿಪೂರ್ಣವಾಗಿ ಅಭ್ಯಸಿಸಬೇಕಾದರೆ ಹಳೆಗನ್ನಡ ಹೊಸಗನ್ನಡದ ಸಾಹಿತ್ಯ ಪ್ರಾಕಾರಗಳನ್ನು ಅಭ್ಯಸಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವಾರು ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸುತ್ತಿದ್ದು, ವಿದ್ಯಾರ್ಥಿಗಳು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರೇರೇಪಣೆ ನೀಡಬೇಕು: ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ನಾಡು, ನುಡಿಯ ಉಳಿವಿಗಾಗಿ ಶ್ರಮಿಸಿದ ಮಹನೀಯರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ಕನ್ನಡ ಮಾಧ್ಯಮದಲ್ಲೇ ಅಧ್ಯಯನ ನಡೆಸುವಂತೆ ಪ್ರೇರೇಪಣೆ
ನೀಡಬೇಕು ಎಂದರು.
ಉನ್ನತ ಸಾಧನೆಗೆ ಭಾಷೆ ತೊಡಕಾಗುವುದಿಲ್ಲ. ಯಾವುದೇ ಭಾಷೆಯನ್ನು ಪರಿಪೂರ್ಣವಾಗಿ ಅಭ್ಯಸಿಸುವುದು ಮುಖ್ಯ. ಮಾತೃಭಾಷೆಯನ್ನೇ ಅಭ್ಯಸಿಸಲು ಸಾಧ್ಯವಿಲ್ಲವೆಂದ ಮೇಲೆ ಅನ್ಯ ಭಾಷೆಗಳಲ್ಲಿ ಹೇಗೆ ಹಿಡಿತ ಸಾಧಿಸಲು ಸಾಧ್ಯ. ಐಎಎಸ್, ಕೆಎಎಸ್ನಂತ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲೇ ಬರೆದು ಉನ್ನತ ಅಧಿಕಾರಿಗಳಾಗಿರುವವರು ನಮ್ಮ ಕಣ್ಣೆದುರೇ ಇದ್ದಾರೆ. ಅವರನ್ನು ನಾವು ಮಾದರಿಯನ್ನಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಹಿತ್ಯ ಸಂಗಮ ಟ್ರಸ್ಟ್ನ ಅಧ್ಯಕ್ಷ ಎಸ್.ನಾಗಭೂಷಣ್, ಶಾಲೆಯ ಮುಖ್ಯೋಪಾಧ್ಯಾಯ ಜಿ.ಶಿವಶಂಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಶಿಕಲಾ, ಶಿಕ್ಷಕರಾದ ಬಿ.ಸಿ.ಸುರೆಂದ್ರ, ನವೀನ್ ಮತ್ತಿತರರು ಭಾಗವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಡಸಿಕೊಟ್ಟರು.
ಶ್ರೇಷ್ಠ ವಿಜ್ಞಾನಿ
ವಿದ್ಯಾರ್ಥಿಗಳು ಮಾತೃ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡಾಗ ಮಾತ್ರ ಕನ್ನಡಕ್ಕೆ ಆಗ್ರಸ್ಥಾನ ದೊರೆಯಲು ಸಾಧ್ಯ. ಸಿ.ಎನ್.ಆರ್.ರಾವ್ ಅವರು ಕನ್ನಡ ಮಾಧ್ಯಮದಲ್ಲೇ ಅಭ್ಯಸಿಸಿ ಪ್ರಪಂಚದಲ್ಲೇ ಶ್ರೇಷ್ಠ ವಿಜ್ಞಾನಿ ಎನಿಸಿಕೊಂಡಿದ್ದಾರೆ. ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿರುವುದು ಕನ್ನಡಿರಾದ ನಮಗೆ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಹೇಳಿದರು.
ವಿಷಾದ
ಇಂದಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮೊಬೈಲ್, ಮದ್ಯ, ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡುಕೊಳ್ಳುತ್ತಿದ್ದಾರೆ. ದೂರದರ್ಶನ ಹಾಗೂ ಚಲನಚಿತ್ರಗಳು ಕೂಡ ಯುವಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.