ಶೌಚಾಲಯ ಕಾಮಗಾರಿಗೆ ಗುದ್ದಲಿ ಪೂಜೆ
ರಾಮನಗರ: ಜಿಲ್ಲಾ ಪಂಚಾಯಿತಿಯಿಂದ ನಡೆಯುವ ಜಿಲ್ಲಾ ಮಟ್ಟದ ಸ್ವಚ್ಛತಾ ಉತ್ಸವದ ಅಂಗವಾಗಿ ನ.25ರ ಮಧ್ಯಾಹ್ನ 12.30ಕ್ಕೆ ತಾಲೂಕಿನ ಹುಲಿಕೆರೆ ಗುನ್ನೂರು ಪಂಚಾಯಿತಿ ವ್ಯಾಪ್ತಿಯ ಕೆ.ಜಿ. ಹೊಸಹಳ್ಳಿ ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ಜಿ.ಪಂ. ಅಧ್ಯಕ್ಷ ಎಚ್.ಸಿ.ರಾಜು ಗುದ್ದಲಿ ಪೂಜೆ ನೆರವೇರಿಸುವರು. ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ಭಾಗವಹಿಸುವರು.
ಮೊಬೈಲ್, ಡೆಬಿಟ್ ಕಾರ್ಡ್ ದೋಚಿ ಪರಾರಿ
ರಾಮನಗರ: ಮೊಪೆಡ್‌ನಲ್ಲಿ ಚಲಿಸುತ್ತಿದ್ದವರನ್ನು ಅಡ್ಡಗಟ್ಟಿ, ಅವರ ಬಳಿಯಿದ್ದ ಬೆಲೆ ಬಾಳುವ ಮೊಬೈಲ್ ಹಾಗೂ ಡೆಬಿಟ್ ಕಾರ್ಡ್ ದೋಚಿ ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕನಕಪುರದ ಕೆಎಸ್‌ಐ ಕಾಲೇಜು ವಿದ್ಯಾರ್ಥಿಗಳಾದ ಸ್ನೇಹಲ್ ಜೆಟ್ಟಿ, ಸುಹಾಸ್ ಜಾವ್ ಮತ್ತು ಬರಾನ್ವುದ್ದೀನ್ ಶಾಮಿನಿ ಅವರು ಶನಿವಾರ ಸಂಜೆ 5ರ ಸುಮಾರಿಗೆ ಕನಕಪುರ ರಸ್ತೆಯ ಉತ್ತರಹಳ್ಳಿ ಹೋಬಳಿ ಕರಿಷ್ಮ ಹಿಲ್ಸ್ ಬಳಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಪಲ್ಸರ್ ಬೈಕ್‌ನಲ್ಲಿ ಬಂದ 3 ಮಂದಿ ಅಪರಿಚಿತರು ಮೊಪೆಡ್ ಅಡ್ಡಗಟ್ಟಿ, ಇವರ ಬಳಿ ಇದ್ದ 3 ಬೆಲೆ ಬಾಳುವ ಮೊಬೈಲ್ ಹಾಗೂ ಡೆಬಿಟ್ ಕಾರ್ಡ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಟ್ಟೆ ನೋವು; ಗೃಹಿಣಿ ಆತ್ಮಹತ್ಯೆ
ರಾಮನಗರ: ಹೊಟ್ಟೆ ನೋವು ತಾಳಲಾರದೆ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಲ್ಲೇಶ್ವರ ಬಡಾವಣೆಯಲ್ಲಿ ಭಾನುವಾರ ನಡೆದಿದೆ. ಮಲ್ಲೇಶ್ವರ ಬಡಾವಣೆಯ ನಿವಾಸಿ ಪ್ರೇಮ (38) ಮೃತರು. ಈಕೆಗೆ ಕೆಲ ತಿಂಗಳುಗಳಿಂದ ಹೊಟ್ಟೆ ನೋವು ಬರುತ್ತಿತ್ತು. ಇದರಿಂದ ನೊಂದ ಪ್ರೇಮ ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಸಂಬಂಧಿಕರು ಶೋಕದ ನಡುವೆಯೂ ಮೃತ ಪ್ರೇಮ ಅವರ ನೇತ್ರಗಳನ್ನು ಬಿಡದಿಯ ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿದ್ದಾರೆ. ್ಙ
ಅಕ್ರಮಗಳ ವಿರುದ್ಧ ಪ್ರತಿಭಟನೆ ಇಂದು
ದೊಡ್ಡಬಳ್ಳಾಪುರ: ಇಲ್ಲಿನ ಕರ್ನಾಟಕ ರಾಜ್ಯ ಪ್ರಜಾ ವಿಮೋಚನಾ ಸಮಿತಿ ನೇತೃತ್ವದಲ್ಲಿ ದಲಿತರ ಜಮೀನುಗಳ ಕಬಳಿಕೆ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹಿಸಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತಾಯಿಸಿ ತಾಲೂಕಿನ ರಘುನಾಥಪುರದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11.30ಕ್ಕೆ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.