ಗಣಿ ಉದ್ಯಮಿ ಕಾಂತರಾಜು ಮನೆ ಮೇಲೆ ಐಟಿ ದಾಳಿ
ಕ.ಪ್ರ. ವಾರ್ತೆ ಕನಕಪುರ ನ. 25
ಗಣಿ ಉದ್ಯಮಿ ಕಾಂತರಾಜು ಎಂಬುವವರ ಮನೆ ಮೇಲೆ ಆದಾಯ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
ಬೆಳಿಗ್ಗೆ ತಾಲೂಕಿನ ಹೂಕುಂದ ಗ್ರಾಮದಲ್ಲಿನ ಕಾಂತರಾಜು ನಿವಾಸಕ್ಕೆ ತೆರಳಿದ ಐಟಿ ಅಧಿಕಾರಿ ನರೇಂದ್ರನಾಯ್ಕ ನೇತೃತ್ವದ 15 ಜನರ ತಂಡ ಮನೆಯಲ್ಲಿನ ದಾಖಲೆಗಳನ್ನು ವಿವರವಾಗಿ ಪರಿಶೀಲಿಸಿತು. ತಂಡದಲ್ಲಿ ಒಬ್ಬ ಮಹಿಳಾ ಅಧಿಕಾರಿಯೂ ಇದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ತಪಾಸಣೆ ನಡೆಸಿದ ತಂಡಕ್ಕೆ ದಾಳಿಯಲ್ಲಿ ಯಾವುದೇ ಮಹತ್ವದ ದಾಖಲೆಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಅಧಿಕಾರಿಗಳು ದಾಳಿಯ ಹಿನ್ನಲೆ ಹಾಗೂ ಇತರೆ ವಿವರಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದ್ದಾರೆ. ಸಚಿವ ಸಂತೋಷ್ಲಾಡ್ ರಾಜಿನಾಮೆ ಬೆನ್ನಹಿಂದೆಯೇ ನಡೆದಿರುವ ಆದಾಯತೆರಿಗೆ ದಾಳಿ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು ವ್ಯಾಪಕ ಚರ್ಚೆ ನಡೆಯುತ್ತಿದೆ. ಇವರು ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ರ ಸಂಬಂಧಿಯಾಗಿದ್ದರು.