ಟ್ರಾಫಿಕ್ ಕಿರಿಕಿರಿಯಿಂದ ನಿತ್ಯ ನರಕ
-ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರಸ್ತೆಗಳಲ್ಲಿ ಓಡಾಡುವುದೆಂದರೆ ಅದು ನರಕಸದೃಶ ಅನುಭವ. ಟ್ರಾಫಿಕ್ ಜಾಮ್‌ನಿಂದ ಪರಿತಪಿಸುವ ಅನಿವಾರ್ಯತೆ. ನಗರದ ಒಳಭಾಗದ ಕಿರಿದಾದ ರಸ್ತೆಗಳಿಂದ ಹಿಡಿದು ರಾಜ್ಯ-ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇದೇ ಸಮಸ್ಯೆ ಕಾಡುತ್ತಿದೆ. ಇಷ್ಟಾದರೂ ಈ ಊರಿನಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇಲ್ಲ. ಕೆಲವು ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ದೀಪಗಳು ಇದ್ದೂ ಇಲ್ಲದಾಗಿವೆ.
ದೊಡ್ಡಬಳ್ಳಾಪುರ ನಗರದ ರೈಲು ನಿಲ್ದಾಣ ವೃತ್ತ (ವಿ.ಕೃ.ಗೋಕಾಕ ವೃತ್ತ)ದಲ್ಲಂತೂ ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಯಾಣಿಕರಿಗೆ, ವಾಹನಸವಾರರಿಗೆ ಸಂಕಷ್ಟ ತಪ್ಪಿದ್ದಲ್ಲ. ಬೆಂಗಳೂರು-ಹಿಂದೂಪುರ ಮುಖ್ಯರಸ್ತೆಯಲ್ಲಿ ಬರುವ ಈ ಪ್ರಮುಖ ವೃತ್ತದ ಮೂಲಕವೇ ಹಿಂದೂಪುರ, ಗೌರಿಬಿದನೂರು ಮತ್ತು ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಕಡೆ ಹೋಗುವ ಎಲ್ಲ ವಾಹನಗಳೂ ಸಂಚರಿಸಬೇಕು. ಸ್ಥಳೀಯ ಅಪೆರಲ್ ಪಾರ್ಕ್ ಮತ್ತು ಜವಳಿಪಾರ್ಕ್, ಕೈಗಾರಿಕಾ ಪ್ರದೇಶದ ನೂರಾರು ಕಾರ್ಖಾನೆಗಳಿಗೆ ತೆರಳುವ ನೂರಾರು ವಾಹನಗಳಿಗೆ ಇದೇ ರಾಜಮಾರ್ಗ. ಅಲ್ಲದೆ ದೇವನಹಳ್ಳಿಯಿಂದ ರಘುನಾಥಪುರ ಮಾರ್ಗವಾಗಿ ಬರುವ ವಾಹನಗಳೂ ಈ ವೃತ್ತವನ್ನು ಬಳಸಿಕೊಂಡೇ ಹೋಗಬೇಕು. ತೀರಾ ಜನದಟ್ಟಣೆ ಇರುವ ಈ ಪ್ರದೇಶದಲ್ಲಿ ಇತ್ತೀಚೆಗೆ ದಿನನಿತ್ಯ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.
ಸಿಗ್ನಲ್ ದೀಪ ಇಲ್ಲ: ಇಷ್ಟು ಒತ್ತಡ ಮತ್ತು ವಾಹನ ದಟ್ಟಣೆ ಇರುವ ಈ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ದೀಪ ಕೂಡ ಇಲ್ಲ. ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರು ಕೂಡ ಸದಾ ಕಾಲ ಅಲ್ಲಿರುವುದಿಲ್ಲ. ಪರಿಣಾಮವಾಗಿ ಟ್ರಾಫಿಕ್ ನಿಯಂತ್ರಣ ಕಷ್ಟಸಾಧ್ಯವಾಗಿ ಪರಿಣಮಿಸಿದೆ. 4 ಪ್ರಮುಖ ರಸ್ತೆಗಳಿಂದ ವಾಹನಗಳು ಈ ವೃತ್ತಕ್ಕೆ ಬಂದು-ಹೋಗುತ್ತವೆ. ಬಹುಮುಖ್ಯವಾಗಿ ಸಂಜೆ 5 ಗಂಟೆ ನಂತರ ಮತ್ತು ಬೆಳಗ್ಗೆ 10 ಗಂಟೆಯವರೆಗೆ ಸಂಚಾರ ದಟ್ಟಣೆ ಹೆಚ್ಚಿರುತ್ತದೆ.
ಅಡ್ಡಾದಿಡ್ಡಿ ವಾಹನ ಚಾಲನೆ, ಮಿತಿಮೀರಿದ ವೇಗದ ಚಾಲನೆ ಹಾಗೂ ಟ್ರಾಫಿಕ್ ನಿಯಮಗಳ ಉಲ್ಲಂಘನೆ ನಿತ್ಯ ನಡೆಯುತ್ತಿದ್ದರೂ ಕೇಳುವವರಿಲ್ಲದಾಗಿದೆ. ಕನಿಷ್ಠ ವೇಗತಡೆ ರಸ್ತೆ ಉಬ್ಬುಗಳಾಗಲೀ, ವೇಗನಿಯಂತ್ರಕ ಬ್ಯಾರೀಕೆಡ್‌ಗಳಾಗಲೀ ಇಲ್ಲ. ಸಂಚಾರಿ ನಿಯಮ ಪಾಲನೆಗೆ ಸೂಕ್ತ ಮಾರ್ಗದರ್ಶನ ನೀಡುವ ಸೂಚನಾ ಫಲಕಗಳೂ ಇಲ್ಲ. ಪರಿಣಾಮವಾಗಿ ಹಲವು ಅಪಘಾತಗಳು ನಡೆದಿವೆ. ದಿನಕ್ಕೆ ಒಂದೆರಡಾದರೂ ಅಪಘಾತಗಳು ನಡೆಯದೇ ಇರುವುದಿಲ್ಲ. ವಾಣಿಜ್ಯ ಮಳಿಗೆಗಳು, ಬ್ಯಾಂಕುಗಳು, ಹೊಟೇಲ್‌ಗಳು, ರೈಲು ನಿಲ್ದಾಣ, ಬಸ್ ತಂಗುದಾಣಗಳೆಲ್ಲವೂ ಈ ಪ್ರದೇಶದಲ್ಲಿರುವುದರಿಂದ ಸಾವಿರಾರು ಜನ ತೊಂದರೆ ಅನುಭವಿಸುವಂತಾಗಿದೆ.
ಕೆಲಸಕ್ಕೆ ಬಾರದ ಸಿಗ್ನಲ್ ದೀಪ: ಇನ್ನು ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿ ಸಿಗ್ನಲ್ ದೀಪ ಅಳವಡಿಸಿದ್ದರೂ ಪ್ರಯೋಜನವಿಲ್ಲ. ಕಾರಣ ಅದು ಚಾಲನೆಯಲ್ಲಿಲ್ಲ. ಲಕ್ಷಗಟ್ಟಲೆ ವೆಚ್ಚ ಮಾಡಿ ಹಾಕಿದ ಸಿಗ್ನಲ್ ದೀಪ 1 ದಿನಕ್ಕೂ ಸಾರ್ವಜನಿಕರ ಬಳಕೆಗೆ ಬಂದೇ ಇಲ್ಲ. ಡಿಕ್ರಾಸ್ ವೃತ್ತದಲ್ಲಿ ಸಿಗ್ನಲ್ ದೀಪಗಳ ಅಳವಡಿಕೆ ವ್ಯವಸ್ಥಿತವಾಗಿ ನಡೆದೇ ಇಲ್ಲ. ಈ ಎರಡೂ ವೃತ್ತಗಳೂ ರಾಷ್ಟ್ರೀಯ ಹೆದ್ದಾರಿ 207ರಲ್ಲಿದ್ದು ದಿನನಿತ್ಯ ವಾಹನದಟ್ಟಣೆ ಇರುವ ಪ್ರದೇಶಗಳು. ಅಲ್ಲದೆ ಕಚೇರಿ ಅವಧಿಯಲ್ಲಂತೂ ಟ್ರಾಫಿಕ್ ನಿಯಂತ್ರಣ ಕಷ್ಟಸಾಧ್ಯವಾಗಿ ಪರಿಣಮಿಸಿದೆ.
ಅಂಬ್ಯುಲೆನ್ಸ್‌ಗಳಿಗೂ ತೊಂದರೆ: ಟ್ರಾಫಿಕ್ ಸಮಸ್ಯೆ ಪ್ರಯಾಣಿಕರಿಗೆ ಕಿರಿಕಿರಿ ತಂದೊಡ್ಡಿದ್ದರೆ, ಅಂಬ್ಯುಲೆನ್ಸ್‌ಗಳಿಗೂ ಬಿಡದೆ ಕಾಡುತ್ತಿದೆ. ಇಲ್ಲಿನ ಹತ್ತಾರು ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ಪಕ್ಕದ ಗೌರಿಬಿದನೂರು ಕಡೆಗಳಿಂದ ಬರುವ ಆಂಬ್ಯುಲೆನ್ಸ್‌ಗಳೂ ಟ್ರಾಫಿಕ್‌ನಲ್ಲಿ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಇದು ಕೆಲವರ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ. ಇನ್ನು ಸೌಂದರ್ಯಮಹಲ್ ವೃತ್ತ, ಮುಕ್ತಾಂಬಿಕಾ ವೃತ್ತ, ಮುಗವಾಳಪ್ಪ ವೃತ್ತ, ತಾಲೂಕು ಕಚೇರಿ ವೃತ್ತಗಳಲ್ಲಿ ಕೂಡಲೇ ಟ್ರಾಫಿಕ್ ದೀಪ ಅಳವಡಿಸಬೇಕು ಎಂಬುದು ಜನರ ಆಗ್ರಹ.
ಕಣ್ತೆರೆದು ನೋಡಿ ಸ್ವಾಮಿ: ನಗರವನ್ನು ಅಭಿವೃದ್ಧಿ ಮಾಡುವ ಮಾತುಗಳಲ್ಲೆ ಸದಾ ಕಾಲ ಕಳೆಯುವ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು ಇತ್ತ ಗಮನ ಹರಿಸಬೇಕಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಭರವಸೆ ಕೊಡುವ ಜನ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕಿದೆ.